ADVERTISEMENT

ರೂಪಾಯಿ ಅಪಮೌಲ್ಯ ವಿದೇಶಿ ವ್ಯಾಸಂಗ ತುಟ್ಟಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2013, 19:59 IST
Last Updated 18 ಜೂನ್ 2013, 19:59 IST

ಡಾಲರ್ ಎದುರು ರೂಪಾಯಿ ವಿನಿಮಯ ಮೌಲ್ಯ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಕುಸಿದಿದೆ. ಇದರ ಬಿಸಿ ಕೇವಲ ಆಮದುದಾರರನ್ನು ಮಾತ್ರ ತಟ್ಟಿಲ್ಲ. ಉನ್ನತ ವ್ಯಾಸಂಗಕ್ಕೆಂದು ವಿದೇಶಗಳಿಗೆ ತೆರಳುವ ವಿದ್ಯಾರ್ಥಿಗಳಿಗೂ ರೂಪಾಯಿ ಅಪಮೌಲ್ಯ ಕಷ್ಟ ತಂದೊಡ್ಡಿದೆ.

ಸದ್ಯ 1 ಅಮೆರಿಕನ್ ಡಾಲರ್‌ಗೆ ರೂಪಾಯಿ ವಿನಿಮಯ ಮೌಲ್ಯ ರೂ.57.51 (ಜೂನ್ 15ರ ಧಾರಣೆ). ವಿದೇಶಗಳಲ್ಲಿರುವ ವಿದ್ಯಾರ್ಥಿಗಳಿಗಾಗಿ ಭಾರತದಲ್ಲಿ ಅವರು ಪಾಲಕರು 1 ಸಾವಿರ ರೂಪಾಯಿ ತುಂಬಿದರೆ ಅಲ್ಲಿ ಅವರಿಗೆ ಕೇವಲ 17.38 ಡಾಲರ್ ಲಭಿಸುತ್ತಿದೆ.

`ಈ ವಿದ್ಯಾರ್ಥಿಗಳು ನಿಜಕ್ಕೂ ಕಷ್ಟು ಅನುಭವಿಸುವಂತಾಗಿದೆ. ಕಳೆದ ಒಂದು ತಿಂಗಳಿಂದ ಅವರಿಗೆ ವಿನಿಮಯ ಮೌಲ್ಯದಲ್ಲಿ ಶೇ 15ರಿಂದ ಶೇ 20ರಷ್ಟು ನಷ್ಟವಾಗುತ್ತಿದೆ' ಎಂದಿದೆ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ  (ಅಸೋಚಾಂ) ನಡೆಸಿದ ಅಧ್ಯಯನ.

ಇತ್ತೀಚಿನ ಅಧ್ಯಯನದಂತೆ ಉನ್ನತ ವಿದ್ಯಾಭ್ಯಾಸಕ್ಕೆಂದು ಅಮೆರಿಕದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 1ಲಕ್ಷಕ್ಕಿಂತಲೂ ಹೆಚ್ಚಿದೆ (2010-11ರಲ್ಲಿ 1,03,260 ವಿದ್ಯಾರ್ಥಿಗಳಿದ್ದರು).  ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಡೆನ್ಮಾರ್ಕ್, ನಾರ್ವೆ ಕೂಡ ಭಾರತೀಯ ವಿದ್ಯಾರ್ಥಿಗಳ ನೆಚ್ಚಿನ ಶೈಕ್ಷಣಿಕ ತಾಣಗಳು.

ಇಲ್ಲಿರುವ ವಿದ್ಯಾರ್ಥಿಗಳಿಗೆ ರೂಪಾಯಿ ಮೌಲ್ಯ ಕುಸಿತದಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಆಹಾರ, ವಸತಿ, ಶೈಕ್ಷಣಿಕ ಶುಲ್ಕ ಮತ್ತು ಇತರೆ ಅಗತ್ಯ ಸೇವೆಗಳಿಗೆ ಹೆಚ್ಚಿನ ಮೊತ್ತ ತೆರಬೇಕಾಗಿದೆ ಎನ್ನುತ್ತಾರೆ `ಅಸೋಚಾಂ' ಕಾರ್ಯದರ್ಶಿ ಡಿ.ಎ.ರಾವತ್.

2012ರ ಮಾರ್ಚ್‌ನಿಂದ 2013ರ ಜೂನ್‌ವರೆಗೆ ರೂಪಾಯಿ ಮೌಲ್ಯದಲ್ಲಿ ಶೇ  15ರಷ್ಟು ಕುಸಿತವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವಿದೇಶಗಳಲ್ಲಿನ ಉನ್ನತ ವ್ಯಾಸಂಗಕ್ಕಾಗಿ ವ್ಯಯಿಸಬೇಕಾದ ಹಣ ಗಣನೀಯ ಪ್ರಮಾಣದಲ್ಲಿ ಏರಿದೆ.

ಸದ್ಯ ಅಮೆರಿಕದಲ್ಲಿ ಪದವಿ ಪೂರ್ವ ಶಿಕ್ಷಣಕ್ಕೆ ವಾರ್ಷಿಕ 20 ಸಾವಿರದಿಂದ 30 ಸಾವಿರ ಡಾಲರ್‌ವರೆಗೆ ವೆಚ್ಚವಾಗುತ್ತದೆ. `ಎಂಬಿಎ' ವಿದ್ಯಾರ್ಥಿಗಳು 30 ಸಾವಿರದಿಂದ 40 ಸಾವಿರ ಡಾಲರ್ ಭರಿಸಬೇಕಾಗುತ್ತದೆ.

ರೂಪಾಯಿ ಅಪಮೌಲ್ಯದಿಂದ ಭಾರತೀಯ ವಿದ್ಯಾರ್ಥಿಗಳು ಅಮೆರಿಕದಲ್ಲಿನ ವ್ಯಾಸಂಗಕ್ಕಾಗಿ ವಾರ್ಷಿಕ ರೂ.2 ಲಕ್ಷದಿಂದ ರೂ.4 ಲಕ್ಷದವರೆಗೂ ಹೆಚ್ಚುವರಿ ಹಣ ತೆರಬೇಕಾಗಿ ಬಂದಿದೆ. ಅಂದರೆ, ಮೊದಲು ವಾರ್ಷಿಕ ರೂ.45 ಲಕ್ಷ ವೆಚ್ಚವಾಗುತ್ತಿತ್ತು. ಇದೀಗ ಈ ಹೊರೆ ರೂ.55ರಿಂದ ರೂ.58 ಲಕ್ಷಕ್ಕೆ ಹೆಚ್ಚಿದೆ ಎನ್ನುತ್ತದೆ `ಅಸೋಚಾಂ' ಅಧ್ಯಯನದ ಅಂಕಿ-ಅಂಶ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.