ADVERTISEMENT

ವಿಮೆ: ಹೆಚ್ಚಿದ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2011, 19:30 IST
Last Updated 25 ಸೆಪ್ಟೆಂಬರ್ 2011, 19:30 IST

ನವದೆಹಲಿ (ಪಿಟಿಐ): ದೇಶದ ಶೇ 85ರಷ್ಟು ಮಧ್ಯಮ ವರ್ಗದ ಜನತೆ ಬದಲಾಗುತ್ತಿರುವ ತಮ್ಮ ಜೀವನ ಶೈಲಿಗೆ ತಕ್ಕಂತೆ ಹೆಚ್ಚುವರಿ ವಿಮೆ ಯೋಜನೆಗಳ ಅಗತ್ಯ ಇದೆ ಎಂದು ಹೇಳಿದ್ದಾರೆ.

ಮಧ್ಯಮ ವರ್ಗದ ಖರ್ಚು ಮಾಡುವ ಸಾಮರ್ಥ್ಯ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಉತ್ತಮ ಆರೋಗ್ಯ, ಉತ್ತಮ ಶಿಕ್ಷಣ, ಉತ್ತಮ ವಸತಿಗಾಗಿ ಹೆಚ್ಚುವರಿ ವಿಮೆ ಸೌಲಭ್ಯಗಳ ಅಗತ್ಯ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು `ಐಎನ್‌ಜಿ~ ವಿಮಾ ಸಂಸ್ಥೆ ನಡೆಸಿದ ಏಷ್ಯಾ-ಪೆಸಿಫಿಕ್ ಸಮೀಕ್ಷೆ ತಿಳಿಸಿದೆ.

ಸಮೀಕ್ಷಾರ್ಥಿಗಳಲ್ಲಿ ಶೇ 75ರಷ್ಟು ಜನ ತಮಗೆ ಇನ್ನೂ ಹೆಚ್ಚಿನ ವಿಮೆ ಸೌಲಭ್ಯ ಬೇಕು ಹಾಗೂ ಈ ವರ್ಷಾಂತ್ಯದೊಳಗೆ ಹೊಸ ವಿಮೆ ಯೋಜನೆಗಳನ್ನು ಖರೀದಿಸುವುದಾಗಿ  ಹೇಳಿದ್ದಾರೆ ಎಂದು `ಐಎನ್‌ಜಿ~ ವಿಮೆಯ ಏಷ್ಯಾ -ಪೆಸಿಫಿಕ್ ವಲಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಫ್ರಾಂಕ್‌ಕೋಸ್ಟರ್ ತಿಳಿಸಿದ್ದಾರೆ.

ಶೇ 45ರಷ್ಟು ಜನರು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚುವರಿ ವಿಮಾ ಸೌಲಭ್ಯ ಬೇಕು ಎಂದು ಹೇಳಿದ್ದಾರೆ. ನಿವೃತ್ತಿ ವಿಮೆ ಯೋಜನೆಗಳಿಗೂ ಗರಿಷ್ಠ ಮಟ್ಟದ ಬೇಡಿಕೆ ವ್ಯಕ್ತವಾಗಿದೆ. ಅವಿಭಕ್ತ ಕುಟುಂಬ ವ್ಯವಸ್ಥೆಯಿಂದ ವಿಭಕ್ತ ಕುಟುಂಬಗಳಿಗೆ ಹೆಚ್ಚಿನವರು ಬದಲಾಗುತ್ತಿರುವುದರಿಂದ  `ನಿವೃತ್ತಿ~ ವಿಮೆ ಯೋಜನೆಗಳಿಗೆ ಬೇಡಿಕೆ ಹೆಚ್ಚಿದೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕು ಎನ್ನುವ ಮಧ್ಯಮ ವರ್ಗದ ಮನಸ್ಥಿತಿ ಕೂಡ `ಶಿಕ್ಷಣ~ ವಿಮೆ ಬೇಡಿಕೆ ಹೆಚ್ಚುವಂತೆ ಮಾಡಿದೆ ಎಂದು ಸಮೀಕ್ಷೆ ಹೇಳಿದೆ.

ಭಾರತದ ಮಧ್ಯಮ ವರ್ಗದ  ಜನತೆ, ತಮ್ಮ ಮಕ್ಕಳಿಗೆ 3 ವರ್ಷ ತುಂಬುವುದರೊಳಗೇ `ಶಿಕ್ಷಣ~ ವಿಮೆ ಮಾಡಿಸಲು ಇಷ್ಟಪಡುತ್ತಾರೆ. ಈ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಹೆಚ್ಚುತ್ತಿದೆ ಎಂದೂ ಸಮೀಕ್ಷೆ ತಿಳಿಸಿದೆ.

ಭಾರತ, ಚೀನಾ, ಹಾಂಕಾಂಗ್, ಮಲೇಷ್ಯಾ, ಥಾಯ್ಲೆಂಡ್  ಮತ್ತು ಜಪಾನ್‌ನಲ್ಲಿ ಸುಮಾರು 2,329  ಮಧ್ಯಮ ವರ್ಗದ ಜನರನ್ನು ಸಂದರ್ಶಿಸಿ `ಐಎನ್‌ಜಿ~ ಈ ಸಮೀಕ್ಷೆ ನಡೆಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.