ADVERTISEMENT

ಸಂಗೀತಾ ಹೊಸ ಬ್ರಾಂಡ್ ವ್ಯಾಮ್!

ಜೋಮನ್ ವರ್ಗಿಸ್
Published 30 ಜುಲೈ 2013, 19:59 IST
Last Updated 30 ಜುಲೈ 2013, 19:59 IST
ಸಂಗೀತಾ ಹೊಸ ಬ್ರಾಂಡ್ ವ್ಯಾಮ್!
ಸಂಗೀತಾ ಹೊಸ ಬ್ರಾಂಡ್ ವ್ಯಾಮ್!   

ಆಂಧ್ರದ ನೆಲ್ಲೂರಿನವರಾದ ನಾರಾಯಣ ರೆಡ್ಡಿ ಬೆಂಗಳೂರಿಗೆ ಬಂದದ್ದು 1972ರಲ್ಲಿ. ಅದಕ್ಕೂ ಮುನ್ನ ಅವರು 2 ವರ್ಷಗಳ ಕಾಲ ಚೆನ್ನೈನಲ್ಲಿ ಗೃಹಬಳಕೆಯ ಎಲೆಕ್ಟ್ರಿಕಲ್ ಉಪಕರಣಗಳನ್ನು ಮಾರಾಟ ಮಾಡುವ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.  ಇದೇ ಅನುಭವ ಇಟ್ಟುಕೊಂಡು ಬೆಂಗಳೂರಿನಲ್ಲೇಕೆ ಎಲೆಕ್ಟ್ರಿಕಲ್ಸ್ ಅಂಗಡಿ ತೆರೆಯಬಾರದು ಎಂದು ಯೋಚಿಸಿದರು. ಸಾಮಾನ್ಯ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ ರೆಡ್ಡಿ ಅವರ ಬಳಿ ಆಗ ಬಂಡವಾಳ ಅಂತ ಏನೂ ಇರಲಿಲ್ಲ. ಊರಿನಲ್ಲಿದ್ದ ಅಲ್ಪ ಸ್ವಲ್ಪ ಜಮೀನು ಮಾರಾಟ ಮಾಡಿ, ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿ 1974ರಲ್ಲಿ ಪುಟ್ಟ ಅಂಗಡಿಯೊಂದನ್ನು ತೆರೆದರು. ಇದಕ್ಕೆ `ಸಂಗೀತಾ' ಎಂದು ಹೆಸರಿಟ್ಟರು.

39 ವರ್ಷಗಳ ಹಿಂದೆ ಪ್ರಾರಂಭವಾದ ಈ ಪುಟ್ಟ ಅಂಗಡಿಯಲ್ಲಿ ಒಂದು ಕಡೆ ರೇಡಿಯೊ, ಫ್ಯಾನ್, ಇಸ್ತ್ರಿಪೆಟ್ಟಿಗೆ, ಇತ್ಯಾದಿ ಉಪಕರಣಗಳನ್ನು ಮಾರಾಟಮಾಡುತ್ತಿದ್ದರೆ, ಇನ್ನೊಂದೆಡೆ ಗ್ರಾಮಾಫೋನ್ ಮಾರಾಟವಾಗುತ್ತಿತ್ತು. ರೆಡ್ಡಿ ಅವರು ಸಂಗೀತದ ಬಗ್ಗೆ ತಮಗಿದ್ದ  ಒಲವಿನಿಂದ ಈ ಅಂಗಡಿಗೆ `ಸಂಗೀತಾ' ಎಂದು ಹೆಸರಿಟ್ಟಿದ್ದರು.

ಆಗಿನ್ನೂ ಮೊಬೈಲ್ ಫೋನ್ ಭಾರತದ ಮಾರುಕಟ್ಟೆ ಪ್ರವೇಶಿಸಿರಲಿಲ್ಲ. ಮುಂದೊಂದು ದಿನ ಮೊಬೈಲ್ ಹ್ಯಾಂಡ್‌ಸೆಟ್ ಮಾರಾಟ ಆರಂಭಿಸುತ್ತೇವೆ ಎನ್ನುವ ಕಲ್ಪನೆಯೂ ಅವರಿಗೆ ಇರಲಿಲ್ಲ. 1997ರಲ್ಲಿ, ಅಂದರೆ ಅಂಗಡಿ ತೆರೆದ 23 ವರ್ಷಗಳ ನಂತರ ಮೊದಲ ಬಾರಿಗೆ ತಮ್ಮ ಅಂಗಡಿಯಲ್ಲಿ ಮೊಬೈಲ್‌ಫೋನ್ ಮಾರಾಟಕ್ಕೆ ಮುಂದಾದರು. 2002ರಲ್ಲಿ ಎಲೆಕ್ಟ್ರಿಕಲ್ ಉಪಕರಣಗಳ ಮಾರಾಟವನ್ನು ಸಂಪೂರ್ಣವಾಗಿ ಕೈಬಿಟ್ಟು ಮೊಬೈಲ್ ಉದ್ಯಮದತ್ತಲೇ ಗಮನ ಕೇಂದ್ರೀಕರಿಸಿದರು.

ಆರಂಭದ ದಿನಗಳು
`ತಂದೆಯವರು ಬೆಂಗಳೂರಿಗೆ ಬಂದಾಗ ನನಗಿನ್ನೂ 7 ವರ್ಷ. ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡೆ.  ಜೆ.ಸಿ ರಸ್ತೆಯಲ್ಲಿದ್ದ ಅಂಗಡಿಯಲ್ಲೇ ನನ್ನ ಮತ್ತು ತಂದೆಯ ವಾಸ. ತಂಗಿಯನ್ನು ಊರಿಗೆ ಕಳುಹಿಸಿಬಿಟ್ಟೆವು. ನಾನು ಅಂಗಡಿಯಿಂದಲೇ ಶಾಲೆಗೆ ಹೋಗುತ್ತಿದ್ದೆ, ಅಂಗಡಿಯಲ್ಲೇ ಮಲಗುತ್ತಿದ್ದೆ. ಊಟ, ವಸತಿ ಎಲ್ಲವೂ ಅಲ್ಲೇ ನಡೆಯುತ್ತಿತ್ತು'...

ತಾವು ಸಾಗಿ ಬಂದ ಹಾದಿಯನ್ನು ನೆನಪಿಸಿಕೊಂಡರು ನಾರಾಯಣ ರೆಡ್ಡಿ ಅವರ ಮಗ ಮತ್ತು ಈಗ ಸಂಗೀತಾ ಮೊಬೈಲ್‌ನ ವ್ಯವಸ್ಥಾಪಕ ನಿರ್ದೇಶಕರಾಗಿರುವ ಸುಭಾಷ್ ಚಂದ್ರ ರೆಡ್ಡಿ.  

`1974ರಿಂದ 2001ರವರೆಗೆ ಸಂಗೀತಾದ ಒಂದೇ ಷೋರೂಂ ಇತ್ತು. 2002ರಲ್ಲಿ `ಅನು ಡಿಸ್ಟ್ರಿಬ್ಯೂಟರ್' ಎಂಬ  ಸಂಸ್ಥೆ ಆರಂಭಿಸಿ ಮೊಬೈಲ್ ಫೋನ್ ಮಾರಾಟದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡೆವು. ಕಂಪೆನಿಗಳು ನಮಗೆ ನೇರವಾಗಿ ಹ್ಯಾಂಡ್‌ಸೆಟ್ ಮಾರಾಟ ಮಾಡುತ್ತಿದ್ದವು. ನಾವು ಇತರೆ ಅಂಗಡಿಗಳಿಗೂ ಪೂರೈಸುತ್ತಿದ್ದೆವು. ಹಂತ ಹಂತವಾಗಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಪುದುಚೆರಿಗೂ ವಹಿವಾಟು ವಿಸ್ತರಿಸಿದೆವು.

ಸದ್ಯ ಕರ್ನಾಟಕದಲ್ಲಿ 116 ಮತ್ತು ಒಟ್ಟಾರೆ ದಕ್ಷಿಣ ಭಾರತದಲ್ಲಿ  215 ಸಂಗೀತಾ ಷೋರೂಂಗಳು ಇವೆ. 900 ಜನರಿಗೆ ನೇರವಾಗಿ, 1,500ಕ್ಕೂ ಹೆಚ್ಚು ಜನರಿಗೆ ಪರೋಕ್ಷವಾಗಿ ಉದ್ಯೋಗ ಒದಗಿಸಿದ್ದೇವೆ. ಕಳೆದ ತಿಂಗಳಿಂದ ಉತ್ತರ ಭಾರತದಲ್ಲೂ(ದೆಹಲಿ ಮತ್ತು ಉತ್ತರ ಪ್ರದೇಶ) ಪ್ರಾಂಚೈಸಿ ಮೂಲಕ ವಹಿವಾಟು ವಿಸ್ತರಣೆಗೆ ಮುಂದಾಗಿದ್ದೇವೆ' ಎಂದು ನಸುನಕ್ಕರು ಸುಭಾಷ್ ಚಂದ್ರ.

ದೇಶದಲ್ಲೇ ಮೊದಲ ಬಾರಿಗೆ ಬಿಲ್ ಮತ್ತು ವಾರಂಟಿ ಜತೆ ಮೊಬೈಲ್ ಫೋನ್ ಮಾರಾಟ ಆರಂಭಿಸಿದ್ದೇ ನಾವು. ಆರಂಭದಲ್ಲಿ ಸೋನಿ ಎರಿಕ್‌ಸನ್, ಸ್ಪೈಸ್ ಮತ್ತು ಮೈಕ್ರೊಮ್ಯಾಕ್ಸ್ ಬ್ರಾಂಡ್‌ಗಳನ್ನು ಮಾರಾಟ ಮಾಡುತ್ತಿದ್ದೆವು. ಈಗ ಮೈಕ್ರೊಮ್ಯಾಕ್ಸ್ ದೇಶದಾದ್ಯಂತ ಎಷ್ಟೊಂದು ಜನಪ್ರಿಯವಾಗಿದೆ ಎಂದರೆ ಅದಕ್ಕೆ ಪ್ರಮುಖ ಕಾರಣ `ಅನು ಡಿಸ್ಟ್ರಿಬ್ಯೂಟರ್ಸ್'. `ಸಂಗೀತಾ' ಮೊಬೈಲ್ಸ್ ಮೂಲಕ ಪ್ರತಿ ತಿಂಗಳು 1.5  ಲಕ್ಷ ಮೈಕ್ರೊಮ್ಯಾಕ್ಸ್ ಮೊಬೈಲ್ ಮಾರಾಟ ಮಾಡುತ್ತಿದ್ದೆವು.

ಸದ್ಯ ಸಂಗೀತಾದಲ್ಲಿ ಪ್ರತಿ ತಿಂಗಳು ಸರಾಸರಿ 1 ಲಕ್ಷ ಫೋನ್ ಮಾರಾಟ ಮಾಡುತ್ತೇವೆ. ಈ ವರ್ಷ ರೂ1,000 ಕೋಟಿ ವಹಿವಾಟು ಗುರಿ ನಿಗದಿಪಡಿಸಿದ್ದೇವೆ. ಮೊಬೈಲ್ ಫೋನ್ ಮಾರಾಟ ಆರಂಭಿಸಿದ ಕಳೆದ 16 ವರ್ಷಗಳಲ್ಲಿ ಒಟ್ಟಾರೆ 50 ಲಕ್ಷಕ್ಕೂ ಹೆಚ್ಚು ಹ್ಯಾಂಡ್‌ಸೆಟ್‌ಗಳು ಸಂಗೀತಾ ಮೂಲಕವೇ ಮಾರಾಟವಾಗಿವೆ ಎಂದರು.

`ವ್ಯಾಮ್' ಮೊಬೈಲ್ 
ಸದ್ಯ ದೇಶದಲ್ಲಿ ಒಂದು ತಿಂಗಳಿಗೆ 160 ರಿಂದ 180 ಲಕ್ಷ ಹ್ಯಾಂಡ್‌ಸೆಟ್‌ಗಳು ಮಾರಾಟವಾಗುತ್ತಿವೆ. ಇದೊಂದು ವಿಶಾಲ ಮಾರುಕಟ್ಟೆ. ಸಾಕಷ್ಟು ಅವಕಾಶಗಳಿವೆ. ಈ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳ ಹಿಂದಷ್ಟೇ ನಮ್ಮದೇ ಸ್ವಂತ ಮೊಬೈಲ್ ಬ್ರಾಂಡ್ `ವ್ಯಾಮ್' ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದೇವೆ.

ರೂ999ರಿಂದ ರೂ16 ಸಾವಿರದವರೆಗಿನ ದರ ಶ್ರೇಣಿಯಲ್ಲಿ 14ಕ್ಕೂ ಹೆಚ್ಚು ಹ್ಯಾಂಡ್‌ಸೆಟ್‌ಗಳು ಈಗಾಗಲೇ ಸಂಗೀತಾ ಸೇರಿದಂತೆ ಇತರೆ ಮೊಬೈಲ್ ಷೂರೂಂಗಳಲ್ಲೂ ಲಭ್ಯವಿವೆ. ಈ ಶ್ರೇಣಿಯಲ್ಲಿ ಐದು ಸ್ಮಾರ್ಟ್‌ಪೋನ್‌ಗಳಿವೆ. ಆಂಡ್ರಾಯ್ಡ ಕಾರ್ಯನಿರ್ವಹಣಾ ತಂತ್ರಾಂಶ ಇರುವ ಈ ಸ್ಮಾರ್ಟ್‌ಫೋನ್‌ಗಳನ್ನು ಯುವಜನತೆಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಎಂದರು ಸುಭಾಷ್ ಚಂದ್ರ.

`ವ್ಯಾಮ್' ಎನ್ನುವುದು 1970ರ ದಶಕದಲ್ಲಿ ಜನಪ್ರಿಯವಾದ ಜಾರ್ಜ್ ಮೈಕಲ್ ಅವರ `ಪಾಪ್ ಆಲ್ಬಂ' ಹೆಸರು. ಇದಕ್ಕೆ ಮುನ್ನುಗ್ಗು, ಚಿಂದಿಮಾಡು ಎನ್ನುವ ಅರ್ಥವೂ ಇದೆ. ಯುವಜನತೆಯನ್ನು ಗಮನದಲ್ಲಿಟ್ಟುಕೊಂಡು ತಂದೆಯವರೇ ಈ ಹೆಸರು ಸೂಚಿಸಿದರು ಎಂದು ವಿವರಿಸಿದರು ಅವರು.

300ಕ್ಕೂ ಹೆಚ್ಚು ಕಂಪೆನಿಗಳು
ಫೀಚರ್‌ಫೋನ್ ಗ್ರಾಹಕರು ಸ್ಮಾರ್ಟ್‌ಫೋನ್‌ಗೆ ಬದಲಾಗುತ್ತಿರುವ ಕಾಲವಿದು. ಈ ಹಿನ್ನೆಲೆಯಲ್ಲಿ ಕಂಪೆನಿ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್ ಮಾರುಕಟ್ಟೆಯತ್ತ ಹೆಚ್ಚಿನ ಗಮನ ಹರಿಸಿದೆ. ಕಳೆದ 11 ವರ್ಷಗಳಿಂದ ವಿತರಣೆ ಕ್ಷೇತ್ರದಲ್ಲಿರುವುದರಿಂದ ಬ್ರಾಂಡ್ ವಿಸ್ತರಣೆ ಕಷ್ಟವಾಗುವುದಿಲ್ಲ. ಒಟ್ಟಿನಲ್ಲಿ ಮುಂದಿನ 1 ವರ್ಷದೊಳಗೆ ಪ್ರತಿ ತಿಂಗಳು 2 ಲಕ್ಷ ವ್ಯಾಮ್ ಮೊಬೈಲ್ ಮಾರಾಟ ಮಾಡುವ ಗುರಿ ನಿಗದಿಪಡಿಸಲಾಗಿದೆ ಎಂದರು.

ಮೈಕ್ರೊಮ್ಯಾಕ್ಸ್ ಬ್ರಾಂಡ್  ಜನಪ್ರಿಯವಾದ ನಂತರ ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ 300ಕ್ಕೂ ಹೆಚ್ಚು ಕಂಪೆನಿಗಳು ಮೊಬೈಲ್ ಹ್ಯಾಂಡ್‌ಸೆಟ್ ಬಿಡುಗಡೆ ಮಾಡಿವೆ. ಆದರೆ, ಮಾರಾಟ ನಂತರದ ಸೇವೆ (After sales service) ಉತ್ತಮವಾಗಿಲ್ಲದ ಕಾರಣ ಕಳೆದೆರಡು ವರ್ಷಗಳಲ್ಲಿ 290ಕ್ಕೂ ಹೆಚ್ಚು ಬ್ರಾಂಡ್‌ಗಳು ನೆಲಕಚ್ಚಿವೆ. ಈ ಎಲ್ಲ ಅನುಭವಗಳು ನಮ್ಮ ಕಣ್ಣೆದುರಿಗೇ ಇವೆ. ಆದ್ದರಿಂದಲೇ ವ್ಯಾಮ್ ಹ್ಯಾಂಡ್‌ಸೆಟ್‌ಗೆ ಆರು ತಿಂಗಳವರೆಗೆ ರಿಪ್ಲೇಸ್‌ಮೆಂಟ್ ವಾರಂಟಿ ಕೊಡುತ್ತಿದ್ದೇವೆ ಎಂದರು.

ಮೊಬೈಲ್ ಮಾರಾಟ ಕ್ಷೇತ್ರದಲ್ಲಿನ ಅಪಾರ ಅನುಭವ `ವ್ಯಾಮ್' ಮೊಬೈಲ್ ಮಾರುಕಟ್ಟೆ ವಿಸ್ತರಣೆಗೆ ನೆರವಾಗಬಲ್ಲುದು ಎಂಬ ವಿಶ್ವಾಸದೊಂದಿಗೆ ಮಾತು ಮುಗಿಸಿದರು ಸುಭಾಷ್ ಚಂದ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.