ADVERTISEMENT

ಸಂಕಷ್ಟದಿಂದ ಪಾರಾದ 8 ಡಿಸಿಸಿ ಬ್ಯಾಂಕ್‌

ರಿಸರ್ವ್‌ ಬ್ಯಾಂಕ್ ಒಪ್ಪಿಗೆ: ರದ್ದಾದ ₹ 479 ಕೋಟಿ ನಗದು ಬದಲಾವಣೆಯ ಹಾದಿ ಸುಗಮ

ಚಂದ್ರಹಾಸ ಹಿರೇಮಳಲಿ
Published 8 ಜುಲೈ 2017, 19:30 IST
Last Updated 8 ಜುಲೈ 2017, 19:30 IST
ಸಂಕಷ್ಟದಿಂದ ಪಾರಾದ 8 ಡಿಸಿಸಿ ಬ್ಯಾಂಕ್‌
ಸಂಕಷ್ಟದಿಂದ ಪಾರಾದ 8 ಡಿಸಿಸಿ ಬ್ಯಾಂಕ್‌   

ಶಿವಮೊಗ್ಗ: ರದ್ದಾದ ನೋಟು ಬದಲಾವಣೆಗೆ ಅನುಮತಿ ನೀಡಿ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಇತ್ತೀಚೆಗೆ ಆದೇಶ ಹೊರಡಿಸಿದೆ. ಆದೇಶ ಹೊರಬೀಳುತ್ತಿದ್ದಂತೆ ಬೀದರ್‌, ಬೆಳಗಾವಿ, ದಕ್ಷಿಣ ಕನ್ನಡ, ವಿಜಯಪುರ, ಬೆಂಗಳೂರು, ಮಂಡ್ಯ ಹಾಗೂ ಮೈಸೂರು ಡಿಸಿಸಿ ಬ್ಯಾಂಕ್‌ಗಳು ದೊಡ್ಡ ಆರ್ಥಿಕ ಸಂಕಷ್ಟದಿಂದ ಪಾರಾಗಿವೆ.

ಕಳೆದ ವರ್ಷದ  ನವೆಂಬರ್‌ 8ರಂದು ಸರ್ಕಾರ ₹ 500 ಹಾಗೂ ₹ 1 ಸಾವಿರ ಮುಖ ಬೆಲೆಯ ನೋಟುಗಳನ್ನು ರದ್ದು ಮಾಡುವ ನಿರ್ಧಾರ ಪ್ರಕಟಿಸಿದ ನಂತರ ಹಳೆಯ ನೋಟುಗಳನ್ನು ಬದಲಿಸಿ­ಕೊಳ್ಳಲು ಹಾಗೂ ಬ್ಯಾಂಕ್‌ ಖಾತೆಗಳಿಗೆ ಜಮೆ ಮಾಡಿಕೊಳ್ಳಲು ಡಿ.31ರವರೆಗೆ ಅವಕಾಶ ಕಲ್ಪಿಸಲಾಗಿತ್ತು.

ಹಳೆಯ ನೋಟುಗಳನ್ನು ಸ್ವೀಕರಿಸಲು ರಾಷ್ಟ್ರೀಕೃತ ಹಾಗೂ ಕೆಲವು ಕಾರ್ಪೋರೇಟ್‌ ಬ್ಯಾಂಕ್‌ಗಳಿಗೆ ಅವಕಾಶ ನೀಡಿದ್ದ ರಿಸರ್ವ್‌ ಬ್ಯಾಂಕ್‌, ಸಹಕಾರ ವಲಯದ ಬ್ಯಾಂಕ್‌ಗಳಲ್ಲಿ ನೋಟು ಬದಲಿಸಲು ನಿರಾಕರಿಸಿತ್ತು. ನೋಟು ರದ್ದತಿಯ ನಂತರ ರಿಸರ್ವ್‌ ಬ್ಯಾಂಕ್‌ನ ಈ ಆದೇಶ ತಲುಪುವುದರ ಒಳಗೆ ರಾಜ್ಯದ ಹಲವು ಡಿಸಿಸಿ ಬ್ಯಾಂಕ್‌ಗಳಲ್ಲಿ ಭಾರಿ ಪ್ರಮಾಣದ ನೋಟುಗಳು ಜಮೆಯಾಗಿದ್ದವು.



ಹಲವು ರೈತರು ಹಾಗೂ ಗ್ರಾಹಕರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಕೃಷಿಯೇತರ ಪತ್ತಿನ ಸಹಕಾರ ಸಂಘಗಳ ಮೂಲಕ ಪಡೆದ ಸಾಲ ಮರುಪಾವತಿ ಮಾಡಿದ್ದರು. ಕೆಲವು ಗ್ರಾಹಕರು ದೊಡ್ಡ ಮೊತ್ತದ ಹಣ ಠೇವಣಿ ಇಟ್ಟಿದ್ದರು.

ರಾಜ್ಯದಲ್ಲಿ 21 ಡಿಸಿಸಿ ಬ್ಯಾಂಕ್‌ಗಳು ಇವೆ. ಅವುಗಳಲ್ಲಿ 13 ಬ್ಯಾಂಕ್‌ಗಳು ಸಂಗ್ರಹವಾದ ಹಣವನ್ನು ನಿಗದಿತ ಅವಧಿಯ ಒಳಗೆ ವಿಲೇವಾರಿ ಮಾಡಿದ್ದವು. ಎಂಟು ಡಿಸಿಸಿ ಬ್ಯಾಂಕ್‌ಗಳಲ್ಲಿ ₹ 479 ಕೋಟಿ ಉಳಿದುಕೊಂಡಿತ್ತು.

ದೇಶದ ಸಹಕಾರ ಬ್ಯಾಂಕ್‌ಗಳಲ್ಲಿ ಸಂಗ್ರಹವಾಗಿದ್ದ ನೋಟುಗಳನ್ನು ಸ್ವೀಕರಿಸುವಂತೆ ಕೇಂದ್ರ ಸರ್ಕಾರ ಜೂನ್‌ 20ರಂದು ಸೂಚಿಸಿತ್ತು. ಜುಲೈ 4ರಂದು ರಿಸರ್ವ್‌ ಬ್ಯಾಂಕ್‌ ಇದಕ್ಕೆ ಒಪ್ಪಿಗೆ ನೀಡಿತ್ತು. ಪತ್ರ ಕೈಸೇರುತ್ತಿದಂತೆ ಎಲ್ಲ ಬ್ಯಾಂಕ್‌ಗಳು ಬೆಂಗಳೂರಿನ ರಿಸರ್ವ್‌ ಬ್ಯಾಂಕ್‌ ಪ್ರದೇಶಿಕ ಕಚೇರಿಗೆ ನೋಟು ತಲುಪಿಸಲು ಮುಂದಾಗಿವೆ. ಜುಲೈ 10ರಿಂದ ಮೂರು ದಿನ ನಿರ್ದಿಷ್ಟ ಕೌಂಟರ್‌ನಲ್ಲಿ ನೋಟು ಸ್ವೀಕಾರ ಕಾರ್ಯ ನಡೆಯಲಿದೆ ಎಂದು ರಿಸರ್ವ್‌ ಬ್ಯಾಂಕ್‌ ಮೂಲಗಳು ಖಚಿತಪಡಿಸಿವೆ.

‘ಡಿಸಿಸಿ ಬ್ಯಾಂಕ್‌ಗಳು ನೇರವಾಗಿ ರಿಸರ್ವ್‌ ಬ್ಯಾಂಕ್‌ಗೆ ನೋಟು ತಲುಪಿಸುತ್ತವೆ. ದೊಡ್ಡ ಮೊತ್ತದ ಹಣ ಜಮೆ ಮಾಡಿರುವ ಗ್ರಾಹಕರು ಹಾಗೂ ಅವರ ಖಾತೆಗಳ ವಿವರಗಳನ್ನು ಈಗಾಗಲೇ ಎಲ್ಲ ಬ್ಯಾಂಕ್‌ಗಳು ಸಲ್ಲಿಸಿವೆ. ದಾಖಲೆಗಳ ಸಮಗ್ರ ಪರಿಶೀಲನೆ ಕಾರ್ಯದ ಬಳಿಕ ನಬಾರ್ಡ್, ಅಪೆಕ್ಸ್ ಬ್ಯಾಂಕ್‌ ಮೂಲಕ ಮರಳಿ ಡಿಸಿಸಿ ಬ್ಯಾಂಕ್‌ಗಳಿಗೆ ಹೊಸ ನೋಟು ತಲುಪಿಸಲಾಗುತ್ತದೆ’ ಎಂದು ಅಪೆಕ್ಸ್ ಬ್ಯಾಂಕ್‌ ಅಧಿಕಾರಿಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT