ADVERTISEMENT

ರಿಲಯನ್ಸ್ ಪ್ರಗತಿ ಶೇ5.7ಕುಸಿತ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 19:30 IST
Last Updated 15 ಅಕ್ಟೋಬರ್ 2012, 19:30 IST

ನವದೆಹಲಿ(ಪಿಟಿಐ):ಪ್ರಸಕ್ತ ಹಣಕಾಸು ವರ್ಷದ 2ನೇ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿ. (ಆರ್‌ಐಎಲ್) ನಿವ್ವಳ ಲಾಭ ಗಳಿಕೆ ರೂ.5376 ಕೋಟಿಗಳಷ್ಟಾಗಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಲಾಭದ ಪ್ರಮಾಣ ಶೇ 5.7ರಷ್ಟು ತಗ್ಗಿದೆ.

ತೈಲ ಮತ್ತು ಅನಿಲ ನಿರ್ವಹಣೆ ಹಾಗೂ ತೈಲ ಶುದ್ಧೀಕರಣ ವಹಿವಾಟಿನಲ್ಲಿ ಭಾರಿ ಕುಸಿತವಾಗಿದ್ದರಿಂದ ಲಾಭದ ಪ್ರಮಾಣ ಕಡಿಮೆ ಆಗಿದೆ. ಆದರೆ, ಇದೇ ವರ್ಷದ 1ನೇ ತ್ರೈಮಾಸಿಕದ ಲಾಭ ರೂ.4473 ಕೋಟಿಗೆ ಹೋಲಿಸಿದರೆ 2ನೇ ತ್ರೈಮಾಸಿಕದಲ್ಲಿ   ಶೇ 20ರಷ್ಟು ಹೆಚ್ಚಳವಾಗಿದೆ ಎಂದು ಕಂಪೆನಿ ಅಧ್ಯಕ್ಷ ಮುಖೇಶ್ ಡಿ. ಅಂಬಾನಿ ಸೋಮವಾರ ಇಲ್ಲಿ ತಿಳಿಸಿದ್ದಾರೆ.

ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಕಚ್ಚಾತೈಲವನ್ನು ಶುದ್ಧ ಇಂಧನವಾಗಿ ಪರಿವರ್ತಿಸುವ ಪ್ರಕ್ರಿಯೆಯಲ್ಲಿ ಪ್ರತಿ ಬ್ಯಾರೆಲ್ ವರಮಾನ 9.5 ಡಾಲರ್ (ರೂ.503)ಗೆ ಇಳಿದಿದೆ. ಹಿಂದಿನ ವರ್ಷ ಪ್ರತಿ ಬ್ಯಾರೆಲ್‌ಗೆ 10.1 ಡಾಲರ್(ರೂ.535) ವರಮಾನವಿದ್ದಿತು. ತೈಲ ಮತ್ತು ಅನಿಲ ವಹಿವಾಟಿನ ವರಮಾನವೂ ಶೇ 36.7ರಷ್ಟು ಕಡಿಮೆ ಆಗಿ ರೂ.2254 ಕೋಟಿಗೆ ಬಂದಿದೆ.

ನೈಸರ್ಗಿಕ ಅನಿಲ ಸಂಗ್ರಹಣೆಯಲ್ಲಿ ಇಳಿಮುಖವಾಗಿದ್ದೇ ಇದಕ್ಕೆ ಕಾರಣ ಎಂದು ವಿವರಿಸಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು ತಿಂಗಳ ಅವಧಿಯಲ್ಲಿ ಕಂಪೆನಿ ಉತ್ತಮ ಸಾಧನೆ ತೋರಿದೆ. ಜಾಗತಿಕ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿರುವಾಗಲೂ ಈ ಪ್ರಮಾಣದಲ್ಲಿನ ವರಮಾನ ಮತ್ತು ಲಾಭ ಗಳಿಸಿರುವುದು ಸಮಾಧಾನದ ಸಂಗತಿ ಎಂದು ಮುಖೇಶ್ ಅಂಬಾನಿ  ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.