ADVERTISEMENT

ಸಂಕ್ಷಿಪ್ತ ವಾಣಿಜ್ಯ ಸುದ್ದಿಗಳು

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 19:30 IST
Last Updated 16 ಅಕ್ಟೋಬರ್ 2012, 19:30 IST

ಪ್ರಸಾರ ಭಾರತಿ 1150 ಹುದ್ದೆ ನೇಮಕ ಶೀಘ್ರ
ನವದೆಹಲಿ(ಪಿಟಿಐ):
ದೂರದರ್ಶನ ಮತ್ತು ಆಕಾಶವಾಣಿಗೆ ನವಚೈತನ್ಯ ತುಂಬಲು ಮುಂದಾಗಿರುವ `ಪ್ರಸಾರ ಭಾರತಿ~, ಎರಡೂ ಸಂಸ್ಥೆಗಳಲ್ಲಿ ಖಾಲಿ ಇರುವ 1150 ಹುದ್ದೆಗಳ ನೇಮಕಾತಿಗೆ ಪ್ರಕ್ರಿಯೆ ಆರಂಭಿಸಿದೆ. ಪ್ರಸಾರ ಭಾರತಿಯ ಈ ನಡೆ ಕಳೆದ 15 ವರ್ಷಗಳಲ್ಲಿಯೇ ಬಹಳ ಮಹತ್ವದ್ದೆನಿಸಿದೆ.

`ದೂರದರ್ಶನ ಮತ್ತು ಎಐಆರ್‌ನಲ್ಲಿನ ಕಾರ್ಯಕ್ರಮ ನಿರ್ಮಾಣ ಮತ್ತು ತಾಂತ್ರಿಕ ವಿಭಾಗಕ್ಕೆ ಬಹಳ ತುರ್ತಾಗಿ ಅಗತ್ಯವಾಗಿರುವ 1150 ಸಿಬ್ಬಂದಿಗಳ ನೇಮಕಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ಶೀಘ್ರದಲ್ಲಿಯೇ ಪ್ರಕ್ರಿಯೆ ಆರಂಭಿಸಲಾಗುವುದು~ ಎಂದು ಪ್ರಸಾರ ಭಾರತಿ ಮಂಗಳವಾರ ತಿಳಿಸಿದೆ.

`ಭಾರತ-ರಷ್ಯಾ ಆಮದು ರಫ್ತು 1 ಲಕ್ಷ ಕೋಟಿಗೆ~
ನವದೆಹಲಿ(ಪಿಟಿಐ):
ಭಾರತ ಮತ್ತು ರಷ್ಯಾ ನಡುವಿನ  ಆಮದು-ರಫ್ತು     2015ರ ವೇಳೆಗೆ 2000 ಕೋಟಿ ಡಾಲರ್(ರೂ. 1.06 ಲಕ್ಷ ಕೋಟಿ)ಗೆ ಹೆಚ್ಚಲಿದೆ ಎಂದು ರಷ್ಯಾ ಉಪ ಪ್ರಧಾನಿ ಡಿಮಿಟ್ರಿ ರೊಗೊಜಿನ್ ಹೇಳಿದ್ದಾರೆ.

ಚಿನ್ನ-ಬೆಳ್ಳಿ ಧಾರಣೆ ಅಲ್ಪ ಇಳಿಕೆ
ನವದೆಹಲಿ/ಮುಂಬೈ(ಪಿಟಿಐ):
ದೇಶದ ಚಿನಿವಾರ ಪೇಟೆಗಳಲ್ಲಿ ಚಿನ್ನದ ಧಾರಣೆ ಸತತ ಮೂರನೇ ದಿನವೂ ತಗ್ಗಿದೆ. ಬೆಳ್ಳಿ ಬೆಲೆಯೂ ಇಳಿದಿದೆ. ಚಿನ್ನದ ಧಾರಣೆ ಮಂಗಳವಾರ ದೆಹಲಿಯಲ್ಲಿ ರೂ.255ರಷ್ಟು, ಮುಂಬೈನಲ್ಲಿ ರೂ.155ರಷ್ಟು ಕಡಿಮೆ ಆಗಿದೆ.10 ಗ್ರಾಂ ಸ್ಟಾಂಡರ್ಡ್ ಮತ್ತು ಅಪರಂಜಿ ಚಿನ್ನ ನವದೆಹಲಿಯಲ್ಲಿ ಕ್ರಮವಾಗಿ ರೂ.31060 ಮತ್ತು ರೂ.31260ಕ್ಕೂ, ಮುಂಬೈನಲ್ಲಿ ರೂ.30800 ಮತ್ತು ರೂ.30955ಕ್ಕೂ ಬಂದಿತು. 

 ಕೆ.ಜಿ. ಬೆಳ್ಳಿ ಬೆಲೆ ನವದೆಹಲಿಯಲ್ಲಿ   ರೂ. 370ರಷ್ಟು ಇಳಿದು ರೂ.59930ರಲ್ಲಿ, ಮುಂಬೈನಲ್ಲಿ ರೂ.625ರಷ್ಟು ಕಡಿಮೆ ಆಗಿ ರೂ.60490ರಲ್ಲಿ ವಹಿವಾಟು ನಡೆಸಿತು.

ತಗ್ಗಿದ ರಫ್ತು ವಹಿವಾಟು
ನವದೆಹಲಿ(ಪಿಟಿಐ):
ದೇಶದ ಸೇವಾ ಕ್ಷೇತ್ರದ ರಫ್ತು ಆಗಸ್ಟ್‌ನಲ್ಲಿ 1140 ಕೋಟಿ ಡಾಲರ್(ಸುಮಾರು ರೂ.60420 ಕೋಟಿ)ಗೆ ತಗ್ಗಿದೆ. 2011ರ ಆಗಸ್ಟ್‌ಗೆ ಹೋಲಿಸಿದರೆ ಶೇ 4.3ರಷ್ಟು ಕುಸಿತವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.