ನವದೆಹಲಿ (ಪಿಟಿಐ): `ನೇರ ನಗದು ಪಾವತಿ'(ಡಿಸಿಟಿ) ವ್ಯವಸ್ಥೆ ಜಾರಿಗೊಳಿಸಿದ ಒಂದು ವಾರದಲ್ಲಿ ಅಡುಗೆ ಅನಿಲ (ಎಲ್‌ಪಿಜಿ) ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ರೂ10 ಕೋಟಿ ಸಬ್ಸಿಡಿ ಮೊತ್ತ ವರ್ಗಾಯಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.
`ಎಲ್‌ಪಿಜಿ' ಸಬ್ಸಿಡಿಗೆ ಜೂನ್ 1ರಿಂದ `ಡಿಸಿಟಿ' ವ್ಯವಸ್ಥೆ ಜಾರಿಗೆ ಬಂದಿದೆ. ಮೊದಲ 7 ದಿನದಲ್ಲಿ ಒಟ್ಟು 18 ಜಿಲ್ಲೆಗಳ 2.5 ಲಕ್ಷ `ಎಲ್‌ಪಿಜಿ' ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ತಲಾ ರೂ435ರಂತೆ ಹಣ ವರ್ಗಾಯಿಸಲಾಗಿದೆ.
ಮೊದಲ ಹಂತದಲ್ಲಿ ದೇಶದಾದ್ಯಂತ 20 ಜಿಲ್ಲೆಗಳಲ್ಲಿ ಈ ವ್ಯವಸ್ಥೆ ಜಾರಿಗೆ ಸರ್ಕಾರ ಉದ್ದೇಶಿಸಿತ್ತು. ಆದರೆ, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಮತ್ತು ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಚುನಾವಣೆ ಇದ್ದ ಹಿನ್ನೆಲೆಯಲ್ಲಿ ಯೋಜನೆ ಜಾರಿಯನ್ನು ಒಂದು ತಿಂಗಳ ಕಾಲ ಮುಂದೂಡಲಾಗಿತ್ತು. ಒಟ್ಟು 73 ಲಕ್ಷ `ಎಲ್‌ಪಿಜಿ' ಗ್ರಾಹಕರು `ಡಿಸಿಟಿ' ಮೂಲಕ ಸಬ್ಸಿಡಿ ಪಡೆಯಲಿದ್ದಾರೆ. ಇವರಲ್ಲಿ ಶೇ 90ರಷ್ಟು ಫಲಾನುಭವಿಗಳು `ಆಧಾರ್' ಕಾರ್ಡ್ ಪಡೆದುಕೊಂಡಿದ್ದಾರೆ. ಉಳಿದವರಿಗೆ ಕಾರ್ಡ್ ಪಡೆದುಕೊಂಡ `ಡಿಸಿಟಿ' ಸವಲತ್ತಿಗೆ ಒಳಪಡಲು 3 ತಿಂಗಳ (ಸೆ. 1ರವರೆಗೆ) ಹೆಚ್ಚುವರಿ ಕಾಲಾವಕಾಶ ನೀಡಲಾಗಿದೆ.
`ಡಿಸಿಟಿ' ಜಾರಿಯಿಂದ ಸರ್ಕಾರಕ್ಕೆ `ಎಲ್‌ಪಿಜಿ' ವಿಭಾಗದಿಂದಲೇ ವಾರ್ಷಿಕ ರೂ8,000ದಿಂದ ರೂ10,000 ಕೋಟಿ ಸಬ್ಸಿಡಿ ಉಳಿತಾಯವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.