ನವದೆಹಲಿ(ಪಿಟಿಐ): ಡಾಲರ್ ವಿರುದ್ಧ ರೂಪಾಯಿ ಸತತವಾಗಿ ಅಪಮೌಲ್ಯಗೊಳ್ಳುತ್ತಿರುವುದನ್ನು ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಮಧ್ಯಪ್ರವೇಶಿಸದೇ ಇದ್ದರೆ ಮುಂಬೈ ಷೇರು ವಿನಿಮಯ ಕೇಂದ್ರದ(ಬಿಎಸ್‌ಇ) ಸಂವೇದಿ ಸೂಚ್ಯಂಕ ಈ ವಾರ ಇನ್ನಷ್ಟು ಹಾನಿ ಅನುಭವಿಸಲಿದೆ ಎಂದು ಮಾರುಕಟ್ಟೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ರೂಪಾಯಿಯ ಗರಿಷ್ಠ ಮಟ್ಟದ ಅಪಮೌಲ್ಯದಿಂದಾಗಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು(ಎಫ್‌ಐಐ) ಷೇರುಪೇಟೆಯಿಂದ ಭಾರಿ ಪ್ರಮಾಣದಲ್ಲಿ ಬಂಡವಾಳ ವಾಪಸ್ ಪಡೆಯುತ್ತಿದ್ದಾರೆ. ಇದು ಪೇಟೆಯಲ್ಲಿ ಅಸ್ಥಿರತೆ ಸೃಷ್ಟಿಸಿದೆ.
ಇದರ ಜತೆಗೆ ಭಾರತವೂ ಸೇರಿದಂತೆ ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಿಗೆ ಹಣಕಾಸು ಉತ್ತೇಜಕ ಕೊಡುಗೆಗಳನ್ನು ಮುಂದುವರಿಸಬೇಕೇ ಬೇಡವೇ ಎನ್ನುವುದರ ಕುರಿತು ಅಮೆರಿಕ ಸೆಂಟ್ರಲ್ ಬ್ಯಾಂಕ್ ಈ ವಾರ ಮಹತ್ವದ ನಿರ್ಧಾರ ಕೈಗೊಳ್ಳಲಿದೆ. ಈ ಸಂಗತಿ ಕೂಡ ಜಾಗತಿಕ ಷೇರುಪೇಟೆಗಳ ಏರಿಳಿತ ನಿರ್ಧರಿಸಲಿದೆ ಎಂದು ತಜ್ಞರು ಹೇಳಿದ್ದಾರೆ.
ಅಗತ್ಯ ಕಂಡುಬಂದರೆ `ಆರ್‌ಬಿಐ' ಮಧ್ಯಪ್ರವೇಶ ಮಾಡಲಿದೆ ಎಂದು ಹಣಕಾಸು ಸಚಿವಾಲಯ ಹೇಳಿರುವುದು ಹೂಡಿಕೆದಾರರಲ್ಲಿ ಅಲ್ಪ ಆಶಾಭಾವ ಮೂಡಿಸಿದೆ.
ಆದರೆ, ಅಮೆರಿಕದ ಸೆಂಟ್ರಲ್ ಬ್ಯಾಂಕ್‌ನ ನಿರ್ಧಾರ ಪೇಟೆಯನ್ನು ಯಾವ ದಿಕ್ಕಿನಲ್ಲಿ ಬೇಕಾದರೂ ಕೊಂಡೊಯ್ಯಬಹುದು ಎಂದು `ಆದಿತ್ಯಾ ಟ್ರೇಡಿಂಗ್ ಸಲ್ಯೂಷನ್ಸ್' ಮುಖ್ಯಸ್ಥ ವಿಕಾಸ್ ಜೈನ್ ಅಭಿಪ್ರಾಯಪಟ್ಟಿದ್ದಾರೆ.
`ಎಫ್‌ಐಐ' ಒತ್ತಡದಿಂದ ಕಳೆದ ವಾರ ಸೂಚ್ಯಂಕ ಒಟ್ಟಾರೆ ಶೇ 2.1ರಷ್ಟು ಕುಸಿತ ಕಂಡು 18,774 ಅಂಶಗಳಿಗೆ ವಾರಾಂತ್ಯದ ವಹಿವಾಟು ಕೊನೆಗೊಳಿಸಿದೆ. ರೂಪಾಯಿ ಅಪೌಲ್ಯ ಹೊರತುಪಡಿಸಿದರೆ ಈ ವಾರ ಪೇಟೆಯ ಮೇಲೆ ಪ್ರಭಾವ ಬೀರುವ ಬೇರೆ ಯಾವುದೇ ಪ್ರಮುಖ ಸಂಗತಿ ಇಲ್ಲ ಎಂದು ಇನ್ವೆಂಚರ್ ಗ್ರೋಥ್ ಅಂಡ್ ಸೆಕ್ಯುರಿಟೀಸ್‌ನ ಅಧ್ಯಕ್ಷರಾದ ನಗ್ಜಿ ಕೆ.ರೀಟಾ ಹೇಳಿದ್ದಾರೆ.
ನಕಾರಾತ್ಮಕ ಪರಿಣಾಮ
ಅಮೆರಿಕದ `ಫೆಡರಲ್ ರಿಸರ್ವ್' ಅಧ್ಯಕ್ಷರಾದ ಬೆನ್ ಬೆರ್ನೆಕ್, ಈಗಾಗಲೇ ಹಣಕಾಸು ಉತ್ತೇಜನ ಕೊಡುಗೆ ಕಡಿತ ಮಾಡುವ ಸುಳಿವು ನೀಡಿದ್ದಾರೆ. ಈ ವರ್ಷಾಂತ್ಯಕ್ಕೆ ಸಾಲಪತ್ರ ಖರೀದಿಸುವ ಕುರಿತೂ ಅವರು ಹೇಳಿಕೆ ನೀಡಿದ್ದಾರೆ.
ಈ ಎಲ್ಲ ಸಂಗತಿಗಳು ಷೇರುಪೇಟೆ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿವೆ ಎಂದು `ರೆಲಿಗೇರ್ ಸೆಕ್ಯುರಿಟೀಸ್' ಅಧ್ಯಕ್ಷ ಜಯಂತ್ ಮಂಗಳೀಕ್ ಅಭಿಪ್ರಾಯಪಟ್ಟಿದ್ದಾರೆ.
ರೂಪಾಯಿ ಅಪಮೌಲ್ಯದಿಂದ ಸೂಚ್ಯಂಕ ಇಳಿಕೆ ಕಂಡರೂ, ಐ.ಟಿ ಕಂಪೆನಿಗಳ ಷೇರು ಮೌಲ್ಯ ಏರಿಕೆಯಾಗಿದೆ. ಸಾಫ್ಟ್‌ವೇರ್ ರಫ್ತು ಸಂಸ್ಥೆಗಳಿಗೆ ಹೆಚ್ಚುವರಿ ಲಾಭ ಮಾಡಿಕೊಳ್ಳಲು ಇದು ಸುವರ್ಣಕಾಲ.
ಬಂಡವಾಳ ವಾಪಸ್: ರೂಪಾಯಿ ಮೌಲ್ಯ ತೀವ್ರವಾಗಿ ಕುಸಿಯುತ್ತಿರುವ ಪರಿಗೆ ಬೆಚ್ಚಿಬಿದ್ದಿರುವ `ವಿದೇಶಿ ಸಾಂಸ್ಥಿಕ ಹೂಡಿಕೆದಾರರು' ಭಾರತದ ಮಾರುಕಟ್ಟೆಯಿಂದ ಭಾರಿ ಪ್ರಮಾಣದ ಹೂಡಿಕೆ ವಾಪಸ್ ತೆಗೆದುಕೊಂಡಿದ್ದಾರೆ.
`ಎಫ್‌ಐಐ'ಗಳು ಭಾರತದಲ್ಲಿನ ಸಾಲಪತ್ರ ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರಲ್ಲಿ ಒಟ್ಟು 500 ಕೋಟಿ ಅಮೆರಿಕನ್ ಡಾಲರ್(ರೂ. 29,191 ಕೋಟಿ)ಗಳನ್ನು ಕಳೆದ 21 ದಿನಗಳಲ್ಲಿ ಹಿಂದಕ್ಕೆ ತೆಗೆದುಕೊಂಡಿದ್ದಾರೆ ಎಂದು ಭಾರತೀಯ ಷೇರು ನಿಯಂತ್ರಣ ಮಂಡಳಿ (ಸೆಬಿ) ಅಂಕಿ-ಅಂಶಗಳಿಂದ ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.