ADVERTISEMENT

ಷೇರುಪೇಟೆಯಲ್ಲಿ ಗರಿಷ್ಠ ಏರಿಳಿತ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2011, 19:30 IST
Last Updated 25 ಸೆಪ್ಟೆಂಬರ್ 2011, 19:30 IST

ನವದೆಹಲಿ (ಪಿಟಿಐ):  ಜಾಗತಿಕ ಆರ್ಥಿಕ ಅಸ್ಥಿರತೆ ಮತ್ತು ರೂಪಾಯಿ ಅಪಮೌಲ್ಯ ಈ ವಾರ ಮುಂಬೈ ಷೇರುಪೇಟೆಯಲ್ಲಿ ಗರಿಷ್ಠ ಮಟ್ಟದ ಏರಿಳಿತಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಡಾಲರ್ ಎದುರು ರೂಪಾಯಿ ಮೌಲ್ಯ ದಿನೇ ದಿನೇ ಕುಸಿಯುತ್ತಿದೆ.  ಆಮದು ಕ್ಷೇತ್ರಕ್ಕೆ ಸಂಬಂಧಿಸಿದ ವಹಿವಾಟುಗಳಲ್ಲಿ ಹಣ ತೊಡಗಿಸಿದವರು ಇದರಿಂದ ಹೆಚ್ಚಿನ ನಷ್ಟ ಅನುಭವಿಸತ್ತಿದ್ದಾರೆ.

ಇನ್ನೊಂದೆಡೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಡಾಲರ್ ಬೇಡಿಕೆ ಹೆಚ್ಚಾಗಿದ್ದು, ಚಿನ್ನ- ಬೆಳ್ಳಿ ಮೇಲಿನ ಹೂಡಿಕೆಯೂ ಕಡಿಮೆಯಾಗುತ್ತಿದೆ. ಈ ಎಲ್ಲ ಸಂಗತಿಗಳು ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು `ಐಐಎಫ್‌ಎಲ್~ನ ಸಂಶೋಧನಾ ಮುಖ್ಯಸ್ಥ ಅಮರ್ ಅಂಬಾನಿ ಅಭಿಪ್ರಾಯಪಟ್ಟಿದ್ದಾರೆ.

ದೇಶದ ಆಂತರಿಕ ಪರಿಸ್ಥಿತಿಗಳು ಸುಧಾರಿಸಿರಬಹುದು. ಆದರೆ, ಜಾಗತಿಕ ಒತ್ತಡಗಳು ನಿರಂತರವಾಗಿ ಕಾಡುತ್ತಿವೆ. ಭಾರತ, ಚೀನಾ ಉತ್ತಮ ಸ್ಥಿತಿಯಲ್ಲಿ ಇದ್ದರೂ, ಯೂರೋಪ್, ಅಮೆರಿಕದ ಬಿಕ್ಕಟ್ಟಿನ ಪರಿಣಾಮಗಳನ್ನು ಎದುರಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಅಲ್ಪಾವಧಿ ಪರಿಣಾಮಗಳು ಗಂಭೀರ ಸ್ವರೂಪದ ನಷ್ಟವನ್ನು ಉಂಟು ಮಾಡುತ್ತವೆ. ಇದಕ್ಕೆ ಕಳೆದ ವಾರದ ವಹಿವಾಟು  ಉತ್ತಮ ಉದಾಹರಣೆ. ವಾರಾಂತ್ಯದಲ್ಲಿ ಸೂಚ್ಯಂಕ ಒಟ್ಟು 772 ಅಂಶಗಳಷ್ಟು ಕುಸಿತ ಕಂಡಿದೆ. ಹೂಡಿಕೆದಾರರ ಸಂಪತ್ತು ಗಣನೀಯವಾಗಿ ಕರಗಿದೆ ಎಂದು ಮೋತಿಲಾಲ್ ಓಸ್ವಾಲ್ ಸೆಕ್ಯುರಿಟೀಸ್‌ನ ಉಪಾಧ್ಯಕ್ಷ ಪರಾಗ್ ಡಾಕ್ಟರ್ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.