ADVERTISEMENT

ರಸ್ತೆಗೆ ಮಾವು ಸುರಿದು ರೈತರ ಆಕ್ರೋಶ

* ಬೀದಿಗೆ ಬಿದ್ದ ಮಾವು ಬೆಳೆಗಾರರ ಬದುಕು * ಕಸದ ಗೂಡಾದ ಎಪಿಎಂಸಿ

ಆರ್.ಜಿತೇಂದ್ರ
Published 1 ಜೂನ್ 2018, 19:30 IST
Last Updated 1 ಜೂನ್ 2018, 19:30 IST
ರಸ್ತೆಯಲ್ಲಿ ಮಾವು ಸುರಿದಿರುವುದು
ರಸ್ತೆಯಲ್ಲಿ ಮಾವು ಸುರಿದಿರುವುದು   

ರಾಮನಗರ: ಮಾವು ಬೆಳೆಗಾರರ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ. ಬೆಲೆ ತೀವ್ರ ಕುಸಿತ ಕಂಡಿದ್ದು, ಆಕ್ರೋಶಗೊಂಡ ರೈತರು ಟನ್‌ಗಟ್ಟಲೆ ಹಣ್ಣನ್ನು ರಸ್ತೆ, ಚರಂಡಿಗೆ ಚೆಲ್ಲುತ್ತಿದ್ದಾರೆ.

ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯು ಸದ್ಯ ಕಸದ ಗೂಡಾಗಿದ್ದು, ಎಲ್ಲೆಲ್ಲಿಯೂ ಕೊಳೆತ ಮಾವಿನ ಹಣ್ಣುಗಳೇ ಬಿದ್ದಿವೆ. ಉತ್ಪನ್ನವನ್ನು ಕೊಂಡುಕೊಳ್ಳುವವರೇ ಇಲ್ಲವಾಗಿದ್ದಾರೆ. ಬೆಲೆ ಕೇಳಿ ಹೌಹಾರುತ್ತಿರುವ ಬೆಳೆಗಾರರು ಕಣ್ಣೀರಿನಿಂದ, ಸಿಟ್ಟು, ನಿರಾಸೆಯಿಂದ ಮಾವಿನ ಕಾಯಿಯನ್ನು ಬಿಸಾಡುವ ದೃಶ್ಯ ಸಾಮಾನ್ಯವಾಗಿದೆ.

ಕಳೆದ ವರ್ಷ ಉತ್ತಮ ಮಳೆಯಾದ ಕಾರಣ ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ಮಾವು ಮಾರುಕಟ್ಟೆಗೆ ಬರುತ್ತಿದೆ. ಆರಂಭದಲ್ಲಿ ಪ್ರತಿ ಕೆ.ಜಿ.ಗೆ ₹100ರವರೆಗೆ ಇದ್ದದ್ದು, ಈಗ ಪ್ರತಿ ಕೆ.ಜಿ.ಗೆ ₹4–5ರಂತೆ ಮಾರಾಟವಾಗುತ್ತಿದೆ. ಬಾದಾಮಿ ದರ ಕೆ.ಜಿ.ಗೆ ₹10–12ಕ್ಕೆ ಇಳಿದಿದೆ. ಸೇಂದೂರ, ರಸಪುರಿ, ನೀಲಂ ಮೊದಲಾದ ತಳಿಯ ಹಣ್ಣುಗಳನ್ನು ಕೇಳುವವರೇ ಇಲ್ಲದಾಗಿದೆ.

ADVERTISEMENT

ರಾಮನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ (ಎಪಿಎಂಸಿ) ಶುಕ್ರವಾರ 240 ಕ್ವಿಂಟಲ್‌ನಷ್ಟು ಬಾದಾಮಿ ಮಾವು ಬಂದಿದ್ದು, ಕ್ವಿಂಟಲ್‌ಗೆ ₹900–1,000 ದರದಲ್ಲಿ ಮಾರಾಟವಾಯಿತು. ಇತರೆ ತಳಿಯ ಮಾವು 740 ಕ್ವಿಂಟಲ್‌ನಷ್ಟು ಆವಕವಾಗಿದ್ದು, ಕ್ವಿಂಟಲ್‌ಗೆ ₹500–600 ದರದಲ್ಲಿ ಮಾರಾಟ ನಡೆಯಿತು. ಇದು ಟೊಮೆಟೊ ದರಕ್ಕಿಂತ ಕಡಿಮೆಯಾಗಿದೆ.

ಕಾರಣವೇನು?: ‘ಮಾವಿನ ದರ ಕುಸಿತಕ್ಕೆ ಹತ್ತು ಹಲವು ಕಾರಣಗಳಿವೆ. ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ಉತ್ಪನ್ನ ಬಂದಿದೆ. ಆದರೆ ಮುಕ್ತ ಮಾರುಕಟ್ಟೆಯಲ್ಲಿ ಗ್ರಾಹಕರಿಂದ ಬೇಡಿಕೆ ಕುಸಿಯುತ್ತಿದೆ. ಇಲ್ಲಿ ಬೆಳೆದ ಹೆಚ್ಚಿನ ಪ್ರಮಾಣದ ಹಣ್ಣನ್ನು ಹೊರ ರಾಜ್ಯಗಳಲ್ಲಿನ ಹಣ್ಣಿನ ರಸ ತಯಾರಿಕೆ ಕಾರ್ಖಾನೆಗಳಿಗೆ ಕೊಂಡೊಯ್ಯಲಾಗುತ್ತಿತ್ತು. ಈ ಮೊದಲು ಹಣ್ಣು–ಕಾಯಿ ಎನ್ನದೆ ಕೈಗೆ ಸಿಕ್ಕಿದ್ದನ್ನು ಕೊಂಡುಕೊಳ್ಳುತ್ತಿದ್ದ ಈ ಕಾರ್ಖಾನೆಗಳು ಈಗ ಹತ್ತು ಹಲವು ಷರತ್ತು ವಿಧಿಸುತ್ತಿವೆ. ಲಾರಿಗಳಲ್ಲಿ ತುಂಬಿ ಕಳುಹಿಸುತ್ತಿದ್ದ ಉತ್ಪನ್ನ ವಾಪಸ್ ಬರುತ್ತಿದೆ. ಹೀಗಾಗಿ ಮಧ್ಯವರ್ತಿಗಳು ರೈತರಿಂದ ಮಾವು ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಬೆಲೆ ಕುಸಿತಕ್ಕೆ ಇದು ಪ್ರಮುಖ ಕಾರಣವಾಗಿದೆ’ ಎಂದು ರಾಮನಗರ ಎಪಿಎಂಸಿ ವರ್ತಕ ಸಂಶುದ್ದೀನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿಫಾ ವೈರಸ್ ಹರಡುವ ವದಂತಿಯಿಂದಾಗಿ ಜನರು ಮಾರುಕಟ್ಟೆಯಲ್ಲಿ ಹಣ್ಣನ್ನು ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಜೊತೆಗೆ ಕೋಲಾರ ಭಾಗದಲ್ಲೂ ಈಗ ಮಾವಿನ ಸುಗ್ಗಿ ಆರಂಭವಾಗಿರುವ ಕಾರಣ ಸಹಜವಾಗಿಯೇ ಇಲ್ಲಿ ಬೆಲೆ ಕುಸಿದಿದೆ’ ಎಂದು ಎಪಿಎಂಸಿಯ ವರ್ತಕರು ತಿಳಿಸಿದ್ದಾರೆ.

‘ಮೇ ತಿಂಗಳಲ್ಲಿ ಸತತ ಮಳೆಯಿಂದಾಗಿ ಉತ್ಪನ್ನಕ್ಕೆ ಹೊಡೆತ ಬಿದ್ದಿದೆ. ಕಾಯಿಗಳು ಅಲ್ಲಲ್ಲಿ ಕಪ್ಪಾಗುತ್ತಿವೆ. ಜೊತೆಗೆ ಕೀಟಬಾಧೆಯೂ ಹೆಚ್ಚಾಗುತ್ತಿದೆ. ಈ ಎಲ್ಲ ಕಾರಣ ನೀಡಿ ಎಪಿಎಂಸಿಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಕಾಯಿ ಕೇಳುತ್ತಿದ್ದಾರೆ. ಇದರಿಂದ ದಿಕ್ಕೇ ತೋಚದಂತಾಗಿದೆ’ ಎಂದು ಕೃಷಿ ಮಾರುಕಟ್ಟೆಗೆ ಬಂದಿದ್ದ ಮಾವು ಬೆಳೆಗಾರರು ಅಳಲು ತೋಡಿಕೊಂಡರು.

ತೋಟಗಳಲ್ಲೇ ಉಳಿದ ಉತ್ಪನ್ನ
ಮಾವು ಬೆಲೆ ಕುಸಿತದಿಂದ ಕಂಗೆಟ್ಟಿರುವ ಸಾಕಷ್ಟು ರೈತರು ಕೊಯ್ಲು ಪ್ರಕ್ರಿಯೆ ನಿಲ್ಲಿಸಿದ್ದು, ಮರಗಳಲ್ಲೇ ಕಾಯಿಗಳು ಮಾಗುತ್ತಿವೆ. ‘ಮಾವಿನ ಕೊಯ್ಲಿಗೆ ಬರುವ ಕಾರ್ಮಿಕರಿಗೆ ಕೂಲಿ, ಊಟೋಪಚಾರ, ಸಾಗಣೆ ವೆಚ್ಚ ಎಲ್ಲ ಸೇರಿದರೆ ಪ್ರತಿ ಕೆ.ಜಿ.ಗೆ ಸರಾಸರಿ ₹ 2 ವೆಚ್ಚ ತಗುಲುತ್ತಿದೆ. ಮಾರಾಟದ ಹಣದಿಂದ ಖರ್ಚೆಲ್ಲ ಕಳೆದರೆ ರೈತರಿಗೆ ಉಳಿಯುವ ಹಣದ ಪ್ರಮಾಣ ತೀರ ಕಡಿಮೆ. ಹೀಗಾಗಿ ಕೊಯ್ಲು ಮಾಡುವುದನ್ನೇ ಬಿಟ್ಟಿದ್ದೇವೆ’ ಎಂದು ರಾಮನಗರ ತಾಲ್ಲೂಕಿನ ಯರೇಹಳ್ಳಿ ಗ್ರಾಮದ ಮಾವು ಬೆಳೆಗಾರ ರಮೇಶ್ ಹೇಳುತ್ತಾರೆ.

*
ಆರಂಭದಲ್ಲಿ ಪ್ರತಿ ಕೆ.ಜಿ.ಗೆ ₹ 100 ಇದ್ದ ದರ ಈಗ ₹ 5ಕ್ಕೆ ಇಳಿದಿದೆ. ಈ ಬೆಲೆಗೆ ಹಣ್ಣನ್ನು ಮಾರಿದರೆ ನಮಗೆ ಉಳಿಯುವುದಾದರೂ ಏನು?
-ಶಿವಣ್ಣ, ಮಾವು ಬೆಳೆಗಾರ,ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.