ADVERTISEMENT

ವಿಲಾಸಿ ಬದುಕೂ ದುಬಾರಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2011, 19:30 IST
Last Updated 2 ಸೆಪ್ಟೆಂಬರ್ 2011, 19:30 IST

ನವದೆಹಲಿ (ಪಿಟಿಐ): ಆಹಾರ ಮತ್ತು ಇಂಧನ ಬೆಲೆಗಳು ನಿರಂತರವಾಗಿ ಏರುತ್ತಿರುವುದು ಜನಸಾಮಾನ್ಯರಿಗೆ ಸಾಕಷ್ಟು ಬಿಸಿ ಮುಟ್ಟಿಸ್ದ್ದಿದರೂ, ಇದರಿಂದ ಶ್ರೀಮಂತರೇನೂ ಪಾರಾಗಿಲ್ಲ. ಅವರ ವಿಲಾಸಿ ಬದುಕೂ ದುಬಾರಿಗೊಂಡಿದೆ.

ಭಾರತ ಸೇರಿದಂತೆ ಏಷ್ಯಾ ಪೆಸಿಫಿಕ್ ಪ್ರದೇಶದ ದೇಶಗಳಲ್ಲಿ, ಶ್ರೀಮಂತರ ಐಷಾರಾಮಿ ಬದುಕು ಕೂಡ ಇತ್ತೀಚಿನ ದಿನಗಳಲ್ಲಿ ಬೆಲೆ ಏರಿಕೆಯಿಂದ ಸಾಕಷ್ಟು ದುಬಾರಿಗೊಂಡಿದೆ. ಹಣದುಬ್ಬರದಿಂದ ಶ್ರೀಮಂತ ಕುಳಗಳಿಗೆ ತಂದೊಡ್ಡಿರುವ ತಲೆಬಿಸಿ ಬಗ್ಗೆ ಇದೇ ಮೊದಲ ಬಾರಿಗೆ ನಡೆದಿರುವ ಅಧ್ಯಯನವು, ಹಲವು ಕುತೂಹಲಕಾರಿ ಸಂಗತಿ ಬಹಿರಂಗಗೊಳಿಸಿದೆ.

ಜೀವನಶೈಲಿಯ ದುಬಾರಿ ಉತ್ಪನ್ನಗಳು ಕೂಡ  ಭಾರತ ಸೇರಿದಂತೆ ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ ಕಳೆದ ಒಂದು ವರ್ಷದಲ್ಲಿ ಶೇ 12ರಷ್ಟು ತುಟ್ಟಿಯಾಗಿವೆ ಎಂದು ಸ್ವಿಟ್ಜರ್‌ಲೆಂಡ್‌ನ ಪ್ರಮುಖ ಬ್ಯಾಂಕ್ ಜೂಲಿಯಸ್ ಬೇರ್ ನಡೆಸಿದ ಅಧ್ಯಯನವು ತಿಳಿಸಿದೆ.

ಶ್ರೀಮಂತರು ಬಳಸುವ ದುಬಾರಿ ಜೀವನಶೈಲಿ ಉತ್ಪನ್ನಗಳ ಬೆಲೆ ಅಳೆಯುವ `ಜೀವನಶೈಲಿ ಸೂಚ್ಯಂಕ~ವು  ಒಟ್ಟಾರೆ ಗ್ರಾಹಕರ ಬೆಲೆ ಸೂಚ್ಯಂಕಕ್ಕಿಂತ  ಅಧಿಕ ಮಟ್ಟದಲ್ಲಿ ಇದೆ. ಗ್ರಾಹಕರ ಬೆಲೆ ಸೂಚ್ಯಂಕವು  ಶೇ 5ರಷ್ಟಿದ್ದರೆ, ಶ್ರೀಮಂತರ ಜೀವನಶೈಲಿಯ ಸೂಚ್ಯಂಕವು ಶೇ 12ರಷ್ಟಾಗಿದೆ.

ಶ್ರೀಮಂತರು ಬಳಸುವ ವೈವಿಧ್ಯಮಯ ಉತ್ಪನ್ನಗಳು, ಸಿಗಾರ್, ಕ್ಲಬ್ ಸದಸ್ಯತ್ವ, ಮದ್ಯ ಮುಂತಾದ 20 ವಿಲಾಸಿ ಸರಕುಗಳ ಬೆಲೆಗಳು ಮುಂಬೈ, ಸಿಂಗಪುರ, ಶಾಂಘಾಯ್ ಮತ್ತು ಹಾಂಕಾಂಗ್‌ಗಳಲ್ಲಿ ಗಮನಾರ್ಹ ಏರಿಕೆ ಕಂಡಿವೆ. ಒಂದು ವರ್ಷದ ಅವಧಿಯಲ್ಲಿ ಈ ಹೆಚ್ಚಳ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.