ADVERTISEMENT

ವಿತ್ತೀಯ ಶಿಸ್ತು: ವೆಚ್ಚಕ್ಕೆ ಕಡಿವಾಣ ಸಾಧ್ಯತೆ

ಪಿಟಿಐ
Published 9 ಜೂನ್ 2018, 19:30 IST
Last Updated 9 ಜೂನ್ 2018, 19:30 IST

ನವದೆಹಲಿ: ಪ್ರಸಕ್ತ ಹಣಕಾಸು ವರ್ಷಕ್ಕೆ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ 3.3 ರಲ್ಲಿ ಇರುವಂತೆ ನೋಡಿಕೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ವೆಚ್ಚಕ್ಕೆ ಕಡಿವಾಣ ಹಾಕುವ ಸಾಧ್ಯತೆ ಇದೆ ಎಂದು ಮೂಡೀಸ್‌ ಇನ್‌ವೆಸ್ಟರ್ಸ್‌ ಸರ್ವೀಸಸ್‌ ಹೇಳಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಾಗುತ್ತಿದೆ. ಹೀಗಿರುವಾಗ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಎಕ್ಸೈಸ್‌ ಸುಂಕದಲ್ಲಿ ಸ್ವಲ್ಪವೇ ಕಡಿತ ಮಾಡಿದರೂ ಅದು ದೇಶದ ಸಾಲ ಮರುಪಾವತಿ ಸಾಮರ್ಥ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯಪಟ್ಟಿದೆ.

‘ಬಜೆಟ್‌ನಲ್ಲಿ ಅಂದಾಜು ಮಾಡಿರುವಂತೆ ವರಮಾನ ಮತ್ತು ವೆಚ್ಚ ಸರಿದಗೂಸಾಧ್ಯವಾಗದೇ ಹೋಗಬಹುದು. ಏಕೆಂದರೆ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಿಂದ ವರಮಾನ ಸಂಗ್ರಹದಲ್ಲಿ ಇಳಿಕೆ ಕಂಡುಬರುತ್ತಿದೆ. ಇದರಿಂದ ನಿರೀಕ್ಷಿತ ಮಟ್ಟದಲ್ಲಿ ವರಮಾನ ಸಂಗ್ರಹವಾಗುವ ಅನುಮಾನ ಕಾಡುತ್ತಿದೆ’ ಎಂದು ಮೂಡೀಸ್‌ನ ಉಪಾಧ್ಯಕ್ಷ ವಿಲಿಯಂ ಫೋಸ್ಟರ್‌ ಹೇಳಿದ್ದಾರೆ.

ADVERTISEMENT

‘ಜಿಎಸ್‌ಟಿ ಜಾರಿ ಮತ್ತು ರಿಟರ್ನ್ಸ್‌ ಸಲ್ಲಿಕೆಯ ಕುರಿತಾಗಿ ಕೆಲವು ಸಮಸ್ಯೆಗಳಿವೆ. ಸಕಾಲಕ್ಕೆ ತೆರಿಗೆ ಮರುಪಾವತಿ ಆಗದೇ ಇರುವುದು ಹಾಗೂ ತೆರಿಗೆ ದರದಲ್ಲಿನ ಬದಲಾವಣೆಗಳಿಂದಾಗಿ ವರಮಾನ ನಷ್ಟವಾಗುವ ಸಾಧ್ಯತೆ ಇದೆ.  ‘ಇನ್ನೊಂದೆಡೆ, ಕಚ್ಚಾ ತೈಲ ದರ ಏರಿಕೆ ಕಾಣುತ್ತಿದೆ. ಒಂದೊ‌ಮ್ಮೆ ತೈಲ ದರ ಗರಿಷ್ಠ ಮಟ್ಟದಲ್ಲಿಯೇ ಇದ್ದರೆ ಇಂಧನಗಳ ಮೇಲಿನ ಎಕ್ಸೈಸ್‌ ಸುಂಕ ಕಡಿತ ಮಾಡುವುದು ಅನಿವಾರ್ಯವಾಗಲಿದೆ. ಅದರಿಂದ ಹಣಕಾಸು ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ’ ಎಂದು ಹೇಳಿದ್ದಾರೆ.

ಜಾಗತಿಕ ರೇಟಿಂಗ್‌ ಸಂಸ್ಥೆಯಾಗಿರುವ ಮೂಡೀಸ್‌, 13 ವರ್ಷಗಳ ಬಳಿಕ 2017ರಲ್ಲಿ ಭಾರತದ ಹಣಕಾಸು ಸ್ಥಿತಿಯ ರೇಟಿಂಗ್ಸ್‌ ಅನ್ನು ‘ಬಿಎಎ2’ಗೆ ಉನ್ನತೀಕರಿಸಿತ್ತು. ಆರ್ಥಿಕ ಮತ್ತು ಹಣಕಾಸು ಸುಧಾರಣೆಗಳಿಂದಾಗಿ ದೇಶದ ಒಟ್ಟಾರೆ ಬೆಳವಣಿಗೆಯಲ್ಲಿ ಬಹಳಷ್ಟು ಬದಲಾವಣೆಗಳು ಗೋಚರಿಸುತ್ತಿವೆ ಎಂದು ಹೇಳಿತ್ತು.

ಕಚ್ಚಾ ತೈಲ ದರ ಏರಿಕೆಯು ದೇಶದ ಚಾಲ್ತಿ ಖಾತೆ ಕೊರತೆಯಲ್ಲಿ (ಕ್ಯಾಡ್‌) ಹೆಚ್ಚಳಕ್ಕೆ ಕಾರಣವಾಗಲಿದೆ. ಇದರಿಂದ ವಿದೇಶಿ ಹೂಡಿಕೆ ಕಡಿಮೆಯಾಗಲಿದೆ. ಈ ಸಂಗತಿಗಳ ಬಗ್ಗೆ ಸರ್ಕಾರ ಹೆಚ್ಚಿನ ಗಮನ ನೀಡುವ ಅಗತ್ಯವಿದೆ ಎಂದು ಇಂಡಿಯನ್‌ ಕ್ರೆಡಿಟ್‌ ರೇಟಿಂಗ್‌ ಸಂಸ್ಥೆ (ಇಕ್ರಾ) ಹೇಳಿದೆ.

‘ಕಚ್ಚಾ ತೈಲ ದರ ಈಗಿರುವ ಮಟ್ಟದಲ್ಲಿಯೇ ಇದ್ದರೆ 2018–19ರಲ್ಲಿ ‘ಕ್ಯಾಡ್‌’ ಶೇ 2.4ಕ್ಕೆ ತಲುಪಲಿದೆ. 2016–17ರಲ್ಲಿ ಶೇ 0.7 ರಷ್ಟಿತ್ತು’ ಎಂದು ‘ಇಕ್ರಾ’ದ ಮುಖ್ಯ ಆರ್ಥಿಕ ತಜ್ಞೆ ಅದಿತಿ ನಾಯರ್‌ ಮಾಹಿತಿ ನೀಡಿದ್ದಾರೆ.ಏಪ್ರಿಲ್‌ನಲ್ಲಿ ಭಾರತದಲ್ಲಿನ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 66 ಡಾಲರ್‌ಗಳಿಂದ 74 ಡಾಲರ್‌ಗೆ ಏರಿಕೆ ಕಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.