ADVERTISEMENT

ರೂ 802 ಕೋಟಿ `ಎಫ್‌ಡಿಐ'ಗೆ ಒಪ್ಪಿಗೆ

ಮಹೀಂದ್ರಾ-ಇಸ್ರೇಲ್ ಜಂಟಿ ಪ್ರಸ್ತಾವನೆ ತಿರಸ್ಕೃತ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2012, 19:59 IST
Last Updated 26 ಡಿಸೆಂಬರ್ 2012, 19:59 IST

ನವದೆಹಲಿ (ಪಿಟಿಐ): ಒಟ್ಟು ರೂ. 800 ಕೋಟಿಗೂ ಅಧಿಕ ಮೊತ್ತದ ನೇರ ವಿದೇಶಿ ಹೂಡಿಕೆಯ 12 ಪ್ರಸ್ತಾವನೆಗಳಿಗೆ ಕೇಂದ್ರ ಸರ್ಕಾರ ಬುಧವಾರ ಅನುಮೋದನೆ ನೀಡಿದೆ. ಆದರೆ, ಇಸ್ರೇಲ್‌ನ `ರಾಫೆಲ್ ಅಡ್ವಾನ್ಸ್ಡ್ ಡಿಫೆನ್ಸ್ ಸಿಸ್ಟಂ' ಕಂಪೆನಿ ಜತೆಗೂಡಿ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಉಪಕರಣಗಳ ಕಂಪೆನಿ ಆರಂಭಿಸಬೇಕೆಂಬ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪೆನಿಯ ಪ್ರಸ್ತಾವ ತಿರಸ್ಕೃತವಾಗಿದೆ.

ಇದಕ್ಕೂ ಮುನ್ನ ನವೆಂಬರ್ 20ರಂದು ಸಭೆ ನಡೆಸಿ ಚರ್ಚಿಸಿದ ಕೇಂದ್ರದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅರವಿಂದ್ ಮಾಯಾರಾಮ್ ನೇತೃತ್ವದ `ವಿದೇಶಿ ಬಂಡವಾಳ ಹೂಡಿಕೆ ಉತ್ತೇಜನ ಮಂಡಳಿ'(ಎಫ್‌ಐಪಿಬಿ) `ಎಫ್‌ಡಿಐ ಕುರಿತು ಸಲ್ಲಿಸಲಾಗಿದ್ದ ಪ್ರಸ್ತಾವನೆಗಳಲ್ಲಿ 12ಕ್ಕೆ ಅನುಮೋದನೆ ನೀಡಬಹುದು.  ಮಹೀಂದ್ರಾ ಜತೆಗೇ, ಕೊಯಮತ್ತೂರಿನ ಆಂಪೊ ವಾಲ್ವ್ಸ್ ಇಂಡಿಯ ಮತ್ತು ಮುಂಬೈನ ಬೆರ್ಗುರೆನ್ ರಿಯಲ್ ಎಸ್ಟೇಟ್ ಸಂಸ್ಥೆಯ ಪ್ರಸ್ತಾವನೆಗಳನ್ನು  ತಿರಸ್ಕರಿಸಬೇಕಿದೆ ಎಂದು ಸರ್ಕಾರಕ್ಕೆ ಶಿಫಾರಸು ಸಲ್ಲಿಸಿದ್ದಿತು.

`ಎಫ್‌ಐಪಿಬಿ'ಯ ಶಿಫಾರಸಿನನ್ವಯ ರೂ. 802.07 ಕೋಟಿ ಮೊತ್ತದ 12 ಪ್ರಸ್ತಾವನೆಗಳಿಗೆ ಮಾತ್ರ ಒಪ್ಪಿಗೆ ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

ಇದೇ ವೇಳೆ, ಸ್ವೀಡನ್‌ನ ಪೀಠೋಪಕರಣ ಕ್ಷೇತ್ರದ ದಿಗ್ಗಜ `ಐಕೆಇಎ' ಸಮೂಹವೂ ದೊಡ್ಡ ಮಟ್ಟದಲ್ಲಿ ಭಾರತದ ಮಾರುಕಟ್ಟೆ ಪ್ರವೇಶಕ್ಕೆ ಸನ್ನದ್ದವಾಗಿದೆ. ಇದು ಇಲ್ಲಿ ತೊಡಗಿಸಲಿರುವ ಬಂಡವಾಳ ರೂ. 10,500 ಕೋಟಿಗೂ ಅಧಿಕ ಪ್ರಮಾಣದ್ದಾಗಿದೆ.

ರೂ. 1,200 ಕೋಟಿಗೂ ಹೆಚ್ಚಿನ ಮೌಲ್ಯದ `ಎಫ್‌ಡಿಐ' ಪ್ರಸ್ತಾವನೆಗಳಿಗೆ ಏನಿದ್ದರೂ `ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ'(ಸಿಸಿಇಎ)ಯ ಒಪ್ಪಿಗೆ ಕಡ್ಡಾಯ. ಹಾಗಾಗಿ, `ಐಕೆಇಎ' ಪ್ರಸ್ತಾವನೆಯನ್ನು `ಸಿಸಿಇಎ' ಅನುಮೋದನೆಗಾಗಿ ಕಳುಹಿಸಿಕೊಡಲಾಗಿದೆ ಎಂದು ಹಣಕಾಸು ಸಚಿವಾಲಯ ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.