ADVERTISEMENT

ರೂಪಾಯಿಯ ರೋದನ

​ಪ್ರಜಾವಾಣಿ ವಾರ್ತೆ
Published 8 ಮೇ 2012, 19:30 IST
Last Updated 8 ಮೇ 2012, 19:30 IST
ರೂಪಾಯಿಯ ರೋದನ
ರೂಪಾಯಿಯ ರೋದನ   

ಅದು ನಿತ್ಯದ ಬಡಿದಾಟ. ಬಾಕ್ಸಿಂಗ್ ಕಣದಲ್ಲಿ ಆತ ಪ್ರತಿದಿನ ಹೊಡೆತ ತಿನ್ನುತ್ತಲೇ ಇದ್ದಾನೆ. ಎದುರಾಳಿಗೂ ಬಡಿಯುವುದೇ ಕೆಲಸವಾಗಿದೆ. ಹೊಡಿಸಿಕೊಂಡವನು ನೆಲಕಚ್ಚಿದಾಗೆಲ್ಲ ಎದುರಾಳಿಯದು ವಿಜಯದ ನಗೆ..

ಭಾರತದ ರೂಪಾಯಿಯದೂ ಇದೇ ಕಥೆ-ವ್ಯಥೆ. ನಿತ್ಯ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಹೊಡೆಸಿಕೊಳ್ಳುವುದೇ ಆಗಿದೆ. ಅಮೆರಿಕದ ಡಾಲರ್ ಬಾರಿಸುತ್ತಲೇ ಇದ್ದರೆ, ರೂಪಾಯಿ ಸುಮ್ಮನೆ ಸೋಲುತ್ತಿದೆ. ಡಾಲರ್ ಅಕ್ಕಪಕ್ಕ ನಿಂತ ಯೂರೋ, ಪೌಂಡ್, ಸ್ಟರ್ಲಿಂಗ್‌ನದು ಅಟ್ಟಹಾಸದ ನಗೆ. ಮೂರನೇ ಅಂಪೈರ್ ಸ್ಥಾನದಲ್ಲಿ ಕುಳಿತ ಭಾರತೀಯ ರಿಸರ್ವ್ ಬ್ಯಾಂಕ್‌ನದು ಮೌನ ಪ್ರೇಕ್ಷಕನ ಸ್ಥಿತಿ.

ಮೊನ್ನೆ ಶನಿವಾರ ದಿನದ ವಹಿವಾಟು ಆರಂಭದಲ್ಲಿಯೇ ಡಾಲರ್ ಎದುರು ರೂಪಾಯಿ ಬೆಲೆ 53.65/66ಕ್ಕೆ ಕುಸಿದಿತ್ತು. ನಂತರದಲ್ಲಿ ಸ್ವಲ್ಪ ಚೇತರಿಸಿಕೊಂಡು  53 ರೂಪಾಯಿ 47/48ಪೈಸೆಯಲ್ಲಿ ನಿಂತಿತು. ಇದು ಕಳೆದ ನಾಲ್ಕೂವರೆ ತಿಂಗಳಲ್ಲಿಯೇ ರೂಪಾಯಿಯ ಕನಿಷ್ಠ ಮೌಲ್ಯ.

ADVERTISEMENT

ಕಳೆದ ಐದು ವಾರಗಳಿಂದಲೂ ರೂಪಾಯಿ ಸತತವಾಗಿ ಕೆಳಕ್ಕೆ ಬೀಳುತ್ತಿದೆ.  ಈ ಅವಧಿಯಲ್ಲಿ ರೂಪಾಯಿ ಕಳೆದುಕೊಂಡಿರುವ ಒಟ್ಟು ಮೌಲ್ಯವೇ 260 ಪೈಸೆ. ಅಂದರೆ ನಮ್ಮ ರೂಪಾಯಿಗೆ ಶೇ 5.11ರಷ್ಟು ಬೆಲೆ ಇಲ್ಲವಾಗಿದೆ. ಕಳೆದ ವಾರವೊಂದರಲ್ಲೇ 93 ಪೈಸೆ(ಶೇ 1.77ರಷ್ಟು) ನಷ್ಟವಾಗಿದೆ.

ಯೂರೊ, ಡಾಲರ್ ರೀತಿ ಕಳೆದ ವರ್ಷ ಹೊಸ ಚಿಹ್ನೆ ಪಡೆದ ನಮ್ಮ ರೂಪಾಯಿ, ಈಗ ಈ ಪರಿಯಲ್ಲಿ ಅಪಮೌಲ್ಯಗೊಳ್ಳಲು ಮುಖ್ಯ ಕಾರಣವಾಗಿರುವುದು ಆಮದುದಾರರಿಂದ ಡಾಲರ್‌ಗೆ ಬೇಡಿಕೆ ಹೆಚ್ಚುತ್ತಲೇ ಇರುವುದಾಗಿದೆ. ಅದರಲ್ಲೂ ತೈಲ ಕಂಪೆನಿಗಳಿಂದಲೇ ಡಾಲರ್‌ಗೆ ಬೇಡಿಕೆ ಹೆಚ್ಚಿದೆ ಎನ್ನುತ್ತಾರೆ ಮುಂಬೈನಲ್ಲಿನ ಫೊರೆಕ್ಸ್(ವಿದೇಶಿ ವಿನಿಮಯ) ಡೀಲರ್.

ಆಮದುದಾರರಿಂದ ಮಾತ್ರವಲ್ಲ ಕೆಲವು ಬ್ಯಾಂಕ್‌ಗಳಿಂದಲೂ ಡಾಲರ್‌ಗೆ ಬಾರಿ ಬೇಡಿಕೆ ಬರುತ್ತಿದೆ.

ರೂಪಾಯಿ ಬೆಲೆ ಕುಸಿಯಲು ಇನ್ನೊಂದು ಮುಖ್ಯ ಕಾರಣ; ಭಾರತದ ಷೇರುಪೇಟೆಯಲ್ಲಿ ಷೇರು ಬೆಲೆ ಕುಸಿತವಾಗಿರುವುದು. ಅದರಲ್ಲೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರುಪೇಟೆಯಲ್ಲಿನ ತಮ್ಮ ಹೂಡಿಕೆಯನ್ನು ದೊಡ್ಡ ಮಟ್ಟದಲ್ಲಿ ವಾಪಸ್ ತೆಗೆದುಕೊಂಡಾಗಲೂ ಷೇರುಪೇಟೆಯಲ್ಲಿ ಮತ್ತು ರೂಪಾಯಿ ಮೌಲ್ಯದಲ್ಲಿ ಇದೇ ಪರಿಣಾಮವಾಗುತ್ತದೆ.

ಕಳೆದ ವಾರ ಷೇರುಪೇಟೆಯ ಸಂವೇದಿ ಸೂಚ್ಯಂಕವೂ ಒಟ್ಟಾರೆ 356.26 ಅಂಶಗಳನ್ನು ಕಳೆದುಕೊಂಡಿದೆ. ಈ ಅಂಶವೂ ರೂಪಾಯಿ ಬೆಲೆ ಕುಸಿತಕ್ಕೆ ಕಾರಣವಾಗಿದೆ.
2011ರ ಡಿಸೆಂಬರ್ 15ರಂದು ಸಹ ರೂಪಾಯಿ ಬೆಲೆ ರೂ. 53.64/65ರಷ್ಟು ದಾಖಲೆ ಪ್ರಮಾಣದಲ್ಲಿ ಕುಸಿದಿತ್ತು.ಜತೆಗೆ ಕಳೆದ ಹಣಕಾಸು ವರ್ಷದಲ್ಲಿ ದೇಶದ ಆಮದು-ರಫ್ತು ನಡುವೆಯೂ ದೊಡ್ಡ ಮಟ್ಟದ ಅಂತರ ಉಂಟಾಗಿದೆ. ಇದು ಸಹ ರೂಪಾಯಿ ಕೆಳಕ್ಕಿಳಿಯಲು ದೊಡ್ಡ ಕೊಡುಗೆ ನೀಡಿದೆ.

ಆಮದು ಹೆಚ್ಚಿದರೆ ಸಹಜವಾಗಿಯೇ ದೇಶದಲ್ಲಿನ ವಿದೇಶಿ ವಿನಿಮಯ ಸಂಗ್ರಹ ಪ್ರಮಾಣ ಖಾಲಿಯಾಗುತ್ತದೆ. ಆಮದು ಪ್ರಮಾಣಕ್ಕೆ ತಕ್ಕಂತೆ ರಫ್ತು ಇದ್ದರೆ ಇದಕ್ಕೆ ತಕಣದಲ್ಲಿಯೇ ಪರಿಹಾರ ಸಿಕ್ಕಂತೆ. ಆದರೆ ಭಾರತದ ಮಟ್ಟಿಗೆ ಸದಾ ಆಮದು ಹೆಚ್ಚು-ರಫ್ತು ಕಡಿಮೆ ಎನ್ನುವುದೇ ಆಗಿದೆ. ಪರಿಣಾಮ ವಿವಿಧ ದೇಶಗಳ ಕರೆನ್ಸಿ ಎದುರು ರೂಪಾಯಿಗೆ ಬೆಲೆ ತೀರಾ ಕಡಿಮೆ ಇರುವಂತಾಗಿದೆ.

ಅಸ್ಥಿರ ರಾಜಕೀಯ ವ್ಯವಸ್ಥೆ, ಹೂಡಿಕೆ ಸ್ನೇಹವಲ್ಲದ ವಾತಾವರಣ, ಸ್ಟಾಂಡರ್ಡ್ ಅಂಡ್ ಪೂರ್ ನಂತಹ ಸಂಸ್ಥೆಗಳು ನೀಡುವ ರೇಟಿಂಗ್ ಸಹ ರೂಪಾಯಿ ಕುಸಿತಕ್ಕೆ ಪರೋಕ್ಷ ಕಾರಣವಾಗುತ್ತವೆ.

ಹೇಗೆಂದರೆ, ಒಂದು ದೇಶದ ಆರ್ಥಿಕ ಪರಿಸ್ಥಿತಿ ದೃಢವಾಗಿಲ್ಲ, ಅದರ ಸಾಲ ಪಡೆಯುವ ಸಾಮರ್ಥ್ಯ ಕುಗ್ಗಿದೆ, ಭರವಸೆ ಇಡುವಂತಹ ರಾಜಕೀಯ ವ್ಯವಸ್ಥೆ ಇಲ್ಲ ಎಂಬಂತಾದಾಗ ವಿದೇಶಿ ಸಂಸ್ಥೆಗಳು ಬಂಡವಾಳ ಹೂಡಲು ಹಿಂದೇಟು ಹಾಕುತ್ತವೆ. ಹೂಡಿಕೆ ಮಾಡಿದ್ದರೂ ವಾಪಸ್ ತೆಗೆದುಕೊಳ್ಳುತ್ತವೆ. ಇಂಥ ವಿದ್ಯಮಾನ ಹಣಕಾಸು ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಮಾರುಕಟ್ಟೆ ಪಂಡಿತರು.

ಒಟ್ಟಿನಲ್ಲಿ ಈಗ ರೂಪಾಯಿ ಮೌಲ್ಯ ಕುಸಿದಿರುವುದು ಯಾರಿಗೆ ಕಷ್ಟ ತಂದರೂ ರಫ್ತುದಾರರಿಗೆ ಲಾಭ ತಂದುಕೊಡಲಿದೆ. ಅದರಲ್ಲೂ ಮಾಹಿತಿ ತಂತ್ರಜ್ಞಾನ ಮತ್ತು ಹೊರಗುತ್ತಿಗೆ ಕ್ಷೇತ್ರದ ಕಂಪೆನಿಗಳ (ಅಮೆರಿಕಕ್ಕೆ ಹೆಚ್ಚು ಸೇವೆ ರಫ್ತು ಮಾಡುವ ಕಂಪೆನಿಗಳ) ಲಾಭ ಅಧಿಕವಾಗಲಿದೆ. ಇದೇ ನೆಪವಾಗಿ ಮೊನ್ನೆ ರೂಪಾಯಿ ಬೆಲೆ ಇಳಿಯುತ್ತಿದ್ದರೆ ಅತ್ತ ಷೇರುಪೇಟೆಯಲ್ಲಿ ಐಟಿ ಕಂಪೆನಿಗಳ ಷೇರು ಬೆಲೆ ಹೆಚ್ಚುತ್ತಿತ್ತು.

ರೂಪಾಯಿ ಅಪಮೌಲ್ಯಗೊಳ್ಳುತ್ತಿರುವುದರ ನೇರ ಹಾಗೂ ತಕ್ಷಣದ ಪರಿಣಾಮ ಆಗುವುದು ಆಮದು ಕ್ಷೇತ್ರದ ಮೇಲೆ ಎನ್ನುತ್ತಾರೆ ನಿವೃತ್ತ ಬ್ಯಾಂಕ್ ಅಧಿಕಾರಿ, ಬ್ಯಾಂಕಿಂಗ್ -ಹಣಕಾಸು ತಜ್ಞ ಯು.ಪಿ.ಪುರಾಣಿಕ್.

ರಫ್ತಿಗಿಂತ ಆಮದು ಪ್ರಮಾಣ ಹೆಚ್ಚಾದರೆ ನಾವು ಹೆಚ್ಚು ವಿದೇಶಿ ವಿನಿಮಯ ನೀಡಬೇಕಾಗುತ್ತದೆ. ನಮ್ಮ ದೇಶ ಪೆಟ್ರೋಲ್ ಆಮದು ಹೆಚ್ಚು ಮಾಡಿಕೊಳ್ಳುವುದರಿಂದ ವಿದೇಶಿ ನಗದು ಸಂಗ್ರಹ ಬಹಳಷ್ಟು ಖಾಲಿಯಾಗುತ್ತದೆ. ಜತೆಗೆ ದೇಶದಲ್ಲಿ ತೈಲೋತ್ಪನ್ನಗಳ ದರವೂ ಹೆಚ್ಚುತ್ತದೆ. ಅದು ಸರಕು ಸಾಗಣೆ ವೆಚ್ಚ ಹೆಚ್ಚಿಸಿ ದಿನಸಿ ಮತ್ತಿತರ ಸಾಮಗ್ರಿಗಳ ಬೆಲೆ ಏರಿಸುತ್ತದೆ, ಪರಿಣಾಮ ಹಣದುಬ್ಬರವೂ ಹೆಚ್ಚುತ್ತದೆ ಎನ್ನುತ್ತಾರೆ ಪುರಾಣಿಕ್.

ಹೀಗೆ ರೂಪಾಯಿ ಮೌಲ್ಯ ಕುಸಿಯುವುದು, ಅದು ಒಟ್ಟಾರೆ ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುವುದನ್ನು ತಡೆಯಲು ಸರ್ಕಾರ ವಿದೇಶಿ ನಗದು ಆಕರ್ಷಣೆಗೆ ಹೊಸ ನೀತಿ ಜಾರಿಗೆ ತರಬಹುದು. ವಿದೇಶಿ ನೇರ ಹೂಡಿಕೆ ಮಿತಿ ಹೆಚ್ಚಿಸಬಹುದು. ಹಾಗೆ ಮಾಡಿದರೆ ಅದೂ ಸಹ ಬೇರೊಂದು ಬಗೆಯಲ್ಲಿ ಕಷ್ಟಗಳನ್ನು ತಂದೊಡ್ಡುತ್ತದೆ.

ರೂಪಾಯಿಗೆ ಬೆಲೆ ತರುವ ಯತ್ನದಲ್ಲಿ ಲಾಭದಲ್ಲಿರುವ ನವರತ್ನ ಕಂಪೆನಿಗಳನ್ನು ಸರ್ಕಾರ ಷೇರು ಮಾರುಕಟ್ಟೆಗೆ ನೂಕಿದರೆ ಆಗ ಎಫ್‌ಡಿಐ ಮೂಲಕ ವಶಪಡಿಸಿಕೊಳ್ಳುವ ಯತ್ನವೂ ವಿವಿಧ ದೇಶಗಳಿಂದ ನಡೆಯಬಹುದು. ಖಾಸಗಿ ಕ್ಷೇತ್ರದ ವೈಶ್ಯ ಬ್ಯಾಂಕ್ ಸಹ ಇದೇ ಬಗೆಯಲ್ಲಿ ಐಎನ್‌ಜಿ ವಶವಾಯಿತು ಎಂಬುದನ್ನು ಅವರು ನೆನಪಿಸುತ್ತಾರೆ.

ಹೀಗೇಕೆ ರೂಪಾಯಿ ದುರ್ಬಲಗೊಳಿಸಲಾಗುತ್ತಿದೆ?

ಇಡೀ ವಿಶ್ವದಲ್ಲಿ ಸದ್ಯ ಆರ್ಥಿಕ ಹಿಂಜರಿತ ಇರುವುದರಿಂದ ಪಾಶ್ಚಿಮಾತ್ಯ ದೇಶಗಳಿಗೆ ಬಂಡವಾಳ ಹೂಡಲು ಅವಕಾಶವಿರುವುದೇ ಭಾರತ ಮತ್ತು ಚೀನಾದಲ್ಲಿ.   ಭಾರತದಲ್ಲಿ ರೂಪಾಯಿ ಅಪಮೌಲ್ಯ ಮೂಲಕ ವ್ಯವಸ್ಥೆಯಲ್ಲಿ ಸಣ್ಣ ತೂತು ಮಾಡುವ ಯತ್ನವೂ ಇದಾಗಿರಬಹುದು ಎಂಬುದು ಅವರ ಅನುಮಾನ.

ರೂಪಾಯಿಗೆ ಬೆಲೆ ತಂದುಕೊಡಬೇಕೆಂದರೆ ಸದ್ಯಕ್ಕೆ ಇರುವ ಪರಿಹಾರವೆಂದರೆ ರಫ್ತು ಪ್ರಮಾಣ ಹೆಚ್ಚಿಸಿಕೊಳ್ಳಬೇಕು. ನಮ್ಮ ರಫ್ತಿನಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ್ದೂ ದೊಡ್ಡ ಪಾಲಿದೆ. ಇದು ಸೇವೆಯ ರಫ್ತು ಕ್ಷೇತ್ರ. ಈ ಕ್ಷೇತ್ರವನ್ನು ಇನ್ನಷ್ಟು ಶಕ್ತಿಯುತವಾಗಿಸಿದಲ್ಲಿ ಐಟಿ ಕಂಪೆನಿಗಳು ಹೆಚ್ಚು ವಿದೇಶಿ ಕರೆನ್ಸಿ ತಂದುಕೊಡುತ್ತವೆ. ಆಗ ರೂಪಾಯಿಯ ಬೆಲೆಯೂ ಹೆಚ್ಚುತ್ತದೆ.   ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಿದರೂ ವಿದೇಶಿಯರು ಆಗಮಿಸಿ ವಿದೇಶಿ ವಿನಿಮಯ ಸಂಗ್ರಹ ಹೆಚ್ಚುತ್ತದೆ ಎನ್ನುವುದು ಪುರಾಣಿಕ್ ವಿಶ್ವಾಸದ ನುಡಿ.

10-11 ವರ್ಷಗಳ ಹಿಂದೆ ಸಾಮಾನ್ಯ ಬಡ್ಡಿದರ ಶೇ. 8-9ರಷ್ಟಿದ್ದರೆ ಎನ್‌ಆರ್‌ಐ ಠೇವಣಿಗೆ ಶೇ 15ರಿಂದ 16 ರಷ್ಟು ಬಡ್ಡಿ ನೀಡಲಾಗುತ್ತಿದ್ದಿತು. ಅದೇ ಬಗೆಯಲ್ಲಿ ಈಗ ಭಾರತೀಯ ರಿಸರ್ವ್ ಬ್ಯಾಂಕ್ ಸಹ ವಿದೇಶಿ ಕರೆನ್ಸಿ ಆಕರ್ಷಣೆಗೆ ಮುಂದಾಗಿದೆ. ಅನಿವಾಸಿ ಭಾರತೀಯರು ವಿದೇಶಿ ನಗದು ಮೂಲಕ ಇಡುವ ಠೇವಣಿಗೆ ಬಡ್ಡಿ ದರವನ್ನು ಶೇ. 3ರಷ್ಟು ದಿಢೀರ್ ಹೆಚ್ಚಿಸಿದೆ.

ನಮ್ಮದು ಗ್ರಾಮೀಣ, ಅರೆ ಪಟ್ಟಣಗಳ ದೇಶ. ನಮ್ಮ ಕೃಷಿ ಉತ್ಪನ್ನ ನಿಜಕ್ಕೂ ಚೆನ್ನಾಗಿದೆ. ಹಾಗಾಗಿ ನಮಗೆ ಆರ್ಥಿಕ ಹಿಂಜರಿತದ ದೊಡ್ಡ ಪರಿಣಾಮವೇನೂ ಆಗದು. ಹಾಗೊಮ್ಮೆ ರಿಸಿಷನ್ ಪರಿಣಾಮ ಬೀರಿದರೂ ಸದ್ಯಕ್ಕೆ ಬಿಸಿ ತಟ್ಟಬಹುದು. ಇದೇನಿದ್ದರೂ ತಾತ್ಕಾಲಿಕ ಸಮಸ್ಯೆ ಅಷ್ಟೆ. ನಂತರದಲ್ಲಿ ಸುಧಾರಣೆಯೂ ಸಾಧ್ಯವಾಗುತ್ತದೆ.

ನಾಳೆ ಹೇಗೆ?

ಮುಂದಿನ 12 ತಿಂಗಳು ಬಹಳ ದುರ್ಬಲ ಆಡಳಿತ ಇರುವ ಸಂಸ್ಥೆ ಮತ್ತು ಕಂಪೆನಿಗಳ ಮೇಲೆ ಈಗಿನ ಪರಿಸ್ಥಿತಿಯ ತೀಕ್ಷ್ಣ ಪರಿಣಾಮವಾಗಬಹುದು. ಆ ಕಂಪೆನಿಗಳು ಆರ್ಥಿಕ ಸಂಕಷ್ಟಕ್ಕೆ ತುತ್ತಾಗಲೂಬಹುದು. ಬಲಿಷ್ಠರು, ಪ್ರಬಲರಿಗೆ ಈಗಿನ ಸ್ಥಿತಿಯ ಪರಿಣಾಮ ತಕ್ಕಮಟ್ಟಿಗೆ ಆದರೂ ಈ ಸಂಸ್ಥೆಗಳು ಸಮಸ್ಯೆ ಎದುರಿಸಿ ಉಳಿದುಕೊಳ್ಳುತ್ತವೆ. ಜೀವನಿರೋಧಕ ಶಕ್ತಿ ಇದ್ದವರು ರೋಗ ಬಂದಾಗಲೂ ಬೇಗ ಚೇತರಿಸಿಕೊಂಡಂತೆ.

ಸಮುದ್ರ ಮಥನ ಕಾಲದಲ್ಲಿ ಅಮೃತ -ವಿಷ ಎರಡೂ ಬಂದಂತೆ ಇದೆ ಈಗಿನ ಪರಿಸ್ಥಿತಿ. ಭಾರತ ಈಗ ಬಂದಿದ್ದನ್ನು ಅನುಭವಿಸಲೇಬೇಕು. ಆದರೆ ಮನಮೋಹನ್ ಸಿಂಗ್ ಅವರಂಥ ಆರ್ಥಿಕ ತಜ್ಞರೇ ಪ್ರಧಾನಿ ಸ್ಥಾನದಲ್ಲಿರುವುದರಿಂದ ಅಷ್ಟೇನೂ ಹೆದರಿಕೊಳ್ಳುವ ಅಗತ್ಯವಿಲ್ಲ.

ತಕ್ಷಣಕ್ಕೆ ಹಣದುಬ್ಬರ ಹೆಚ್ಚುವುದಂತೂ ಖಂಡಿತ. ಅದರ ಪರಿಣಾಮವನ್ನು ಜನಸಾಮಾನ್ಯರು ಅನುಭವಿಸಬೇಕಾದದು ಅನಿವಾರ್ಯ ಎನ್ನುತ್ತಾರೆ ಪುರಾಣಿಕ್
ಎಫ್‌ಡಿಐ ವಿಳಂಬವೂ ಕಾರಣ.

ಭಾರತದಲ್ಲಿ ಎಫ್‌ಡಿಐಗೆ ಸಂಬಂಧಿಸಿ ಸ್ಪಷ್ಟ ಹಾಗೂ ತ್ವರಿತಗತಿಯ ನಿರ್ಧಾರಗಳೇ ಅಗುತ್ತಿಲ್ಲ. ಹಾಗಾಗಿ ಎಫ್‌ಡಿಐ ಚೀನಾಕ್ಕೆ ಹೋಗುತ್ತಿದೆ ಎಂದು ವಿಶ್ಲೇಷಿಸಿದವರು ರಾಷ್ಟ್ರೀಕೃತ ಬ್ಯಾಂಕೊಂದರ ವಿದೇಶಿ ವಿನಿಮಯ ವಿಭಾಗದ ಮುಖ್ಯ ಪ್ರಬಂಧಕ.
ಯೂರೊ ಹೆಚ್ಚೇನೂ ಸಮರ್ಥವಿಲ್ಲ. ಡಾಲರ್ ಒಂದೇ ಬಹಳ ಬಲಿಷ್ಠವಾಗಿದೆ ಎನ್ನುವ ಅವರು, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ದೊಡ್ಡ ಪ್ರಮಾಣದಲ್ಲಿ ಷೇರು ಮಾರುಕಟ್ಟೆಯಿಂದ ತಮ್ಮ ಹೂಡಿಕೆ ಹಿಂತೆಗೆದುಕೊಂಡರೂ ನಮ್ಮ ರೂಪಾಯಿ ಮೌಲ್ಯ ಕುಸಿಯುತ್ತದೆ ಎನ್ನುತ್ತಾರೆ.

ರಫ್ತುದಾರರಿಗೆ ನಿರೀಕ್ಷಿದಷ್ಟು ಸವಲತ್ತು, ಪ್ರೋತ್ಸಾಹ ಸಿಗುತ್ತಿಲ್ಲ. ಐಟಿ ಉದ್ಯಮಕ್ಕೂ ಈ ಹಿಂದೆ ನೀಡಿದ್ದ ತೆರಿಗೆ ರಜಾದಿನ ಮುಗಿದಿದೆ. ಪರಿಣಾಮ ಆಮದಿಗಿಂತ ರಫ್ತು ಕಡಿಮೆ ಆಗುತ್ತಿದೆ.

ಸರಕುಗಳ ಬೇಡಿಕೆ-ಪೂರೈಕೆ, ಬಡ್ಡಿದರದಲ್ಲಿನ ವ್ಯತ್ಯಾಸ, ದೇಶದಲ್ಲಿನ ವಿದೇಶಿ ವಿನಿಮಯ ನಗದು ಮತ್ತು ಚಿನ್ನದ ಸಂಗ್ರಹ ಪ್ರಮಾಣದ ಮೇಲೆ ಆ ದೇಶದ ಕರೆನ್ಸಿಯ ಮೌಲ್ಯ ನಿರ್ಧಾರವಾಗುತ್ತದೆ.

ಸದ್ಯ ರೂಪಾಯಿ ಬೆಲೆ ರೂ 54ರ ಸಮೀಪದಲ್ಲಿದೆ. ಈ ಗಡಿ ದಾಟಿದರೆ ಬಹಳ ಕಷ್ಟವಿದೆ. 55ರ ಮಟ್ಟಕ್ಕೆ ಹೋದರಂತೂ ಇಡೀ ಆರ್ಥಿಕ ವ್ಯವಸ್ಥೆಗೆ ದೊಡ್ಡ ಅಪಾಯ ಎದುರಾಗಲಿದೆ ಎಂದು ಅವರು ಕಳವಳ ವ್ಯಕ್ತಪಡಿಸುತ್ತಾರೆ.

ರೂಪಾಯಿ ಬೆಲೆ ನಿರ್ಧಾರ?

ವಿದೇಶಿ ವಿನಿಮಯ ಮಾರುಕಟ್ಟೆಗೆ ಸಂಬಂಧಿಸಿ ಪ್ರತಿನಿತ್ಯ ವಿವಿಧ ದೇಶಗಳ ಕರೆನ್ಸಿ ಎದುರು ರೂಪಾಯಿಗೆ ಇಷ್ಟು ಬೆಲೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನಿಗದಿ ಮಾಡುತ್ತದೆ. ಹಾಗಿದ್ದೂ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಆ ನಿಗದಿತ ದರವನ್ನೂ ಮೀರಿ ರೂಪಾಯಿ ಬೆಲೆ ಕುಸಿತ ಕಾಣುತ್ತದೆ.

ಇರಾನ್ ಸ್ನೇಹದ ಲಾಭ

ಭಾರತ ವಿವಿಧ ದೇಶಗಳೊಂದಿಗಿನ ವಾಣಿಜ್ಯ ವಹಿವಾಟನ್ನು ಆಯಾ ದೇಶಗಳ ಕರೆನ್ಸಿ ಲೆಕ್ಕದಲ್ಲಿಯೇ ಮಾಡುತ್ತಿದ್ದರೂ ಇರಾನ್ ಜತೆ ಮಾತ್ರ ರೂಪಾಯಿ ಲೆಕ್ಕದಲ್ಲಿಯೇ ಮಾಡುತ್ತಿದೆ. ಇರಾನ್‌ನಿಂದ 1100 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ತೈಲ ಖರೀದಿಸುತ್ತದೆ. ಆದರೆ, ಇರಾನ್‌ಗೆ ರೂಪಾಯಿಯಲ್ಲಿಯೇ ಪಾವತಿಸುತ್ತದೆ. ಇರಾನ್ ಸಹ ಭಾರತದಿಂದ ಖರೀದಿಸಿದ ಸರಕುಗಳಿಗೆ ಈ ರೂಪಾಯಿಯನ್ನೇ ಪಾವತಿಸುತ್ತದೆ. ಇಲ್ಲಿ ಭಾರತಕ್ಕೆ ವಿದೇಶಿ ವಿನಿಮಯ ವೆಚ್ಚ ಇಲ್ಲ. ಡಾಲರ್ ಸಂಗ್ರಹದಲ್ಲಿ ಉಳಿತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.