ADVERTISEMENT

ಷೇರುಪೇಟೆ: ಮರಳಿದ ಉತ್ಸಾಹ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 19:30 IST
Last Updated 7 ಅಕ್ಟೋಬರ್ 2011, 19:30 IST

ಮುಂಬೈ (ಪಿಟಿಐ): ನಾಲ್ಕು ವಹಿವಾಟಿನ ದಿನಗಳ ನಿರಂತರ ಕುಸಿತದ ನಂತರ ಕೊನೆಗೂ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಶುಕ್ರವಾರದ ವಹಿವಾಟಿನಲ್ಲಿ ಗಮನಾರ್ಹ ಚೇತರಿಕೆ ದಾಖಲಿಸಿತು.

ಬಹುತೇಕ ಎಲ್ಲ ವಲಯಗಳಲ್ಲಿನ ಖರೀದಿ ಆಸಕ್ತಿ ಫಲವಾಗಿ ಸೂಚ್ಯಂಕವು 440 ಅಂಶಗಳಷ್ಟು ಏರಿಕೆ ಕಂಡಿತು. ಇದರಿಂದ ಸೂಚ್ಯಂಕವು ಮತ್ತೆ 16 ಸಾವಿರದ ಗಡಿ ದಾಟಲು ಸಾಧ್ಯವಾಯಿತು. ಇತ್ತೀಚಿನ ದಿನಗಳಲ್ಲಿ ತೀವ್ರ ಕುಸಿತ ಕಂಡಿದ್ದ ಬ್ಯಾಂಕ್ ಮತ್ತು ಲೋಹದ ಷೇರುಗಳಲ್ಲಿಯೂ ಖರೀದಿ ಭರಾಟೆ ವ್ಯಕ್ತವಾಯಿತು.

ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಷೇರುಗಳ ಬೆಲೆಗಳು ಶೇ 2ರಿಂದ 6ರಷ್ಟು ಚೇತರಿಕೆ ಕಂಡವು. ಆರು ದಿನಗಳ ಕುಸಿತದ ನಂತರ ಎಸ್‌ಬಿಐ ಷೇರು ಬೆಲೆ ಶೇ 2.13ರಷ್ಟು ಹೆಚ್ಚಳಗೊಂಡಿತು. ಈ ತಿಂಗಳ 5ರಂದು 52 ವಾರಗಳ ಹಿಂದಿನ ಮಟ್ಟಕ್ಕೆ (್ಙ 1708.55) ಕುಸಿದಿದ್ದ ಬೆಲೆ, ಈಗ ್ಙ 1751ಕ್ಕೆ ಏರಿಕೆ ಕಂಡಿತು.

ಗುರುವಾರದ ವಹಿವಾಟಿನಲ್ಲಿ ಚೇತರಿಕೆ ದಾಖಲಿಸಿದ್ದ ಜಾಗತಿಕ ಷೇರುಪೇಟೆಗಳಿಂದ ಸ್ಪೂರ್ತಿ ಪಡೆದ ಹೂಡಿಕೆದಾರರು ಇಲ್ಲಿಯೂ ಷೇರುಗಳನ್ನು ಖರೀದಿಸಲು ಆಸಕ್ತಿ ಪ್ರದರ್ಶಿಸಿದರು.

ಕಳೆದ ನಾಲ್ಕು ವಹಿವಾಟಿನ ದಿನಗಳಲ್ಲಿ ಸೂಚ್ಯಂಕವು 905 ಅಂಶಗಳಿಗೆ ಎರವಾಗಿತ್ತು. ಆದರೆ, ಶುಕ್ರವಾರ ವಹಿವಾಟಿನ ಗತಿ ಸಂಪೂರ್ಣವಾಗಿ ಬದಲಾಗಿತ್ತು. ದಿನದ ಒಂದು ಹಂತದಲ್ಲಿ ಸೂಚ್ಯಂಕವು 555 ಅಂಶಗಳವರೆಗೆ ಏರಿತ್ತು.  ಆಹಾರ ಹಣದುಬ್ಬರ ಹೆಚ್ಚಳ ಮತ್ತು ಯೂರೋಪ್ ಮಾರುಕಟ್ಟೆಯಲ್ಲಿನ ಆರಂಭದ ವಹಿವಾಟಿನ ಕುಸಿತವು ಕೆಲ ಮಟ್ಟಿಗೆ ಪ್ರತಿಕೂಲ ಪರಿಣಾಮ ಬೀರಿತು.

ಯೂರೋಪ್ ಬ್ಯಾಂಕ್‌ಗಳು ಬಿಕ್ಕಟ್ಟು ದೂರ ಮಾಡಲು ಅರ್ಥ ವ್ಯವಸ್ಥೆಗೆ ಹಣ ಬಿಡುಗಡೆ ಮಾಡಿರುವುದು ಹೂಡಿಕೆದಾರರಲ್ಲಿ ಹಣಕಾಸು ಹಿಂಜರಿಕೆಯ ಭೀತಿ ದೂರವಾಗುವಂತೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.