ADVERTISEMENT

ವಾಣಿಜ್ಯ ಮೈತ್ರಿ ಸುಧಾರಣೆಗೆ ವಿದೇಶಯಾತ್ರೆ

ಮಧ್ಯ ಏಷ್ಯಾಗೆ ಅನ್ಸಾರಿ; ಅಮೆರಿಕ-ಕೆನಡಾಕ್ಕೆ ಚಿದಂಬರಂ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 19:59 IST
Last Updated 13 ಏಪ್ರಿಲ್ 2013, 19:59 IST

ನವದೆಹಲಿ (ಪಿಟಿಐ): ದೇಶದ ಗಣ್ಯರಿಬ್ಬರು ಭಾನುವಾರ ವಿದೇಶ ಪ್ರವಾಸ ಆರಂಭಿಸುತ್ತಿದ್ದು, ಭಾರತದ ಉದ್ಯಮ ಮತ್ತು ವಾಣಿಜ್ಯ ವಲಯಕ್ಕೆ ಅನುಕೂಲಕಾರಿ ಕ್ರಮಗಳಿಗಾಗಿ ಅಲ್ಲಿನ ಪ್ರಮುಖರ ಜತೆ ಮಾತುಕತೆ ನಡೆಸಲಿದ್ದಾರೆ.

ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ನಾಲ್ಕು ದಿನಗಳ ಮಧ್ಯ ಏಷ್ಯಾ ಪ್ರವಾಸವನ್ನು ತಜಕಿಸ್ತಾನ ಭೇಟಿ ಮೂಲಕ ಆರಂಭಿಸಲಿದ್ದಾರೆ.

ಪೆಟ್ರೋಲಿಯಂ ನಿಕ್ಷೇಪ ಮತ್ತಿತರ ಖನಿಜಗಳ ದೊಡ್ಡ ಕಣಜವಾಗಿರುವ ತಜಕಿಸ್ತಾನದಲ್ಲಿ ವ್ಯಾಪಾರ ಮತ್ತು ರಕ್ಷಣೆ ಕ್ಷೇತ್ರಕ್ಕೆ ಸಂಬಂಧಿಸಿ ಅವರು ಅಲ್ಲಿನ ಅಧ್ಯಕ್ಷ ಎಮೊಮಲಿ ರಹ್ಮಾನ್ ಜತೆಗೆ ಮಾತುಕತೆ ನಡೆಸಲಿದ್ದಾರೆ. ವ್ಯಾಪಾರ ವೃದ್ಧಿಗೆ ಸಂಬಂಧಿಸಿ ಮೈತ್ರಿ ಸುಧಾರಣೆಗೂ ಅವರು ಮುನ್ನಡಿ ಹಾಡಲಿದ್ದಾರೆ.

ಚಿದಂಬರಂ ಪ್ರವಾಸ
ಇದೇ ವೇಳೆ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರು ಒಂದು ವಾರದ ಮಟ್ಟಿಗೆ ಅಮೆರಿಕ ಮತ್ತು ಕೆನಡಾಕ್ಕೆ ಭೇಟಿ ನೀಡಲಿದ್ದಾರೆ.

ಆ ಎರಡೂ ದೇಶಗಳಲ್ಲಿನ ಉದ್ಯಮಿಗಳು, ಹೂಡಿಕೆದಾರ ಸಂಸ್ಥೆಗಳ ಪ್ರಮುಖರನ್ನು ಭೇಟಿಯಾಗಿ ಭಾರತದ ಪ್ರಗತಿಯ ಚಿತ್ರಣವನ್ನು ಹಂಚಿಕೊಳ್ಳಲಿದ್ದಾರೆ. ಆ ಮೂಲಕ ವಿದೇಶಿ ನೇರ ಹೂಡಿಕೆ ದೇಶಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬರುವಂತೆ ಮಾಡಲು ಯತ್ನಿಸಲಿದ್ದಾರೆ.

ಅಲ್ಲದೆ, ವಾಷಿಂಗ್ಟನ್‌ನಲ್ಲಿ ನಡೆಯಲಿರುವ ವಿಶ್ವ ಬ್ಯಾಂಕ್ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಸಭೆಯಲ್ಲಿಯೂ ಪಾಲ್ಗೊಳ್ಳಲಿದ್ದಾರೆ.

ಕೆನಡಾದ ಟೊರೊಂಟೊದಲ್ಲಿ ಸೋಮವಾರ `ಕೆನಡಾ-ಭಾರತ ವಾಣಿಜ್ಯ ಸಮಿತಿ' ದುಂಡುಮೇಜಿನ ಸಭೆಯಲ್ಲಿ ಕೆನಡಾದ 15-20 ಪ್ರಮುಖ ಕಂಪೆನಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜತೆಗೆ ಚರ್ಚಿಸಲಿದ್ದಾರೆ. ವಿಶೇಷವಾಗಿ, ಭಾರತವು ದೊಡ್ಡ ಮಟ್ಟದ ಬಂಡವಾಳ ಹೂಡಿಕೆಗೆ ಅತ್ಯುತ್ತಮ ದೇಶ ಎಂಬುದರತ್ತ ಉದ್ಯಮಿಗಳ ಗಮನ ಸೆಳೆಯಲಿದ್ದಾರೆ.

ಏ. 16ರಂದು ಬೋಸ್ಟನ್‌ನಲ್ಲಿ `ಪೂರ್ವದ ಪ್ರಗತಿ-ಜಾಗತಿಕ ಆರ್ಥಿಕ ವ್ಯವಸ್ಥೆ ಮೇಲೆ ಪರಿಣಾಮ' ವಿಚಾರವಾಗಿ ಚಿದಂಬರಂ ಭಾಷಣ ಮಾಡಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.