ADVERTISEMENT

ಶೀಘ್ರವೇ ಖಾತೆ ಸ್ಥಿರ ಸಂಖ್ಯೆ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 19:30 IST
Last Updated 3 ಜನವರಿ 2012, 19:30 IST
ಶೀಘ್ರವೇ ಖಾತೆ ಸ್ಥಿರ ಸಂಖ್ಯೆ ಸೌಲಭ್ಯ
ಶೀಘ್ರವೇ ಖಾತೆ ಸ್ಥಿರ ಸಂಖ್ಯೆ ಸೌಲಭ್ಯ   

ನವದೆಹಲಿ (ಪಿಟಿಐ): ಬ್ಯಾಂಕ್ ಗ್ರಾಹಕರು ತಮ್ಮ ಉಳಿತಾಯ ಖಾತೆ ಸಂಖ್ಯೆ ಉಳಿಸಿಕೊಂಡು, ಹೊಸ ಬ್ಯಾಂಕ್‌ಗೆ ಖಾತೆ ಬದಲಾಯಿಸುವ (ಸೇವಿಂಗ್ಸ್ ಬ್ಯಾಂಕ್ ಅಕೌಂಟ್ ನಂಬರ್ ಪೋರ್ಟೆಬಿಲಿಟಿ) ಸೌಲಭ್ಯ ಜಾರಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯಪ್ರವೃತ್ತವಾಗಿದೆ.

ಈ ಸೌಲಭ್ಯ ಜಾರಿಗೆ ಬಂದರೆ, ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯನ್ನು ಸ್ಥಿರವಾಗಿ ಉಳಿಸಿಕೊಂಡು  ತಮ್ಮೆಲ್ಲ ವೈಯಕ್ತಿಕ ವಿವರಗಳನ್ನು ಮತ್ತೊಮ್ಮೆ ಒದಗಿಸುವ ಕಿರಿಕಿರಿ ಇಲ್ಲದೇ ಬೇರೆ ಬ್ಯಾಂಕ್‌ನಲ್ಲಿ ಹೊಸ ಖಾತೆ ತೆರೆಯುವ ಸೌಲಭ್ಯ ದೊರೆಯಲಿದೆ.  ಕಳೆದ  ವರ್ಷದ  ಅಕ್ಟೋಬರ್ ನಲ್ಲಿ ಭಾರತೀಯ ರಿಸ  ರ್ವ್ ಬ್ಯಾಂಕ್ ಉಳಿತಾಯ ಖಾತೆ ಮೇಲಿನ ಬಡ್ಡಿ ದರಗಳನ್ನು ನಿಯಂತ್ರಣ ಮುಕ್ತಗೊಳಿಸಿದೆ. ಹೊಸ ಗ್ರಾಹಕರನ್ನು ಸೆಳೆಯಲು ಬ್ಯಾಂಕ್‌ಗಳು ಹೆಚ್ಚಿನ ಬಡ್ಡಿ ದರದ ಆಮಿಷ ಒಡ್ಡುತ್ತಿವೆ.

ಕೆಲ ಖಾಸಗಿ ಬ್ಯಾಂಕ್‌ಗಳು ಗರಿಷ್ಠ ಶೇ 7ರವರೆಗೆ ಬಡ್ಡಿ ದರ ಹೆಚ್ಚಿಸಿವೆ. ಹೆಚ್ಚು ಬಡ್ಡಿ ನೀಡುವ ಬ್ಯಾಂಕ್‌ಗಳಿಗೆ ತಮ್ಮ ಖಾತೆ ಬದಲಾಯಿಸಿ ಹೆಚ್ಚಿನ ಪ್ರಮಾಣದ ಬಡ್ಡಿ ಆದಾಯ ಪಡೆಯಲು ಇದು ಗ್ರಾಹಕರು ನೆರವಾಗಲಿದೆ.
ತಾಂತ್ರಿಕ ಅಡಚಣೆ: ಈ ಸೌಲಭ್ಯ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಇದಕ್ಕೆ ಕೆಲ ತಾಂತ್ರಿಕ ಅಡಚಣೆಗಳು ಎದುರಾಗಿವೆ. ಅವುಗಳನ್ನೆಲ್ಲ ಗುರುತಿಸಲಾಗಿದ್ದು, ಶೀಘ್ರದಲ್ಲಿಯೇ ಈ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಹಣಕಾಸು ಸೇವೆಗಳ ಕಾರ್ಯದರ್ಶಿ ಡಿ. ಕೆ. ಮಿತ್ತಲ್, ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

`ಬ್ಯಾಂಕ್ ಖಾತೆ ಸ್ಥಿರ ಸಂಖ್ಯೆ~ ಅನುಕೂಲತೆ ಜಾರಿಗೆ ತರಲು ವಾಣಿಜ್ಯ ಬ್ಯಾಂಕ್‌ಗಳು ಖಾತೆದಾರರನ್ನು ಗುರುತಿಸುವ ಸಂಹಿತೆ, `ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ~ (ಕೆವೈಸಿ) ನಿಯಮ ಮತ್ತು ಯಾವುದೇ ಶಾಖೆಯಿಂದ ಬ್ಯಾಂಕಿಂಗ್ ವಹಿವಾಟು ನಿರ್ವಹಿಸುವ (ಕೋರ್ ಬ್ಯಾಂಕಿಂಗ್)  ಸೇವೆಯಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಿದೆ.

ಕಳೆದ ವರ್ಷ ಮೊಬೈಲ್ (ಎಂಎನ್‌ಪಿ) ಮತ್ತು ಆರೋಗ್ಯ ವಿಮೆ ರಂಗದಲ್ಲಿಯೂ ಸರ್ಕಾರ ಇಂತಹ ಸೌಲಭ್ಯ ಜಾರಿಗೆ ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.