ನವದೆಹಲಿ (ಪಿಟಿಐ): ಈ ವಾರದ ಷೇರುಪೇಟೆ ವಹಿವಾಟಿನ ಮೇಲೆ ಹಲವು ಅಂಶಗಳು ಪ್ರಭಾವ ಬೀರಲಿವೆ ಎಂದು ಪರಿಣತರು ಹೇಳಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಂಗಳವಾರ ತನ್ನ ಮೂರನೇ ದ್ವೈಮಾಸಿಕ ಹಣಕಾಸು ನೀತಿ ಪ್ರಕಟಿಸಲಿದೆ. ಇದರ ಜತೆಗೆ ಕಂಪೆನಿಗಳ ತ್ರೈಮಾಸಿಕ ಫಲಿತಾಂಶಗಳು ಷೇರುಪೇಟೆಯ ವಹಿವಾಟನ್ನು ನಿರ್ಧರಿಸುವ ಪ್ರಮುಖ ಅಂಶಗಳಾಗಿವೆ ಎಂದು ಟ್ರೇಡ್ ಸ್ಮಾರ್ಟ್ ಆನ್‌ಲೈನ್‌ನ ಸ್ಥಾಪಕ ವಿಜಯ್ ಸಿಂಘಾನಿಯ ಹೇಳಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಫಲಿತಾಂಶ ಪ್ರಕಟಣೆ ಅವಧಿ ಈ ವಾರ ಕೊನೆಗೊಳ್ಳಲಿದೆ. ಹೀರೊ ಮೊಟೊ ಕಾರ್ಪ್, ಐಡಿಯಾ ಸೆಲ್ಯುಲರ್, ಅದಾನಿ ಪೋರ್ಟ್ಸ್, ಲುಪಿನ್, ಮಹೀಂದ್ರ ಆ್ಯಂಡ್ ಮಹೀಂದ್ರ ಮತ್ತು ಹಿಂಡಾಲ್ಕೊ ಕಂಪೆನಿಗಳು ತಮ್ಮ ಆರ್ಥಿಕ ಸಾಧನೆ ಪ್ರಕಟಿಸಲಿವೆ.
ಹಣದುಬ್ಬರ ಅಂಕಿ–ಅಂಶ: ದೇಶದ ಅರ್ಥ ವ್ಯವಸ್ಥೆಯ ದಿಕ್ಕನ್ನು ಸೂಚಿಸುವ ಜೂನ್ ತಿಂಗಳ ಕೈಗಾರಿಕಾ ಪ್ರಗತಿ (ಐಐಪಿ) ಮತ್ತು ಜುಲೈ ತಿಂಗಳ ಚಿಲ್ಲರೆ ಹಣದುಬ್ಬರದ ಮಾಹಿತಿಯು ಶುಕ್ರವಾರ ಹೊರಬೀಳಲಿವೆ.
ಇನ್ನು, ಸಹಜವಾಗಿಯೇ, ವಿದೇಶಿ ಸಾಂಸ್ಥಿಕ ಹೂಡಿಕೆ ಪ್ರಮಾಣ, ಡಾಲರ್ ಎದುರು ರೂಪಾಯಿ ಮೌಲ್ಯ ಏರಿಳಿತ, ಕಚ್ಚಾ ತೈಲ ಬೆಲೆಯೂ ಷೇರುಪೇಟೆಯ ಮೇಲೆ ಪ್ರಭಾವ ಬೀರಲಿವೆ.
ಕಳೆದವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) ಒಟ್ಟು 26 ಅಂಶ ಮತ್ತು ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 45 ಅಂಶ ಏರಿಕೆಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.