ADVERTISEMENT

ವಿದ್ಯುತ್ ಸ್ವಾವಲಂಬನೆಯ ಮನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 19:30 IST
Last Updated 7 ಫೆಬ್ರುವರಿ 2012, 19:30 IST

ಬೇಸಿಗೆ ಬಂತೆಂದರೆ ಸಾಕು ವಿದ್ಯುತ್, ಕಣ್ಣಾ ಮುಚ್ಚಾಲೆಯಾಟ ಆಡಲು ಆರಂಭಿಸುತ್ತದೆ. ಕೆಲವೊಮ್ಮೆ ಬೇಸಿಗೆಗೂ ಮುನ್ನ ಈ ಆಟ ಶುರುವಾಗುತ್ತದೆ. ಪದೇ ಪದೇ ವಿದ್ಯುತ್ ಕೈಕೊಡುವುದು ಎಲ್ಲರಿಗೂ ಬೇಸರದ ಸಂಗತಿಯೇ ಸರಿ. ಇಷ್ಟೆಲ್ಲಾ ಆದರೂ ರಾಜ್ಯದ ಜನರಿಗೆ ನಿರಂತರ ವಿದ್ಯುತ್ ಪೂರೈಕೆ, ವಿದ್ಯುತ್ ಸಾಮರ್ಥ್ಯ ಹೆಚ್ಚಳ ಮುಂತಾದ ರಾಜ್ಯ ಸರ್ಕಾರದ ಭರವಸೆಗಳು ಮಾತ್ರ ಕಡತಗಳಲ್ಲಿಯೇ ಉಳಿದಿವೆ.

ಇವೆಲ್ಲವುಗಳ ನಡುವೆ ಬೆಂಗಳೂರಿನ ಒಂದು ಮನೆ ಮಾತ್ರ ವಿದ್ಯುತ್‌ನಲ್ಲಿ ಸ್ವಾವಲಂಬಿಯಾಗಿ ಇತರ ಮನೆಗಳಿಗೆ ಮಾದರಿಯಾಗಿ ನಿಂತಿದೆ. ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿನ ಈ ಮನೆಯ ಚಾವಣಿಯಲ್ಲಿ ಅಳವಡಿಸಿರುವ ದೇಶದಲ್ಲಿಯೇ ಪ್ರಥಮ ಎನ್ನಲಾದ ನ್ಯಾನೊ ರೂಫ್ ಟಾಪ್ ಸೋಲಾರ್ ಫೋಟೊವೋಲ್ಟಿಕ್ ಸಿಸ್ಟಮ್ಸ (ಎನ್‌ಆರ್‌ಟಿಎಸ್‌ಪಿಎಸ್)ನಿಂದ  ದಿನದ ಇಪ್ಪತ್ತನಾಲ್ಕು ಗಂಟೆ ಸತತ ನಿರಂತರ ವಿದ್ಯುತ್ ಪೂರೈಕೆಯಾಗುತ್ತಿದೆ. ಮಾತ್ರವಲ್ಲದೆ ಬೆಂಗಳೂರು ವಿದ್ಯುತ್ ಪೂರೈಕೆ ಸಂಸ್ಥೆಯ (ಬೆಸ್ಕಾಂ) ಗ್ರಿಡ್‌ಗೂ ವಿದ್ಯುತ್ ಪೂರೈಸುತ್ತಿದೆ.

ಐಐಟಿ ಪದವೀಧರ  ರವಿಶಂಕರ್ ಅವರ ಮನೆಮಂದಿಗೆ ವಿದ್ಯುತ್ ಕಡಿತ ಎನ್ನುವುದು ಹಿಂದೆಲ್ಲೋ ನಡೆದುಹೋದ ಸಂಗತಿಯಂತೆ ಭಾಸವಾಗುತ್ತಿದೆ. ಎನ್‌ಆರ್‌ಟಿಎಸ್‌ಪಿಎಸ್ ಬಳಸಿ ಅವರು ಎರಡು ಕಿಲೊವಾಟ್‌ಗೂ ಹೆಚ್ಚು ಸೋಲಾರ್ ವಿದ್ಯುತ್ ಉತ್ಪಾದಿಸುವುದಲ್ಲದೆ ಪ್ರತಿದಿನ 3ರಿಂದ 4 ಯೂನಿಟ್‌ಗಳಷ್ಟು ವಿದ್ಯುತ್ ಅನ್ನು ಗ್ರಿಡ್‌ಗೆ ಪೂರೈಸುತ್ತಿದ್ದಾರೆ.

`ಎನ್‌ಆರ್‌ಟಿಎಸ್‌ಪಿಎಸ್~ ಸ್ಥಾಪನೆಯಾದ ದಿನಂದಿನಿಂದ ಇದುವರೆಗೆ ಅವರು ಸುಮಾರು 2500 ಯೂನಿಟ್‌ಗಳಷ್ಟು ವಿದ್ಯುತ್ ಪೂರೈಸಿದ್ದಾರೆ.

ಇದರಲ್ಲಿನ ಒಟ್ಟು 12 ಪ್ಯಾನೆಲ್‌ಗಳು  2X20X25 ಅಡಿ ವಿಸ್ತೀರ್ಣ ಹೊಂದಿದೆ. ಸಾಧಾರಣ ಫೋಟೊವೋಲ್ಟಿಕ್ ಪ್ಯಾನೆಲ್‌ಗಳಿಗಿಂತ ವಿಭಿನ್ನವಾಗಿರುವ ಇದು ಸೌರಶಕ್ತಿಯನ್ನು ವಿದ್ಯುತ್ ಅನ್ನಾಗಿ ಪರಿವರ್ತಿಸುವುದಲ್ಲದೆ ಸುಮಾರು 8 ಯೂನಿಟ್‌ಗಳಷ್ಟು ವಿದ್ಯುತ್ ಅನ್ನು ಪ್ರತಿದಿನ ಉತ್ಪಾದಿಸುತ್ತದೆ.

ಪ್ರಸ್ತುತ ಇಲ್ಲಿಂದ ಉತ್ಪಾದನೆಯಾಗುತ್ತಿರುವ ಹೆಚ್ಚಿನ ಪ್ರಮಾಣದ ವಿದ್ಯುತ್ ಉಚಿತವಾಗಿಯೇ ಗ್ರಿಡ್‌ಗೆ ಸಾಗುತ್ತಿದ್ದು ಶೀಘ್ರದಲ್ಲಿಯೇ ಇದಕ್ಕೆ ಬೆಸ್ಕಾಂನಿಂದ ಹಣ ಪಡೆಯುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ರವಿಶಂಕರ್ ಹೇಳುತ್ತಾರೆ.

ಈ ಮನೆಗೆ ಪ್ರತಿ ತಿಂಗಳು ಅಗತ್ಯವಾಗಿರುವ ಸುಮಾರು 160 ಯೂನಿಟ್‌ಗಳಷ್ಟು ವಿದ್ಯುತ್ `ಎನ್‌ಆರ್‌ಟಿಎಸ್‌ಪಿಎಸ್~ ಮೂಲಕ ದೊರೆಯುತ್ತದೆ. `ಇದನ್ನು ನಾವು ಮನೆಗೆ ಪೂರ್ಣ ಪ್ರಮಾಣದಲ್ಲಿ ಬಳಸುತ್ತೇವೆ. ಅಲ್ಲದೆ ಗೃಹೋಪಕರಣಗಳಾದ ವಾಟರ್ ಹೀಟರ್, ಮೈಕ್ರೊವೇವ್, ಫ್ಯಾನ್, ವಾಷಿಂಗ್‌ಮಷಿನ್, ಫ್ರಿಜ್ ಮತ್ತು ಇತರ ಉಪಕರಣಗಳಿಗೆ ಬಳಸುತ್ತೇವೆ~ ಎನ್ನುತ್ತಾರೆ ರವಿಶಂಕರ್.

ಎಷ್ಟು ವಿದ್ಯುತ್ ಉತ್ಪಾದನೆಯಾಗುತ್ತದೆ ಮತ್ತು ಎಷ್ಟು ಪ್ರಮಾಣದಲ್ಲಿ ಗ್ರಿಡ್‌ಗೆ ವರ್ಗಾವಣೆಯಾಗತ್ತದೆ ಎನ್ನುವುದನ್ನು ಅಳೆಯಲು ಬೈ ಡೈರೆಕ್ಷನಲ್ ಎನರ್ಜಿ ಮೀಟರ್ ಅಳವಡಿಸಲಾಗಿದ್ದು ಅದೇ ರೀತಿ ವಿದ್ಯುತ್ ಬಳಕೆಯ ಪ್ರಮಾಣವನ್ನೂ ಅಳೆಯಲಾಗುತ್ತದೆ.
 
ಉತ್ಪಾದನೆಯಾದ ವಿದ್ಯುತ್ `ವಿಆರ್‌ಎಲ್‌ಎ~ ಬ್ಯಾಟರಿಗಳಲ್ಲಿ ಸಂಗ್ರಹವಾಗುತ್ತದೆ. ಇದಕ್ಕೆ ಪ್ರತ್ಯೇಕ ನಿರ್ವಹಣೆಯೂ ಅಗತ್ಯವಿಲ್ಲ. ಇದಕ್ಕೆ ರಿಮೋಟ್ ಡಾಟಾ ಮಾನಿಟರಿಂಗ್ ಸಿಸ್ಟಮ್ ಅಳವಡಿಸಿರುವುದರಿಂದ ಕೇವಲ ಮೌಸ್ ಕ್ಲಿಕ್ ಮಾಡುವ ಮೂಲಕವೇ ಎಲ್ಲವನ್ನೂ ನಿಯಂತ್ರಿಸಬಹುದಾಗಿದೆ. 

ಈ ಹೊಸ ತಂತ್ರಜ್ಞಾನವನ್ನು ಕೇಂದ್ರ ಇಂಧನ ಸಂಶೋಧನಾ ಸಂಸ್ಥೆ (ಸಿಪಿಆರ್‌ಐ), ಎಲೆಕ್ಟ್ರಿಕಲ್ ಇನ್‌ಸ್ಪೆಕ್ಟರೇಟ್, ಸೆಂಟ್ರಲ್ ಎಲೆಕ್ಟ್ರಿಸಿಟಿ ಅಥಾರಿಟಿ (ಸಿಇಎ) ಮತ್ತು ಬೆಸ್ಕಾಂ ಅಧಿಕಾರಿಗಳು ಕನಿಷ್ಠ ಮೂರು ತಿಂಗಳುಗಳ ಕಾಲ ಅಧ್ಯಯನ ಮತ್ತು ಪರಿಶೀಲನೆ ನಡೆಸಿ ಪ್ರಮಾಣಪತ್ರವನ್ನೂ ನೀಡಿದ್ದಾರೆ.

ಇದೇ ವೇಳೆ ರವಿಶಂಕರ್ ಅವರು ಬರೆದ ಪತ್ರಕ್ಕೆ ಪ್ರತಿಕ್ರಿಯಿಸಿದ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ರೂಫ್ ಟಾಪ್ ಸೋಲಾರ್ ಫೊಟೊವೋಲ್ಟಿಕ್ ವಿದ್ಯುತ್‌ಗೆ ಯೂನಿಟ್ ಒಂದಕ್ಕೆ ್ಙ 14.50ರಂತೆ ದರ ನಿಗದಿಪಡಿಸ್ದ್ದಿದರೂ ಕೂಡ `ಕೆಇಆರ್‌ಸಿ~ ನಿಗದಿಪಡಿಸಿದ ದರಕ್ಕೆ ತಾವು ವಿದ್ಯುತ್ ಖರೀದಿಸುವುದಿಲ್ಲ ಎಂದು `ಬೆಸ್ಕಾಂ~ ಸ್ಪಷ್ಟಪಡಿಸಿದೆ. ಅಷ್ಟೇ ಅಲ್ಲ ಯೂನಿಟ್ ಒಂದಕ್ಕೆ ್ಙ  6 ರೂ ನಿಗದಿಪಡಿಸಿದೆ ಎಂದು ರವಿಶಂಕರ್ ತಿಳಿಸುತ್ತಾರೆ.

`ಹಸಿರು ಉಳಿಸುವಲ್ಲಿ ಜನರು ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು. ರೂಫ್ ಟಾಪ್ ಸೋಲಾರ್, ವಿದ್ಯುತ್ ಅನ್ನು ಬಳಕೆ ಹೆಚ್ಚಿರುವ ಸಮಯದಲ್ಲೇ ಉತ್ಪಾದಿಸುವುದರಿಂದ ಇದು `ಬೆಸ್ಕಾಂ~ನ ಸಮಸ್ಯೆಗಳನ್ನು ನಿವಾರಿಸುತ್ತದೆ ಎನ್ನುವುದು ರವಿಶಂಕರ್ ಅಭಿಪ್ರಾಯ.

ಎಲೆಕ್ಟ್ರಾನಿಕ್ ಎಂಜಿನಿಯರ್ ಆದ ರವಿಶಂಕರ್ ಅವರು ಇದಕ್ಕೆ ಬೇಕಾದ ಪ್ಯಾನೆಲ್‌ಗಳನ್ನು ಯೂರೋಪ್ ದೇಶಗಳಿಂದ ಖರೀದಿಸಿದ್ದು, ಇಂಥ ತಂತ್ರಜ್ಞಾನವನ್ನು ನಗರದ ಮನೆಗಳಲ್ಲಿ ಅಳವಡಿಸಿದಲ್ಲಿ ವಿದ್ಯುತ್ ಕಡಿತ ಎನ್ನುವುದು ದೂರದ ಮಾತಾಗುತ್ತದೆ. ಜತೆಗೆ ನಗರದ ಮನೆಗಳು ವಿದ್ಯುತ್ ಬಳಕೆಯಲ್ಲಿ ಸ್ವಾವಲಂಬಿಗಳಾಗುತ್ತಾರೆ.

ಮನೆಗಳ ಚಾವಣಿ ಮೇಲೆಯೇ ಸೌರಶಕ್ತಿಯ ಉತ್ಪಾದಿಸಿ ಬಳಸಿಕೊಳ್ಳುವ ಈ ವಿಧಾನಕ್ಕೆ ಆಗುವ ವೆಚ್ಚ ಇಲ್ಲಿಘಿಮುಖ್ಯವಲ್ಲ. ಕಾರ್ಬನ್ ಡೈಆಕ್ಸೈಡ್ ಕಡಿಮೆಯಾಗುವುದರಿಂದ ಆಗುವ ಪರಿಸರ ಸಂರಕ್ಷಣೆ, ನಿರಂತರ ವಿದ್ಯುತ್ ಲಭ್ಯತೆ, ಮಾರಾಟ ಸಾಧ್ಯತೆಗಳ ಮುಂದೆ ವೆಚ್ಚ ಗೌಣವಾಗುತ್ತದೆ.
 
ಇಂತಹ ಯೋಜನೆಗಳಿಗೆ ಕೇಂದ್ರ ಸರ್ಕಾರದ ಸಬ್ಸಿಡಿಯೂ ದೊರೆಯಲಿದೆ. ಆರಂಭದಲ್ಲಿ ಮಾಡಿದ ವೆಚ್ಚದ ಎದುರು ದೀರ್ಘಾವಧಿಯ ಲಾಭಗಳು ಹೆಚ್ಚು ಮುಖ್ಯವಾಗುತ್ತದೆ ಎಂದು ರವಿಶಂಕರ್ ಅಭಿಪ್ರಾಯಪಡುತ್ತಾರೆ.

 ಹೆಚ್ಚೆಚ್ಚು ಜನರು ಇದನ್ನು ಬಳಸಲು ಆರಂಭಿಸಿದಲ್ಲಿ ಪ್ಯಾನೆಲ್‌ಗಳು ಇನ್ನೂ ಕಡಿಮೆ ವೆಚ್ಚದಲ್ಲಿ ದೊರೆಯುತ್ತದೆ ಎಂದೂ ಅವರು ಅಭಿಪ್ರಾಯ ಪಡುತ್ತಾರೆ. ಮಾಹಿತಿಗೆ  ಅಂತರಜಾಲ ತಾಣ ಸಂಪರ್ಕಿಸಿ.www.sunpvenergy.com /
e-mail: ravi@sunpvenergy.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.