ADVERTISEMENT

ವಿತ್ತೀಯ ಕೊರತೆ: ಸಲಹೆ ಆಹ್ವಾನ

ಜೂನ್‌ 30ರ ಗಡುವು: ಹದಿನೈದನೇ ಹಣಕಾಸು ಆಯೋಗ

ಪಿಟಿಐ
Published 23 ಫೆಬ್ರುವರಿ 2018, 19:30 IST
Last Updated 23 ಫೆಬ್ರುವರಿ 2018, 19:30 IST
ವಿತ್ತೀಯ ಕೊರತೆ: ಸಲಹೆ ಆಹ್ವಾನ
ವಿತ್ತೀಯ ಕೊರತೆ: ಸಲಹೆ ಆಹ್ವಾನ   

ನವದೆಹಲಿ(ಪಿಟಿಐ): ಸರ್ಕಾರದ ಹಣಕಾಸು ಪರಿಸ್ಥಿತಿಯ ಸಮರ್ಥ ನಿರ್ವಹಣೆಗೆ ವಿತ್ತೀಯ ಕೊರತೆ ತಗ್ಗಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಎನ್‌.ಕೆ. ಸಿಂಗ್ ನೇತೃತ್ವದ 15ನೇ ಹಣಕಾಸು ಆಯೋಗವು ಸಲಹೆಗಳನ್ನು ಆಹ್ವಾನಿಸಿದೆ.

ವರಮಾನ ವೃದ್ಧಿಗೆ ಕೈಗೊಳ್ಳಬೇಕಾದ ಸಲಹೆ, ಸೂಚನೆಗಳನ್ನು ನೀಡುವಂತೆ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ಸಲಹೆಗಳನ್ನು ನೀಡಲು ಜೂನ್‌ 30 ಅಂತಿಮ ಗಡುವನ್ನು ನಿಗದಿಪಡಿಸಲಾಗಿದೆ. ಆಯೋಗವು  2019ರ ಅಕ್ಟೋಬರ್‌ ತಿಂಗಳ ಅಂತ್ಯದ ವೇಳೆಗೆ  ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಲಿದೆ.

ADVERTISEMENT

ಕೇಂದ್ರ ತೆರಿಗೆ ವರಮಾನವನ್ನು ರಾಜ್ಯಗಳಿಗೆ ಹಂಚಿಕೆ ಮಾಡುವ ಕುರಿತು ಸಲಹೆ ನೀಡಲು ನವೆಂಬರ್‌ನಲ್ಲಿ 15ನೇ ಹಣಕಾಸು ಆಯೋಗವನ್ನು ರಚಿಸಲಾಗಿತ್ತು.

ವರಮಾನ ವೃದ್ಧಿಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಜತೆಗೆ, ಸಾಲ ಮತ್ತು ವಿತ್ತೀಯ ಕೊರತೆ ತಗ್ಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಇರುವ ಜವಾಬ್ದಾರಿಗಳನ್ನೂ ಆಯೋಗವು ಪರಿಗಣನೆಗೆ ತೆಗೆದುಕೊಳ್ಳಲಿದೆ. ರಾಜ್ಯಗಳಿಗೆ ಸಮರ್ಪಕವಾಗಿ ಅನುದಾನ ಹಂಚಿಕೆ ಮಾಡುವ ಬಗ್ಗೆಯೂ ನಿರ್ಧಾರ ಕೈಗೊಳ್ಳಲಿದೆ.

ವಿತ್ತೀಯ ಕೊರತೆ, ಸಾಲದ ಪ್ರಮಾಣ, ನಗದು ಉಳಿತಾಯ ಮತ್ತು ವಿತ್ತೀಯ ಶಿಸ್ತಿನ ನಿರ್ವಹಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಯತ್ನಗಳನ್ನು ಮತ್ತು 14ನೇ ಹಣಕಾಸು ಆಯೋಗದ ವರದಿಯಲ್ಲಿನ ಅಂಶಗಳನ್ನೂ ಪರಿಗಣಿಸಲಿದೆ.

ಕೇಂದ್ರ ತೆರಿಗೆಯಲ್ಲಿ ರಾಜ್ಯಗಳ ಪಾಲನ್ನು ಶೇ 32ರಿಂದ ಶೇ 42ಕ್ಕೆ ಹೆಚ್ಚಿಸುವಂತೆ ಹಿಂದಿನ ಆಯೋಗ ಸೂಚಿಸಿತ್ತು. ಇದು 2015–16ರ ಆರ್ಥಿಕ ವರ್ಷದಿಂದ ಜಾರಿಗೆ ಬಂದಿತ್ತು. ಇದು ವಿತ್ತೀಯ ಪರಿಸ್ಥಿತಿ ಮೇಲೆ ಬೀರಿದ ಪರಿಣಾಮಗಳನ್ನೂ ಆಯೋಗವು ಪರಿಶೀಲಿಸಲಿದೆ.

ಜಿಎಸ್‌ಟಿ ಪರಿಣಾಮಗಳು, ಐದು ವರ್ಷಗಳಲ್ಲಿ ರಾಜ್ಯ ಸರ್ಕಾರಗಳಿಗೆ ಆಗುವ ನಷ್ಟ ಭರ್ತಿ ಮಾಡಿಕೊಡುವ ಬಗ್ಗೆ, ಹಲವು ಸೆಸ್‌ಗಳನ್ನು ಕಡಿತಗೊಳಿ
ಸುವ ಬಗ್ಗೆಯೂ ಗಮನ ಹರಿಸಲಿದೆ.

ಈ ಆಯೋಗದ ಶಿಫಾರಸುಗಳು,  2020ರ ಏಪ್ರಿಲ್‌ನಿಂದ ಮುಂದಿನ ಐದು ವರ್ಷಗಳ ವರೆಗೆ ಜಾರಿಯಲ್ಲಿ ಇರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.