ಮುಂಬೈ(ಪಿಟಿಐ): ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಕುಸಿತ ಮುಂದುವರಿದಿದೆ. ಗುರುವಾರದ ವಹಿವಾಟಿನಲ್ಲಿ ಅಮೆರಿಕದ ಡಾಲರ್ ವಿರುದ್ಧ ಭಾರತದ ರೂಪಾಯಿ ವಿನಿಮಯ ಮೌಲ್ಯರೂ59.57ಕ್ಕೆ ಕುಸಿದಿದೆ. ಇದು ರೂಪಾಯಿಯ ಸಾರ್ವಕಾಲಿಕ ಕನಿಷ್ಠ ಮಟ್ಟವಾಗಿದೆ.
ಬುಧವಾರ ಡಾಲರ್‌ಗೆರೂ58.70ರ ಲೆಕ್ಕದಲ್ಲಿ ವಿನಿಮಯಗೊಂಡಿದ್ದ ರೂಪಾಯಿ, ಗುರುವಾರ 87 ಪೈಸೆಯಷ್ಟು ಅಪಮೌಲ್ಯಗೊಂಡಿತು.
ಗುರುವಾರದ ವಹಿವಾಟಿನ ಒಂದು ಹಂತದಲ್ಲಿ ರೂಪಾಯಿಯ ಬೆಲೆರೂ59.93ರವರೆಗೂ ಕುಸಿದಿತ್ತು. ದಿನದ ಅಂತ್ಯದ ವೇಳೆಗೆರೂ58.70 ಬೆಲೆಯಲ್ಲಿ ಡಾಲರ್‌ಗೆ ವಿನಿಮಯಗೊಂಡಿತು.
ಆಮದುದಾರರಿಂದ ಡಾಲರ್‌ಗೆ ಬೇಡಿಕೆ ಹೆಚ್ಚಿದ್ದು ಮತ್ತು ಷೇರು ಪೇಟೆಯಲ್ಲಿ ಹಣ ಹೂಡಿದ್ದ ವಿದೇಶಿ ಸಂಸ್ಥೆಗಳುರೂ2000 ಕೋಟಿಯಷ್ಟು ಭಾರಿ ಪ್ರಮಾಣದ ಹೂಡಿಕೆಯನ್ನು ವಾಪಸ್ ಪಡೆದುಕೊಂಡಿದ್ದು ಸಹ ಡಾಲರ್ ವಿರುದ್ಧದ ರೂಪಾಯಿಯ ತೀವ್ರ ಕುಸಿತಕ್ಕೆ ಕಾರಣವಾಯಿತು.
`ಅಸ್ತವ್ಯಸ್ತ ಸ್ಥಿತಿ ಇಲ್ಲ'
ನವದೆಹಲಿ(ಪಿಟಿಐ): ದೇಶದ ಕರೆನ್ಸಿಯಾದ ರೂಪಾಯಿ ಸದ್ಯ ಬಹಳ ಅಸ್ತವ್ಯಸ್ತ ಸ್ಥಿತಿಯಲ್ಲೇನೂ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. ಕೇಂದ್ರ ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಮತ್ತು ಭಾರತೀಯ ಷೇರು ನಿಯಂತ್ರಣ ಪ್ರಾಧಿಕಾರ(ಸೆಬಿ) ದೇಶದ ಹಣಕಾಸು ಮಾರುಕಟ್ಟೆಯಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಇವೆ. ಅಗತ್ಯ ಬಿದ್ದಲ್ಲಿ ಮಧ್ಯಪ್ರವೇಶಿಸಿ ರೂಪಾಯಿ ಮೌಲ್ಯ ಕುಸಿತ ತಡೆಗೆ ಸೂಕ್ತ ಕ್ರಮ ಕೈಗೊಳ್ಳಲಿವೆ ಎಂದು ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರ ರಘುರಾಮ್ ರಾಜನ್ ಇಲ್ಲಿ ಗುರುವಾರ ಸುದ್ದಿಗಾರರಿಗೆ ಹೇಳಿದರು.
ದೇಶದ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಗುರುವಾರ ಡಾಲರ್ ವಿರುದ್ಧ ರೂಪಾಯಿ(59.93ಕ್ಕೆ ಕುಸಿತ) ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಮೌಲ್ಯ ಕಳೆದುಕೊಂಡಿದೆ. ರೂಪಾಯಿ ಕುಸಿತ ತಡೆಗೆ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ? ಎಂಬ ಸುದ್ದಿಗಾರರ ಪ್ರಶ್ನೆಗಳಿಗೆ. `ನಮ್ಮ ಮುಂದೆ ಎಲ್ಲ ಮಾರ್ಗಗಳೂ ಮುಕ್ತವಾಗಿವೆ. ಹಣಕಾಸು ಸಚಿವಾಲಯ, `ಆರ್‌ಬಿಐ' ಮತ್ತು `ಸೆಬಿ' ಸೂಕ್ತ ಸಮಯದಲ್ಲಿ ಕ್ರಮಕ್ಕೆ ಮುಂದಾಗಲಿವೆ ಎಂದು ರಾಜನ್ ಉತ್ತರಿಸಿದರು.
ರೂಪಾಯಿ ಸತತವಾಗಿ ಮೌಲ್ಯ ಕಳೆದುಕೊಳ್ಳುತ್ತಿದ್ದರೂ, ಕಳವಳಗೊಳ್ಳವಷ್ಟು ಅಸ್ತವ್ಯಸ್ತ ಸ್ಥಿತಿಯಲ್ಲಿಯೇನೂ ಇಲ್ಲ. ಅಲ್ಲದೆ, ಮತ್ತೆ ಮೊದಲಿನ ಸ್ಥಿತಿಗೆ ಮರಳುವ ವಿಶ್ವಾಸವೂ ಇದೆ. ಈ ವಿಚಾರದಲ್ಲಿ ನಿರಾಶಾವಾದ ಸಲ್ಲ ಎಂದು ಅವರು ಹೇಳಿದರು. ಈಗಿನ ದೊಡ್ಡ ಸಮಸ್ಯೆ ಎಂದರೆ ಅಮದು-ರಫ್ತು ನಡುವಿನ ಕೊರತೆ(ಸಿಎಡಿ) ಅಂತರ ಹೆಚ್ಚುತ್ತಿರುವುದೇ ಆಗಿದೆ. ಇತ್ತೀಚೆಗೆ ಕೈಗೊಂಡ ಬಿಗಿ ಕ್ರಮಗಳಿಂದಾಗಿ ಚಿನ್ನದ ಆಮದು ಕಡಿಮೆ ಆಗುತ್ತಿದೆ. ನಂತರದಲ್ಲಿ `ಸಿಎಡಿ' ಸಮಸ್ಯೆಯೂ ಪರಿಹಾರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಿನ್ನ-ಇನ್ನಷ್ಟು ನಿರ್ಬಂಧವಿಲ್ಲ
ಚಿನ್ನದ ಆಮದು ಪೂರ್ಣ ನಿರ್ಬಂಧಿಸಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ಅದು ದೇಶದ ಆರ್ಥಿಕ ವ್ಯವಸ್ಥೆಗೆ ಮಾರಕವಾಗಲಿದೆ. ಈ ವಿಚಾರದಲ್ಲಿ ಸರಿಯಾಗಿ ಆಲೋಚಿಸದೆ ಪ್ರತಿಕ್ರಿಯಿಸುವುದಾಗಲೀ, ಕ್ರಮ ಕೈಗೊಳ್ಳುವುದಾಗಲೀ ಸರಿಯಲ್ಲ ಎಂದು ಇನ್ನೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.