ADVERTISEMENT

ವಿಜಯ ಬ್ಯಾಂಕ್ ಲಾಭ ರೂ.224 ಕೋಟಿ

4ನೇ ತ್ರೈಮಾಸಿಕದಲ್ಲಿ ಶೇ 24ರಷ್ಟು ಸಾಧನೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2013, 19:59 IST
Last Updated 26 ಏಪ್ರಿಲ್ 2013, 19:59 IST
ವಿಜಯ ಬ್ಯಾಂಕ್ ಅಧ್ಯಕ್ಷ ಉಪೇಂದ್ರ ಕಾಮತ್ ಸುದ್ದಿಗೋಷ್ಠಿಯಲ್ಲಿ ಹಣಕಾಸು ಫಲಿತಾಂಶ ಪ್ರಕಟಿಸಿದರು. ಕಾರ್ಯನಿರ್ವಾಹಕ ನಿರ್ದೇಶಕ ಕೆ.ಆರ್.ಶೆಣೈ ಇದ್ದರು
ವಿಜಯ ಬ್ಯಾಂಕ್ ಅಧ್ಯಕ್ಷ ಉಪೇಂದ್ರ ಕಾಮತ್ ಸುದ್ದಿಗೋಷ್ಠಿಯಲ್ಲಿ ಹಣಕಾಸು ಫಲಿತಾಂಶ ಪ್ರಕಟಿಸಿದರು. ಕಾರ್ಯನಿರ್ವಾಹಕ ನಿರ್ದೇಶಕ ಕೆ.ಆರ್.ಶೆಣೈ ಇದ್ದರು   

ಬೆಂಗಳೂರು: ವಿಜಯ ಬ್ಯಾಂಕ್ ಮಾರ್ಚ್ 31ಕ್ಕೆ ಕೊನೆಗೊಂಡ 2012-13ನೇ ಹಣಕಾಸು ವರ್ಷದ 4ನೇ ತ್ರೈಮಾಸಿಕದಲ್ಲಿ ರೂ.224.15 ಕೋಟಿ ನಿವ್ವಳ ಲಾಭ ಗಳಿಸಿ ಶೇ 24ರಷ್ಟು ಪ್ರಗತಿ ದಾಖಲಿಸಿದೆ. ಹಿಂದಿನ ವರ್ಷದ ಇದೇ ಅವಧಿಯ ಲಾಭ ರೂ.180.97 ಕೋಟಿಯಷ್ಟಿತ್ತು.

`ಸಾಲಗಳಿಂದ ಬಂದ ಬಡ್ಡಿ ಆದಾಯ ಶೇ 8ರಷ್ಟು ಹೆಚ್ಚಿದ್ದು, ಹೂಡಿಕೆಗಳ ಗಳಿಕೆಯಲ್ಲಿ ಶೇ 15ರಷ್ಟು ಏರಿಕೆಯಾಗಿದ್ದು ಮತ್ತು ನಿರ್ವಹಣಾ ವರಮಾನದಲ್ಲಿ ಶೇ 100ರಷ್ಟು ಸುಧಾರಣೆ ಆಗಿದ್ದು ಪ್ರಗತಿ ಕಾರಣ. ಇನ್ನೊಂದೆಡೆ ದೊಡ್ಡ ಮೊತ್ತದ ಠೇವಣಿಗಳನ್ನು ಶೇ 46.47ರಿಂದ ಶೇ 22.30ಕ್ಕೆ ತಗ್ಗಿಸಿದ್ದರಿಂದ ಪಾವತಿಸಬೇಕಿದ್ದ ಭಾರಿ ಬಡ್ಡಿ ಹೊರೆ ತಗ್ಗಿದೆ. ಇದೆಲ್ಲದರಿಂದಾಗಿ ಜನವರಿ-ಮಾರ್ಚ್ ಅವಧಿಗೆ ಲಾಭ ಗಳಿಕೆಯಲ್ಲಿ ಉತ್ತಮ ಪ್ರಗತಿ ಸಾಧಿಸಲು ಸಾಧ್ಯವಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಎಚ್.ಎಸ್.ಉಪೇಂದ್ರ ಕಾಮತ್ ವಿವರಿಸಿದರು.

ನಗರದಲ್ಲಿ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, ಇಡೀ ಹಣಕಾಸು ವರ್ಷದಲ್ಲಿ ರೂ.585.61 ಕೋಟಿ(ಹಿಂದಿನ ವರ್ಷ ರೂ.580.99 ಕೋಟಿ) ನಿವ್ವಳ ಲಾಭವಾಗಿದೆ. ಒಟ್ಟು ವಹಿವಾಟು ರೂ.1,67,531 ಕೋಟಿಗೇರಿದೆ. ಇದು ಸಾರ್ವಕಾಲಿಕ ದಾಖಲೆ ಎಂದು ಹರ್ಷ ವ್ಯಕ್ತಪಡಿಸಿದರು. ಕಾರ್ಯನಿರ್ವಾಹಕ ನಿರ್ದೇಶಕ ಕೆ.ಆರ್.ಶೆಣೈ ಸುದ್ದಿಗೋಷ್ಠಿಯಲ್ಲಿದ್ದರು.

ಉತ್ತಮ ಫಲಿತಾಂಶ ಕಾರಣ ವಿಜಯ ಬ್ಯಾಂಕ್ ಷೇರು ಮುಂಬೈ ಷೇರುಪೇಟೆಯಲ್ಲಿ ಶುಕ್ರವಾರ ಮಧ್ಯಾಹ್ನ ಶೇ 2.98ರಷ್ಟು ಮೌಲ್ಯ ಹೆಚ್ಚಿಸಿಕೊಂಡು ರೂ.53.50ರಲ್ಲಿ ಮಾರಾಟವಾಗುತ್ತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.