ADVERTISEMENT

ಷೇರುಪೇಟೆಯಲ್ಲಿ ಚೇತರಿಕೆಯ ಗಾಳಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 19:30 IST
Last Updated 28 ಫೆಬ್ರುವರಿ 2011, 19:30 IST

ಮುಂಬೈ (ಪಿಟಿಐ): ಕೇಂದ್ರ  ಬಜೆಟ್‌ನಲ್ಲಿ ವಿದೇಶಿ ವಿತ್ತೀಯ ಸಾಂಸ್ಥಿಕ ಹೂಡಿಕೆಯ (ಎಫ್‌ಐಐ) ಮಿತಿಯನ್ನು ಹೆಚ್ಚಿಸುವುದಾಗಿ ಪ್ರಕಟಿಸುತ್ತಿದ್ದಂತೆ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಏರಿಕೆ ಪ್ರದರ್ಶಿಸಿತು. ಮ್ಯೂಚುವಲ್ ಫಂಡ್‌ನಲ್ಲಿ ವಿದೇಶಿ ಹೂಡಿಕೆ ಹಾಗೂ ಕಾರ್ಪೊರೇಟ್ ಬಾಂಡ್‌ಗಳಲ್ಲಿ ಸಾಗರೋತ್ತರ ಹೂಡಿಕೆಗೆ ಹೆಚ್ಚಿನ ಅವಕಾಶವನ್ನು ಪ್ರಸಕ್ತ ಬಜೆಟ್‌ನಲ್ಲಿ ಕಲ್ಪಿಸಲಾಗಿದೆ. ಹಣದುಬ್ಬರ ಏರಿಕೆ ಮತ್ತು ಜಾಗತಿಕ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕುಸಿತದ ಹಾದಿಯಲ್ಲಿದ್ದ ಪೇಟೆಗೆ ಈ ಅಂಶಗಳು ಚೇತರಿಕೆಯ ಗಾಳಿ ಬೀಸುವಂತೆ ಮಾಡಿದವು.

17,811 ಅಂಶಗಳಿಂದ ದಿನದ ವಹಿವಾಟು ಪ್ರಾರಂಭಿಸಿದ ‘ಬಿಎಸ್‌ಇ’ ಮುಕ್ತಾಯದ ವೇಳೆಗೆ 17,823 ಅಂಶಗಳನ್ನು ತಲುಪಿ 122 ಅಂಶಗಳ ಏರಿಕೆ ಕಂಡಿತು. ಕಾರ್ಪೊರೇಟ್ ಮೇಲ್‌ತೆರಿಗೆ (ಸರ್ಚಾರ್ಜ್) ಯನ್ನು ಶೇ 7.5ರಿಂದ ಶೇ 5ಕ್ಕೆ ಇಳಿಸುವುದಾಗಿ ಪ್ರಕಟಿಸುತ್ತಿದ್ದಂತೆ ಪೇಟೆಯಲ್ಲಿ ಹೊಸ ಸಂಚಲನ ಸೃಷ್ಟಿಯಾಯಿತು. ರಾಷ್ಟ್ರೀಯ ಷೇರು ಸೂಚ್ಯಂಕ ‘ನಿಫ್ಟಿ’ ಕೂಡ ದಿನದ ವಹಿವಾಟಿನಲ್ಲಿ ಶೇ  0.56ಷ್ಟು ಏರಿಕೆ ಕಂಡು 5,333 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು.

ಬಜೆಟ್ ಹಿನ್ನೆಲೆಯಲ್ಲಿ ‘ಬಿಎಸ್‌ಇ’ ಮಧ್ಯಮ ಮತ್ತು ಸಣ್ಣ ಉದ್ದಿಮೆಗಳ ಷೇರು ಸೂಚ್ಯಂಕ ಕ್ರಮವಾಗಿ ಶೇ 0.31 ಮತ್ತು ಶೇ 0.36ರಷ್ಟು ಪ್ರಗತಿ ದಾಖಲಿಸಿತು. ಪೇಟೆ ವಹಿವಾಟು ಕೂಡ ಉತ್ತಮವಾಗಿದ್ದು, 1,598 ಷೇರುಗಳು ಲಾಭ ದಾಖಲಿಸಿದರೆ 1,204 ಷೇರುಗಳು ಮಾತ್ರ ಕುಸಿತ ಕಂಡವು. 131 ಷೇರುಗಳು ಮಾತ್ರ ಯಥಾಸ್ಥಿತಿಯಲ್ಲಿ ವಹಿವಾಟು ಮುಕ್ತಾಯಗೊಳಿಸಿದವು.

ಐಟಿಸಿ ಶೇ 8.23, ಎಂಆ್ಯಂಡ್‌ಎಂ ಶೇ 3.19, ಮಾರುತಿ ಸುಜುಕಿ ಶೇ 3.07ರಷ್ಟು, ಒಎನ್‌ಜಿಸಿ  ಶೇ 2.93ರಷ್ಟು ಲಾಭ ದಾಖಲಿಸಿದವು. ರಿಲಯನ್ಸ್ ಇನ್‌ಫ್ರಾ, ಹೀರೊ ಹೋಂಡಾ, ಟಾಟಾ ಮೋಟಾರ್ಸ್ ಕುಸಿತ ಕಂಡವು. ಸೋಮವಾರದ ವಹಿವಾಟಿನಲ್ಲಿ 117 ದಶಲಕ್ಷ ಡಾಲರ್‌ಗಳಷ್ಟು (್ಙ 5382 ಕೋಟಿ) ‘ಎಫ್‌ಐಐ’  ವಹಿವಾಟು ದಾಖಲಾಯಿತು ಎಂದು ಮಾರುಕಟ್ಟೆ ನಿಯಂತ್ರಕ ‘ಸೆಬಿ’ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.