ADVERTISEMENT

ರಫ್ತು: 3 ತಿಂಗಳ ಹಿಂದಿನ ಮಟ್ಟಕ್ಕೆ ಕುಸಿತ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2012, 19:30 IST
Last Updated 6 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ): ಜಾಗತಿಕ ಆರ್ಥಿಕ ಅಸ್ಥಿರತೆ ಮತ್ತು ಯೂರೋಪ್ ಒಕ್ಕೂಟದ ಬಿಕ್ಕಟ್ಟಿನಿಂದ ದೇಶದ ರಫ್ತು ವಹಿವಾಟು ಫೆಬ್ರುವರಿ ತಿಂಗಳಲ್ಲಿ ಶೇ 4.2ರಷ್ಟು ಪ್ರಗತಿ ಕಂಡಿದ್ದು, ಮತ್ತೆ ಮೂರು ತಿಂಗಳ ಹಿಂದಿನ ಮಟ್ಟಕ್ಕೆ ಕುಸಿದಿದೆ.

ಈ ಅವಧಿಯಲ್ಲಿ ಒಟ್ಟು ರೂ12 ಲಕ್ಷ ಕೋಟಿಗಳಷ್ಟು ರಫ್ತು ವಹಿವಾಟು ದಾಖಲಾಗಿದೆ. ಆಮದು  ಶೇ 20ರಷ್ಟು ಪ್ರಗತಿ ಕಂಡಿದ್ದು,  ರೂ19 ಲಕ್ಷ ಕೋಟಿಗಳಿಗೆ ಏರಿದೆ. ದೇಶದ ವಿತ್ತೀಯ ಕೊರತೆಯು ಫೆಬ್ರುವರಿ ತಿಂಗಳಲ್ಲಿ ರೂ7.5 ಲಕ್ಷ ಕೋಟಿಗಳಷ್ಟಾಗಿದೆ ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ.

ಕಳೆದ ಜುಲೈನಲ್ಲಿ ರಫ್ತು ವಹಿವಾಟು ದಾಖಲೆ ಮಟ್ಟವಾದ ಶೇ 82ರಷ್ಟು ಪ್ರಗತಿ ದಾಖಲಿಸಿತ್ತು. ನಂತರ ಆಗಸ್ಟ್‌ನಲ್ಲಿ ಶೇ 44ಕ್ಕೆ ಕುಸಿದಿತ್ತು. ಸೆಪ್ಟೆಂಬರ್‌ನಲ್ಲಿ ಶೇ 36ಕ್ಕೆ ಇಳಿದಿತ್ತು. ಅಕ್ಟೋಬರ್‌ನಲ್ಲಿ ಮತ್ತೆ ಶೇ 10ಕ್ಕೆ, ನವೆಂಬರ್‌ನಲ್ಲಿ ಶೇ 3ಕ್ಕೆ ಕುಸಿತ ಕಂಡಿತ್ತು. ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಮತ್ತೆ ಕ್ರಮವಾಗಿ ಶೇ 6 ಮತ್ತು ಶೇ 10ರಷ್ಟು ಪ್ರಗತಿ ದಾಖಲಿಸಿತ್ತು. ಫೆಬ್ರುವರಿಯಲ್ಲಿ ಮತ್ತೆ ಕುಸಿತ ಕಂಡಿದೆ.

ಏಪ್ರಿಲ್‌ನಿಂದ ಫೆಬ್ರುವರಿ ಅವಧಿಯಲ್ಲಿ ಒಟ್ಟು ರೂ133 ಲಕ್ಷ  ಕೋಟಿಗಳಷ್ಟು ರಫ್ತು ವಹಿವಾಟು ನಡೆದಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 21ರಷ್ಟು ಪ್ರಗತಿ ಕಂಡಿದೆ. ಹಣಕಾಸು ವರ್ಷದ ಅಂತ್ಯಕ್ಕೆ ರಫ್ತು ವಹಿವಾಟು ರೂ145 ಲಕ್ಷ ಕೋಟಿ ಗುರಿಯನ್ನು ದಾಟಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.

`ಹಣಕಾಸು ವರ್ಷದ ಅಂತ್ಯಕ್ಕೆ ಒಟ್ಟು ರೂ150 ಲಕ್ಷ ಕೋಟಿ ರಫ್ತು ವಹಿವಾಟು ಗುರಿ ಇಟ್ಟುಕೊಂಡಿದ್ದೆವು. ಆದರೆ, ಅಮೆರಿಕ ಮತ್ತು ಯೂರೋಪ್ ಆರ್ಥಿಕ ಬಿಕ್ಕಟ್ಟಿನಿಂದ ವಹಿವಾಟಿಗೆ ಹಿನ್ನಡೆ ಉಂಟಾಗಿದೆ. ಲ್ಯಾಟಿನ್ ಅಮೆರಿಕ ಮತ್ತು ಆಫ್ರಿಕಾ ದೇಶಗಳಿಂದ ಸರಕುಗಳಿಗೆ ಬೇಡಿಕೆ ಕುಸಿದಿದೆ~ ಎಂದು ವಾಣಿಜ್ಯ ಕಾರ್ಯದರ್ಶಿ ರಾಹುಲ್ ಖುಲ್ಲರ್ ಹೇಳಿದ್ದಾರೆ.

ಆದರೆ, ಒಟ್ಟಾರೆ ರಫ್ತು ವಹಿವಾಟು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 20ರಷ್ಟು ಪ್ರಗತಿ ಕಂಡಿದೆ ಎಂದು ಭಾರತೀಯ ರಫ್ತು  ಒಕ್ಕೂಟದ  (ಎಫ್‌ಐಇಒ) ಅಧ್ಯಕ್ಷ  ರಫೀಕ್ ಅಹಮ್ಮದ್ ಹೇಳಿದ್ದಾರೆ.ಕಳೆದ 11 ತಿಂಗಳ ಅವಧಿಯಲ್ಲಿ ಆಮದು ಶೇ 29ರಷ್ಟು ಪ್ರಗತಿ ಕಂಡಿದ್ದು, ಒಟ್ಟು ರೂ217 ಲಕ್ಷ ಕೋಟಿ ವಹಿವಾಟು ದಾಖಲಾಗಿದೆ. ಈ ಅವಧಿಯಲ್ಲಿ ವ್ಯಾಪಾರ ಕೊರತೆಯು ರೂ83 ಲಕ್ಷ ಕೋಟಿಗೆ ಏರಿಕೆ ಕಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.