ADVERTISEMENT

ವಿಶ್ವಾಸ ಇರುವವರೆಗೆ ಅಮೆರಿಕ ಜತೆ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 19:30 IST
Last Updated 12 ಫೆಬ್ರುವರಿ 2011, 19:30 IST

ಯಲಹಂಕ ವಾಯುನೆಲೆ: ‘ಆಧುನಿಕ ಶಸ್ತ್ರಾಸ್ತ್ರಗಳನ್ನು ತಯಾರಿಸಲು ಅಮೆರಿಕ ಜೊತೆ ಮಾಡಿಕೊಂಡಿರುವ ಒಪ್ಪಂದವು ವಿಶ್ವಾಸದ ತಳಹದಿಯ ಮೇಲೆ ನಿಂತಿದೆ. ಎಲ್ಲಿಯವರೆಗೆ ಅಮೆರಿಕ ವಿಶ್ವಾಸ ಇಡುತ್ತದೆಯೋ ಅಲ್ಲಿಯವರೆಗೆ ಈ ಒಪ್ಪಂದ ಉಳಿಯುತ್ತದೆ’ ಎಂದು ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ವಿ.ಕೆ. ಸಾರಸ್ವತ್ ಖಡಾಖಂಡಿತವಾಗಿ ಹೇಳಿದರು.

‘ಏರೊ ಇಂಡಿಯಾ’ ಪ್ರದರ್ಶನದ ಹಿನ್ನೆಲೆಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಸಹಭಾಗಿತ್ವದಲ್ಲಿ ತಯಾರಿಸಲಾಗುವ ರಕ್ಷಣಾ ಸಾಮಗ್ರಿಗಳನ್ನು ಬಳಸುವ ಮೊದಲು ಅಮೆರಿಕ ಸರ್ಕಾರದ ಹಲವು ವಿಭಾಗಗಳಿಂದ ಅನುಮತಿ ಪಡೆಯಬೇಕು ಎನ್ನುವುದು ಅದರ ನೀತಿಯಾಗಿದೆ. ಒಪ್ಪಂದದಡಿ ಶಸ್ತ್ರಾಸ್ತ್ರಗಳನ್ನು ತಯಾರಿಸಲಾಗಿದ್ದರೂ ಪುನಃ ಅನುಮತಿ ಪಡೆಯಬೇಕೆನ್ನುವ ನೀತಿ ಎಲ್ಲಿಯವರೆಗೆ ಬಾಳುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ’ ಎಂದು ಅವರು ತಿಳಿಸಿದರು.‘ಶಸ್ತ್ರಾಸ್ತ್ರಗಳ ತಯಾರಿಕೆ ಅಲ್ಲದೇ ನ್ಯಾನೊ ತಂತ್ರಜ್ಞಾನ, ತರಬೇತಿ, ಶಿಕ್ಷಣ ಹಾಗೂ ಇತರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸುಮಾರು 30 ಕ್ಷೇತ್ರಗಳಲ್ಲಿ ಜಂಟಿಯಾಗಿ ಕಾರ್ಯನಿರ್ವಹಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾತ್ರ ‘ಅನುಮತಿ’ ಪಡೆದುಕೊಳ್ಳಬೇಕೆನ್ನುವ ನೀತಿಯನ್ನು ಅಮೆರಿಕ ಹಾಕಿದೆ’ ಎಂದು ಹೇಳಿದರು.

ಬಾಹ್ಯಾಕಾಶ ಯುದ್ಧ ಭೀತಿ:‘ಬಾಹ್ಯಾಕಾಶ ಯುದ್ಧಗಳನ್ನು ಭಾರತ ಬಯಸುವುದಿಲ್ಲ. ಆದರೆ, ನಮ್ಮ ಉಪಗ್ರಹಗಳನ್ನು ರಕ್ಷಿಸಿಕೊಳ್ಳಲು ಬೇಕಾದ ಎಲ್ಲ ವ್ಯವಸ್ಥೆಯನ್ನು ನಾವು ಹೊಂದಿದ್ದೇವೆ’ ಎಂದು ಸಾರಸ್ವತ್ ಹೇಳಿದರು.‘ಇದಕ್ಕಿಂತ ಮುಂಚೆ ಕೇವಲ ಗಡಿ ಸಮಸ್ಯೆಯ ಬಗ್ಗೆ ಗಮನಹರಿಸಲಾಗುತ್ತಿತ್ತು. ಆದರೆ, ಈಗ ಬಾಹ್ಯಾಕಾಶ ಸುರಕ್ಷತೆ ಬಗ್ಗೆ ಹೆಚ್ಚು ಗಮನಹರಿಸಬೇಕಾಗಿದೆ’ ಎಂದರು.

ADVERTISEMENT

ಶೀಘ್ರದಲ್ಲಿ ಪೂರ್ಣ:ಚಿತ್ರದುರ್ಗದಲ್ಲಿ ನಿರ್ಮಾಣವಾಗುತ್ತಿರುವ ‘ಬಾಂಬ್ ಪರೀಕ್ಷಾ ಕೇಂದ್ರ’ ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ. ಈಗಾಗಲೇ ಅಲ್ಲಿ ಲಘು ಯುದ್ಧ ವಿಮಾನಗಳು ಹಾರಾಟವನ್ನು ನಡೆಸುತ್ತಿವೆ’ ಎಂದು ಸಾರಸ್ವತ್ ಹೇಳಿದರು.

ನಿರ್ಭಯ ಯೋಜನೆ:ನೌಕಾ ಕ್ಷಿಪಣಿ ‘ನಿರ್ಭಯ’ ನಿರ್ಮಾಣ ಬಹುತೇಕ ಅಂತಿಮವಾಗಿದ್ದು, ಮುಂದಿನ ವರ್ಷದ ಆರಂಭದಲ್ಲಿ ಮೊದಲ ಪರೀಕ್ಷೆ ನಡೆಸುವ ಸಾಧ್ಯತೆ ಇದೆ. ಹೈಪರ್‌ಸಾನಿಕ್ ನೌಕಾ ಕ್ಷಿಪಣಿಯ ನಿರ್ಮಾಣ ಕೂಡ ನಡೆದಿದೆ. ತುಂಬಾ ಸಂಕೀರ್ಣವಾದ ಈ ತಂತಜ್ಞಾನವನ್ನು ಅಮೆರಿಕ ಹಾಗೂ ಆಸ್ಟ್ರೇಲಿಯಾ ಮಾತ್ರ ಹೊಂದಿವೆ’ ಎಂದರು.

ವಿ.ಕೆ. ಸಾರಸ್ವತ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.