ADVERTISEMENT

ವೈಮಾನಿಕ ತಂತ್ರಜ್ಞಾನ: ಏಷ್ಯಾದತ್ತ ಅಲ್ಟ್ರಾನ್ ಚಿತ್ತ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2012, 19:30 IST
Last Updated 26 ಏಪ್ರಿಲ್ 2012, 19:30 IST
ವೈಮಾನಿಕ ತಂತ್ರಜ್ಞಾನ: ಏಷ್ಯಾದತ್ತ ಅಲ್ಟ್ರಾನ್ ಚಿತ್ತ
ವೈಮಾನಿಕ ತಂತ್ರಜ್ಞಾನ: ಏಷ್ಯಾದತ್ತ ಅಲ್ಟ್ರಾನ್ ಚಿತ್ತ   

ಬೆಂಗಳೂರು: ವೈಮಾನಿಕ, ರಕ್ಷಣಾ ಕ್ಷೇತ್ರ, ರೈಲ್ವೆ  ಹಾಗೂ ಆಟೊಮೊಬೈಲ್ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ತಂತ್ರಜ್ಞಾನ ಆವಿಷ್ಕಾರ ಮತ್ತು ಅತ್ಯಾಧುನಿಕ ಎಂಜಿನಿಯರಿಂಗ್ ಸೇವೆ ಒದಗಿಸುವ ಕಂಪನಿಯಾಗಿರುವ ಫ್ರಾನ್ಸ್ ನ `ಅಲ್ಟ್ರಾನ್~, ಇದೀಗ ಭಾರತದ ದೃಢವಾಗಿ ನೆಲೆಯೂರುವ ಮೂಲಕ ದಕ್ಷಿಣ ಏಷ್ಯಾ ಮಾರುಕಟ್ಟೆಯಲ್ಲಿ ಮಹತ್ವದ ಪಾಳು ಪಡೆಯಲು ಯೋಜಿಸಿದೆ.

20 ದೇಶಗಳಲ್ಲಿ ಚಟುವಟಿಕೆ, 17261 ಸಿಬ್ಬಂದಿ ಮತ್ತು 1420 ದಶಲಕ್ಷ ಯೂರೋ ಮೌಲ್ಯದ ಕಂಪನಿಯಾದ `ಅಲ್ಟ್ರಾನ್~ 2010ರಲ್ಲಿ ಸೌರಶಕ್ತಿಯಿಂದಲೇ ಹಾರುವ ವಿಮಾನ ಆವಿಷ್ಕರಿಸುವ ಮೂಲಕ ವಿಶ್ವದ ಗಮನ ಸೆಳೆದಿದೆ ಎಂದು ಅಲ್ಟ್ರಾನ್‌ನ ಮುಖ್ಯ ತಾಂತ್ರಿಕ ಅಧಿಕಾರಿ ಮೈಕೆಲ್ ಬೆಯ್ಲಿ ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

2008ರಲ್ಲಿ ಭಾರತದಲ್ಲಿ ಕಾರ್ಯಾಚರಣೆ ಆರಂಭಿಸಿದ ಕಂಪನಿ ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿದೆ. ನೊಯಿಡಾದಲ್ಲಿ ಅಣು ಆಧಾರಿತ ಇಂಧನ ಮತ್ತು ದೂರಸಂಪರ್ಕ ಕ್ಷೇತ್ರಕ್ಕೆ ಸಂಬಂಧಿಸಿದ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. ಚೆನ್ನೈನಲ್ಲಿಯೂ ಕಂಪನಿ ಕಚೇರಿ ಇದೆ. ಭಾರತದಲ್ಲಿನ ಚಟುವಟಿಕೆ ಶೇ. 60ರಷ್ಟು ವೈಮಾನಿಕ ತಂತ್ರಜ್ಞಾನ ಕುರಿತಾಗಿಯೇ ಇರಲಿದೆ.

ಭಾರತದಲ್ಲಿ ಸದ್ಯ 400 ಸಿಬ್ಬಂದಿ ಇ್ದ್ದದು, ಇನ್ನೆರಡು ವರ್ಷದಲ್ಲಿ 2000ಕ್ಕೆ ಹೆಚ್ಚಿಸಲಿದ್ದೇವೆ. ಅಲ್ಲದೆ ಕೆಲವು ಕಂಪನಿಗಳನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ದಕ್ಷಿಣ ಏಷ್ಯಾದಲ್ಲಿ ಸಾಮರ್ಥ್ಯ ಮತ್ತು ಚಟುವಟಿಕೆ ವಿಸ್ತರಿಸಿಕೊಳ್ಳಲಿದ್ದೇವೆ ಎಂದು  `ಅಲ್ಟ್ರಾನ್ ಟೆಕ್ನಾಲಜೀಸ್ ಇಂಡಿಯ~ ಸಿಇಒ ಸಂಜಯ್ ಕುಮಾರ್ ವಿವರಿಸಿದರು.

ಆಲ್ಟ್ರಾನ್ ಅಭಿವೃದ್ಧಿಪಡಿಸಿದ `ಸೋಲಾರ್ ಇಂಪಲ್ಸ್ ಏರ್‌ಕ್ರಾಫ್ಟ್~ ಸಂಪೂರ್ಣ ಸೌರಶಕ್ತಿಯನ್ನೇ ಆಧರಿಸಿದ ವಿಶ್ವದ ಮೊದಲ ವಿಮಾನವಾಗಿದೆ. ಒಂದೇ ಆಸನದ ಈ ವಿಮಾನ ಹಗಲು-ರಾತ್ರಿ ಸೇರಿ ಸತತ 26 ಗಂಟೆ 10 ನಿಮಿಷ 19 ಸೆಕೆಂಡ್ ಹಾರಾಟ ನಡೆಸಿದೆ.

ಸ್ವಯಂಚಾಲಿತ ವ್ಯವಸ್ಥೆಯುಳ್ಳ ಈ ವಿಮಾನ ಸದ್ಯ ಪ್ರಾಯೋಗಿಕ ಹಂತದಲ್ಲಿದ್ದು, ಭವಿಷ್ಯದಲ್ಲಿ ವಾಣಿಜ್ಯ ಬಳಕೆಗೆ ಪರಿವರ್ತಿಸಲು ಇನ್ನೂ ಕೆಲವು ಅಭಿವೃದ್ಧಿ ಕೆಲಸಗಳು ಆಗಬೇಕಿವೆ ಎಂದು ಸಂಜಯ್ ಕುಮಾರ್ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.