ADVERTISEMENT

`ರೂಪಾಯಿ ಶೀಘ್ರದಲ್ಲೇ ಸ್ಥಿರ'

ಅಸ್ಥಿರತೆ ತಡೆಯಲು ಕ್ರಮ;ಚಿದಂಬರಂ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 19:59 IST
Last Updated 5 ಸೆಪ್ಟೆಂಬರ್ 2013, 19:59 IST

ನವದೆಹಲಿ (ಪಿಟಿಐ):`ಡಾಲರ್ ವಿರುದ್ಧ ರೂಪಾಯಿ ವಿನಿಮಯ ಮೌಲ್ಯ ತನ್ನಷ್ಟಕ್ಕೆ ತಾನೇ ಸ್ಥಿರಗೊಳ್ಳಲಿದೆ. ದೇಶದ ಆರ್ಥಿಕ ವೃದ್ಧಿ ದರವೂ (ಜಿಡಿಪಿ) ಹಿಂದಿನ ಗರಿಷ್ಠ ಪ್ರಗತಿ ಪಥಕ್ಕೆ ಮರಳಲಿದೆ' ಎಂದು ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚಾಲ್ತಿ ಖಾತೆ ಕೊರತೆ (ಸಿಎಡಿ) ಹೆಚ್ಚಳ ಸೇರಿದಂತೆ ಹಲವು ಬಾಹ್ಯ,ಆಂತರಿಕ ಕಾರಣಗಳಿಂದ ದೇಶದ ಹಣಕಾಸು ಮಾರುಕಟ್ಟೆ ಒತ್ತಡ ಎದುರಿಸುತ್ತಿದೆ. ಅಸ್ಥಿರತೆ ತಡೆಯಲು `ಆರ್‌ಬಿಐ' ಮತ್ತು ಕೇಂದ್ರ ಸರ್ಕಾರ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ'ಎಂದು ಅವರು ಗುರುವಾರ ಲೋಕಸಭೆಯಲ್ಲಿ ಹೇಳಿದರು.

ಬ್ಯಾಂಕ್ ಷೇರುಗಳ ಜಿಗಿತ
ಅನಿವಾಸಿ ಭಾರತೀಯರ ವಿದೇಶಿ ಕರೆನ್ಸಿ ಠೇವಣಿಗೆ (ಎಫ್‌ಸಿಎನ್‌ಆರ್) ವಿಶೇಷ ವಿನಾಯ್ತಿ ನೀಡಿರುವುದರ ಜತೆಗೆ, ಬಾಹ್ಯ ವಾಣಿಜ್ಯ ಸಾಲಕ್ಕೆ (ಇಸಿಬಿ) ವಿಧಿಸಿದ್ದ ನಿರ್ಬಂಧಗಳನ್ನು `ಆರ್‌ಬಿಐ' ತೆಗೆದು ಹಾಕಿದ ಹಿನ್ನೆಲೆಯಲ್ಲಿ ಗುರುವಾರ ಬ್ಯಾಂಕಿಂಗ್ ವಲಯದ ಸೂಚ್ಯಂಕ ಶೇ 9.3ರಷ್ಟು ಜಿಗಿತ ಕಂಡಿದೆ. ಎಸ್‌ಬ್ಯಾಂಕ್ ಶೇ 21.55, ಆಕ್ಸಿಸ್ ಬ್ಯಾಂಕ್ ಶೇ 15.63, ಫೆಡರಲ್ ಬ್ಯಾಂಕ್ ಶೇ 12.38, ಎಸ್‌ಬಿಐ ಶೇ 9.74, ಐಸಿಐಸಿಐ ಬ್ಯಾಂಕ್ ಶೇ 9.20, ಎಚ್‌ಡಿಎಫ್‌ಸಿ ಬ್ಯಾಂಕ್ ಶೇ 7.53 ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಶೇ 7.53ರಷ್ಟು ಏರಿಕೆ ಕಂಡವು.

ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ' 144 ಅಂಶಗಳಷ್ಟು (ಶೇ 2.66) ಏರಿಕೆ ಕಂಡು 5,592 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಷೇರುಪೇಟೆಯಿಂದ 172.53 ಕೋಟಿ ಬಂಡವಾಳ ವಾಪಸ್ ಪಡೆದಿದ್ದಾರೆ ಎಂದು ಷೇರುಪೇಟೆ ನಿಯಂತ್ರಣ ಮಂಡಳಿ `ಸೆಬಿ' ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.