ADVERTISEMENT

ವಿಮಾ ಕ್ಷೇತ್ರ ಅಲ್ಪ ಪ್ರಗತಿ: ಸಿಐಐ

​ಪ್ರಜಾವಾಣಿ ವಾರ್ತೆ
Published 24 ಜೂನ್ 2013, 19:59 IST
Last Updated 24 ಜೂನ್ 2013, 19:59 IST

ನವದೆಹಲಿ(ಪಿಟಿಐ): ಭಾರತದ ವಿಮಾ ವಲಯ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 5ಕ್ಕಿಂತ ಕಡಿಮೆ ಬೆಳವಣಿಗೆ ಕಾಣಲಿದೆ ಎಂದು `ಭಾರತೀಯ ಕೈಗಾರಿಕಾ    ಒಕ್ಕೂಟ'(ಸಿಐಐ) ಅಂದಾಜು ಮಾಡಿದೆ.

ದೇಶದಲ್ಲಿನ 30 ಪ್ರಮುಖ ವಿಮಾ ಕಂಪೆನಿಗಳಲ್ಲಿ ಸಮೀಕ್ಷೆ ನಡೆಸಿರುವ `ಸಿಐಐ', ಜೀವ ವಿಮಾ ವಲಯಕ್ಕೆ ಹೋಲಿಸಿದರೆ, ವಾಹನ-ಕೈಗಾರಿಕೆ ಮೊದಲಾದ ಸರಕು-ಸಂಸ್ಥೆಗಳಿಗೆ ವಿಮಾ ಸುರಕ್ಷೆ ಒದಗಿಸಲು `ಸಾಮಾನ್ಯ ವಿಮಾ' ಕ್ಷೇತ್ರ ಹೆಚ್ಚಿನ ಬೆಳವಣಿಗೆ ದಾಖಲಿಸುವ ವಿಶ್ವಾಸದಲ್ಲಿದೆ. ಜೀವ ವಿಮೆಗೆ ಹೊರತಾದ ವಿಭಾಗದ ವಿಮಾ ಕಂಪೆನಿಗಳಲ್ಲಿ ಶೇ 60ರಷ್ಟು ಸಂಸ್ಥೆಗಳು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 10ರಷ್ಟು ಪ್ರಗತಿ ಕಾಣುವ ವಿಶ್ವಾಸದಲ್ಲಿವೆ ಎಂದು ಹೇಳಿದೆ.

ಸಮೀಕ್ಷೆಗೊಳಗಾದ ಜೀವ ವಿಮಾ ಕಂಪೆನಿಗಳಲ್ಲಿ ಅರ್ಧದಷ್ಟು ಸಂಸ್ಥೆಗಳು `ನಕಾರಾತ್ಮಕ ಬೆಳವಣಿಗೆ'ಯ ಚಿಂತೆಯಲ್ಲಿವೆ. ಹಾಗಾಗಿ ವಿಮಾ ಕ್ಷೇತ್ರ  ಬೆಳವಣಿಗೆ ಕಂಡು ಮುಂದಿನ ಹಂತಕ್ಕೆ ಪ್ರವೇಶಿಸಬೇಕಿದ್ದರೆ ನಿಯಂತ್ರಣ ಕಾಯ್ದೆಗಳಿಗೆ ಸೂಕ್ತ ತಿದ್ದುಪಡಿ ಮತ್ತು ಉದ್ಯಮ ಉತ್ತೇಜನ ನೀತಿ ರೂಪಿಸಬೇಕಿದೆ. ಆ ಮೂಲಕ ವಿಮಾ ವಲಯಕ್ಕೆ ಶಕ್ತಿ ತುಂಬಬೇಕಿದೆ ಎಂದು `ಸಿಐಐ' ಮಹಾ ನಿರ್ದೇಶಕ ಚಂದ್ರಜಿತ್ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.

ವಿಮಾ ಕ್ಷೇತ್ರಕ್ಕೆ ವಿಧಿಸಲಾಗಿರುವ `ನೇರ ವಿದೇಶಿ ಹೂಡಿಕೆ'(ಎಫ್‌ಡಿಐ) ಮಿತಿಯನ್ನು ಶೇ 26ರಿಂದ ಶೇ 49ಕ್ಕೆ ಹೆಚ್ಚಿಸಬೇಕಿದೆ ಎಂದೂ ಸಮೀಕ್ಷಾ ವರದಿಯಲ್ಲಿ ಗಮನ ಸೆಳೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.