ADVERTISEMENT

ರಫ್ತು ಉತ್ತೇಜಿಸಲು ದೀಪಾವಳಿ ಕೊಡುಗೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 19:30 IST
Last Updated 13 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ): ಪಾಶ್ಚಿಮಾತ್ಯ ದೇಶಗಳಲ್ಲಿನ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶಿ ರಫ್ತು ವಹಿವಾಟು ಉತ್ತೇಜನ ನೀಡಲು ಕೇಂದ್ರ ಸರ್ಕಾರವು  ಒಟ್ಟು ರೂ.1,700 ಕೋಟಿಗಳಷ್ಟು ಮೊತ್ತದ ಉತ್ತೇಜನಾ ಕೊಡುಗೆ ಪ್ರಕಟಿಸಿದೆ.

ಅಮೆರಿಕ ಮತ್ತು ಯೂರೋಪ್ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಿರುವ ಕಾರಣಕ್ಕೆ ರಫ್ತು ವಹಿವಾಟನ್ನು ಇತರ ದೇಶಗಳಲ್ಲಿ ವಿಸ್ತರಿಸುವುದನ್ನು ಉತ್ತೇಜಿಸಲು ಈ ಕೊಡುಗೆ ಘೋಷಿಸಲಾಗಿದೆ.

ಈ `ದೀಪಾವಳಿ ಕೊಡುಗೆ~ಯಲ್ಲಿ ರೂ.900 ಕೋಟಿಗಳಷ್ಟು ಮೊತ್ತದ ಉತ್ತೇಜನಾ ಕೊಡುಗೆ ಮತ್ತು  ಬಡ್ಡಿ ರಿಯಾಯ್ತಿ ರೂಪದಲ್ಲಿನ ರೂ.800 ರಿಂದ ರೂ.1000 ಕೋಟಿಗಳ ಪರಿಹಾರ ಸೇರಿದಂತೆ ಒಟ್ಟಾರೆ ರೂ.1,700 ಕೋಟಿಗಳ ನೆರವು ಒಳಗೊಂಡಿದೆ.

ಭಾರಿ ಯಂತ್ರೋಪಕರಣ, ಔಷಧಿ ಮತ್ತು ರಾಸಾಯನಿಕ ಉತ್ಪನ್ನಗಳ ರಫ್ತುದಾರರಿಗೆ ಇದರಿಂದ ಹೆಚ್ಚಿನ ಪ್ರಯೋಜನ ಆಗಲಿದೆ. ಲ್ಯಾಟಿನ್ ಅಮೆರಿಕ, ಆಫ್ರಿಕಾ ಮತ್ತು ಸ್ವತಂತ್ರ ಕಾಮನ್‌ವೆಲ್ತ್‌ದೇಶಗಳಲ್ಲಿ (ಸಿಐಎಸ್) ಮಾರುಕಟ್ಟೆ ವಿಸ್ತರಣೆಗೆ ಮುಂದಾಗುವ ರಫ್ತುದಾರರಿಗೆ ಇದರ ಲಾಭ ದೊರೆಯಲಿದೆ.
 
ಈ ಉತ್ತೇಜನಾ ಕ್ರಮಗಳನ್ನು  ವಾರ್ಷಿಕ ಪೂರಕ ಕ್ರಮಗಳ ರೂಪದಲ್ಲಿ ವಿದೇಶ ವ್ಯಾಪಾರ ನೀತಿಯಲ್ಲಿ ಅಳವಡಿಸಲಾಗುವುದು ಎಂದು ವಾಣಿಜ್ಯ ಸಚಿವ ಆನಂದ್ ಶರ್ಮಾ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಈಗಾಗಲೇ  ಗುಡಿ ಕೈಗಾರಿಕೆ, ಕೈಮಗ್ಗ, ರತ್ನಗಂಬಳಿ ಮತ್ತು ಸಣ್ಣ - ಮಧ್ಯಮ ರಫ್ತುದಾರರಿಗೆ ಶೇ 2ರಷ್ಟು ಬಡ್ಡಿ ಸಬ್ಸಿಡಿ ಪ್ರಕಟಿಸಿದೆ.

ಇಷ್ಟು ದೊಡ್ಡ ಪ್ರಮಾಣದಲ್ಲಿ ಸರ್ಕಾರದಿಂದ ಕೊಡುಗೆ ನಿರೀಕ್ಷಿಸಿರಲಿಲ್ಲ. ಇದೊಂದು ನಿಜಕ್ಕೂ ದೀಪಾವಳಿ ಕೊಡುಗೆಯಾಗಿದೆ ಎಂದು ಭಾರತೀಯ ರಫ್ತು ಸಂಘಟನೆಗಳ ಒಕ್ಕೂಟದ (ಎಫ್‌ಐಇಒ) ಅಧ್ಯಕ್ಷ ರಾಮು ಎಸ್. ದೇವ್ರಾ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.