ನವದೆಹಲಿ(ಪಿಟಿಐ): ಡಾಲರ್ ಎದುರು ರೂಪಾಯಿ ವಿನಿಮಯ ಮೌಲ್ಯ ಕುಸಿತ, ಪ್ರಕಟಗೊಳ್ಳಬೇಕಿರುವ ಕೈಗಾರಿಕಾ ಪ್ರಗತಿ ಸೂಚ್ಯಂಕ(ಐಐಪಿ) ಮತ್ತು ಹಣದುಬ್ಬರ ವಿಚಾರ ಈ ವಾರದ ಷೇರುಪೇಟೆ ವಹಿವಾಟಿನ ದಿಕ್ಕನ್ನು ನಿರ್ಧರಿಸಲಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
ಡಾಲರ್ ಎದುರು ರೂಪಾಯಿ ವಿನಿಮಯ ಮೌಲ್ಯ ಕುಸಿತದಿಂದ ವಿದೇಶಿ ಸಾಂಸ್ಥಿಕ ಹೂಡಿಕೆ(ಎಫ್‌ಐಐ) ಪ್ರಮಾಣ ತಗ್ಗಿದೆ. ಇದರಿಂದ ಷೇರುಪೇಟೆಯಲ್ಲಿ ಮಾರಾಟದ ಒತ್ತಡವೂ ಹೆಚ್ಚಿದೆ. ಪ್ರಕಟಗೊಳ್ಳಬೇಕಿರುವ `ಐಐಪಿ' ಮತ್ತು ಹಣದುಬ್ಬರದ ಅಂಕಿ-ಅಂಶಗಳು `ಆರ್‌ಬಿಐ' ಹಣಕಾಸು ನೀತಿ ಮೇಲೆ ಪ್ರಭಾವ ಬೀರುತ್ತವೆ. ಅಂಶಗಳೆಲ್ಲ ಷೇರುಪೇಟೆಗೆ ಪ್ರಮುಖ ಸಂಗತಿಯಾಗಲಿವೆ ಎಂದು ಆದಿತ್ಯಾ ಟ್ರೇಡಿಂಗ್ ಸಂಸ್ಥೆ ಮುಖ್ಯಸ್ಥ ವಿಕಾಸ್ ಜೈನ್ ಅಭಿಪ್ರಾಯಪಟ್ಟಿದ್ದಾರೆ.
ಏಪ್ರಿಲ್‌ನಲ್ಲಿನ `ಐಐಪಿ' ಅಂಕಿ-ಅಂಶಗಳು ಜೂನ್ 12ರಂದು ಪ್ರಕಟಗೊಳ್ಳಲಿವೆ. ಮೇ ತಿಂಗಳ `ಸಗಟು ಬೆಲೆ ಸೂಚ್ಯಂಕ'(ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರ ದರ ಜೂನ್ 14ರಂದು ಪ್ರಕಟಗೊಳ್ಳಲಿದೆ. ಇದರ ಬೆನ್ನಲ್ಲೇ `ಆರ್‌ಬಿಐ' ಜೂನ್ 17ರಂದು ಮಧ್ಯಂತರ ತ್ರೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಪ್ರಕಟಿಸಲಿದೆ.
ಮುಂಗಾರು ಮುನ್ನೋಟ ಆಧರಿಸಿ ಬಡ್ಡಿ ದರ ಕಡಿತ ಮಾಡಬೇಕೇ ಬೇಡವೇ ಎನ್ನುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು `ಆರ್‌ಬಿಐ' ಗವರ್ನರ್ ಡಿ.ಸುಬ್ಬರಾವ್ ಹೇಳಿದ್ದಾರೆ. ಹೀಗಾಗಿ ಮುಂಗಾರು ಕೂಡ ಷೇರುಪೇಟೆ ವಹಿವಾಟಿನ ಮೇಲೆ ಪರಿಣಾಮ ಬೀರಲಿದೆ ಎಂದು ಬೊನಾಂಜಾ ಪೋರ್ಟ್‌ಫೋಲಿಯೊ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ರಾಕೇಶ್ ಗೋಯಲ್ ಹೇಳಿದ್ದಾರೆ.
ಕಳೆದ ಶುಕ್ರವಾರ ಡಾಲರ್ ಎದುರು ರೂಪಾಯಿ ವಿನಿಮಯ ಮೌಲ್ಯ ಒಂದೇ ದಿನದಲ್ಲಿ 22 ಪೈಸೆ ಕುಸಿದು ವರ್ಷದಲ್ಲಿ ಮೊದಲ ಬಾರಿಗೆ ರೂ57.06ರ ಮಟ್ಟಕ್ಕೆ ಕುಸಿದಿದೆ. ಇದರಿಂದ ಆಮದು ಹೊರೆ ಇನ್ನಷ್ಟು ಹೆಚ್ಚಲಿದೆ. ಈಗಾಗಲೇ ಚಿನ್ನ ಮತ್ತು ತೈಲ ಆಮದು ಹೆಚ್ಚಳದಿಂದ `ಚಾಲ್ತಿ ಖಾತೆ ಕೊರತೆ'(ಸಿಎಡಿ) ಏರಿಕೆ ಕಂಡಿದೆ. ಐ.ಟಿ ಸೇರಿದಂತೆ ರಫ್ತು ಆಧಾರಿತ ವಲಯಗಳಿಗೆ ರೂಪಾಯಿ ವಿನಿಮಯ ಮೌಲ್ಯ ಕುಸಿತದ ಲಾಭ ಲಭಿಸಲಿದೆ. ಆದರೆ, ಇದು ಒಟ್ಟಾರೆ ಆರ್ಥಿಕ ಪ್ರಗತಿಯ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ ಎಂದು `ಕೊಟಕ್ ಸೆಕ್ಯುರಿಟೀಸ್' ಮುಖ್ಯಸ್ಥ ದಿಪಿನ್ ಷಾ ಅಭಿಪ್ರಾಯಪಟ್ಟಿದ್ದಾರೆ.
ಡಾಲರ್ ಎದುರು ರೂಪಾಯಿ ಮೌಲ್ಯ ಈ ವಾರ ಇನ್ನಷ್ಟು ಕುಸಿತ ಕಾಣಬಹುದು ಎಂದು ಐಡಿಬಿಐ ಬ್ಯಾಂಕ್‌ನ ಟ್ರೆಸರಿ ವಿಭಾಗದ ಮುಖ್ಯಸ್ಥ ಎನ್.ಎಸ್.ವೆಂಕಟೇಶ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.