ADVERTISEMENT

ಸಕ್ಕರೆ ಸೆಸ್‌: ಸಚಿವರ ತಂಡ ರಚನೆ

ಅರುಣ್‌ ಜೇಟ್ಲಿ ನೇತೃತ್ವದ ಜಿಎಸ್‌ಟಿ ಮಂಡಳಿ ಸಭೆ ನಿರ್ಧಾರ

ಪಿಟಿಐ
Published 4 ಮೇ 2018, 19:30 IST
Last Updated 4 ಮೇ 2018, 19:30 IST
ದೆಹಲಿಯಲ್ಲಿ ನಡೆದ ಜಿಎಸ್‌ಟಿ ಮಂಡಳಿಯ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಹಣಕಾಸು ಸಚಿವ ಅರುಣ್‌ ಜೇಟ್ಲಿ ಭಾಗವಹಿಸಿದ್ದರು. ಹಣಕಾಸು ಕಾರ್ಯದರ್ಶಿ ಹಸ್ಮುಖ್‌ ಆಧಿಯಾ, ಹಿರಿಯ ಅಧಿಕಾರಿಗಳು ಇದ್ದರು   – ಪಿಟಿಐ ಚಿತ್ರ
ದೆಹಲಿಯಲ್ಲಿ ನಡೆದ ಜಿಎಸ್‌ಟಿ ಮಂಡಳಿಯ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಹಣಕಾಸು ಸಚಿವ ಅರುಣ್‌ ಜೇಟ್ಲಿ ಭಾಗವಹಿಸಿದ್ದರು. ಹಣಕಾಸು ಕಾರ್ಯದರ್ಶಿ ಹಸ್ಮುಖ್‌ ಆಧಿಯಾ, ಹಿರಿಯ ಅಧಿಕಾರಿಗಳು ಇದ್ದರು – ಪಿಟಿಐ ಚಿತ್ರ   

ನವದೆಹಲಿ: ತಿಂಗಳಿಗೊಮ್ಮೆ ರಿಟರ್ನ್‌ ಸಲ್ಲಿಕೆಯ ಹೊಸ ಮಾದರಿ ಜಾರಿಗೆ ತರಲು, ಜಿಎಸ್‌ಟಿಎನ್‌ ಸರ್ಕಾರಿ ಸ್ವಾಮ್ಯದ ಸಂಸ್ಥೆಯನ್ನಾಗಿ ಪರಿವರ್ತಿಸಲು, ಸಕ್ಕರೆ ಮೇಲೆ ಸೆಸ್‌ ವಿಧಿಸುವುದನ್ನು ಪರಿಶೀಲಿಸಿ ವರದಿ ನೀಡಲು ಪ್ರತ್ಯೇಕ ಸಮಿತಿ ರಚಿಸಲು ಜಿಎಸ್‌ಟಿ ಮಂಡಳಿ ನಿರ್ಧರಿಸಿದೆ.

ಗ್ರಾಹಕರು ತಾವು ಖರೀದಿಸುವ ಸರಕಿಗೆ ಡಿಜಿಟಲ್‌ ರೂಪದಲ್ಲಿ ಹಣ ಪಾವತಿಸಿದರೆ ಗರಿಷ್ಠ ₹ 100 ವರೆಗೆ ಉತ್ತೇಜನಾ ಕೊಡುಗೆ ನೀಡುವುದನ್ನು ಪರಿಶೀಲಿಸಿ ವರದಿ ನೀಡಲು ರಾಜ್ಯಗಳ ಹಣಕಾಸು ಸಚಿವರ ಸಮಿತಿಗೆ ಸೂಚಿಸಲಾಗಿದೆ. ಬಹುತೇಕ ರಾಜ್ಯಗಳು ಈ ಪ್ರಸ್ತಾವಕ್ಕೆ ಸಮ್ಮತಿ ಸೂಚಿಸಿದ್ದವು. ಆದರೆ, ಕೆಲ ರಾಜ್ಯಗಳಿಂದ ಆಕ್ಷೇಪ ವ್ಯಕ್ತವಾಗಿದ್ದರಿಂದ ಈ ನಿರ್ಧಾರಕ್ಕೆ ಬರಲಾಗಿದೆ.

ತಿಂಗಳಿಗೆ ಒಂದೇ ರಿಟರ್ನ್‌: ‘ರಾಜಿ ತೆರಿಗೆ’ ಆಯ್ಕೆ ಮಾಡಿಕೊಂಡ ವರ್ತಕರು ಹೊರತುಪಡಿಸಿ ಉಳಿದ ಜಿಎಸ್‌ಟಿ ತೆರಿಗೆದಾರರು ಸದ್ಯಕ್ಕೆ ಸಲ್ಲಿಸುತ್ತಿರುವ ಹಲವಾರು ರಿಟರ್ನ್‌ಗಳ ಬದಲಿಗೆ ತಿಂಗಳಿಗೆ ಒಂದೇ ರಿಟರ್ನ್‌ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಹೇಳಿದ್ದಾರೆ.

ADVERTISEMENT

‘ತಿಂಗಳಿಗೊಮ್ಮೆ ರಿಟರ್ನ್‌ ಸಲ್ಲಿಸುವ ವ್ಯವಸ್ಥೆಯು ಆರು ತಿಂಗಳಲ್ಲಿ ಜಾರಿಗೆ ಬರಲಿದೆ. ಅಲ್ಲಿಯವರೆಗೆ ಸದ್ಯ ಜಾರಿಯಲ್ಲಿ ಇರುವ ವ್ಯವಸ್ಥೆಯೇ ಮುಂದುವರೆಯಲಿದೆ’ ಎಂದು ಹಣಕಾಸು ಕಾರ್ಯದರ್ಶಿ ಹಸ್ಮುಖ್‌ ಆಧಿಯಾ ಹೇಳಿದ್ದಾರೆ.

ಪ್ರತ್ಯೇಕ ಸಮಿತಿ:  ಸಕ್ಕರೆ ಮೇಲೆ ಸೆಸ್‌ ವಿಧಿಸುವ ಸಂಬಂಧ ವರದಿ ನೀಡಲು ರಾಜ್ಯ ಹಣಕಾಸು ಸಚಿವರ ಪ್ರತ್ಯೇಕ ಸಮಿತಿ ರಚಿಸಲೂ ನಿರ್ಧರಿಸಲಾಗಿದೆ.

ಕಬ್ಬು ಬೆಳೆಗಾರರಿಗೆ ಉತ್ಪಾದನಾ ಸಬ್ಸಿಡಿ ನೀಡುವ ಉದ್ದೇಶಕ್ಕೆ ಈ ಸೆಸ್‌ ಮೂಲಕ ಹೆಚ್ಚುವರಿ ಸಂಪನ್ಮೂಲ ಸಂಗ್ರಹಿಸುವುದು ಸರ್ಕಾರದ ಉದ್ದೇಶವಾಗಿದೆ.

ಸಕ್ಕರೆ ಉತ್ಪಾದನಾ ವೆಚ್ಚ ಪ್ರತಿ ಕೆಜಿಗೆ ₹ 35ಕ್ಕಿಂತ ಹೆಚ್ಚಿಗೆ ಇದೆ. ಆದರೆ, ಸಕ್ಕರೆಯ ಚಿಲ್ಲರೆ ಮಾರಾಟ ದರ ಪ್ರತಿ ಕೆಜಿಗೆ ₹ 26 ರಿಂದ ₹ 28ರವರೆಗೆ ಇದೆ. ಇದರಿಂದ ಸಕ್ಕರೆ ಕಾರ್ಖಾನೆಗಳಿಗೆ ನಷ್ಟ ಉಂಟಾಗುತ್ತಿದೆ. ರೈತರ ಕಬ್ಬು ಬಾಕಿ ಹಣವನ್ನು ಸಕಾಲದಲ್ಲಿ ಪಾವತಿಸಲು ಸಾಧ್ಯವಾಗುತ್ತಿಲ್ಲ.

ಈ ಹಣಕಾಸು ಬಿಕ್ಕಟ್ಟನ್ನು ಎದುರಿಸಲು ವರಮಾನ ಹೆಚ್ಚಿಸುವ ಮಾರ್ಗೋಪಾಯಗಳ ಕುರಿತು ಸಮಿತಿಯು ಎರಡು ವಾರಗಳಲ್ಲಿ ತನ್ನ ವರದಿ ನೀಡಬೇಕು ಎಂದು ಸೂಚಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಸಮಿತಿಯ ಸದಸ್ಯರ ಹೆಸರನ್ನು ಅಂತಿಮಗೊಳಿಸಲಾಗುತ್ತಿದೆ.

‘ಒಂದು ವೇಳೆ ಮಂಡಳಿಯು ಸಕ್ಕರೆ ಮೇಲೆ ಸೆಸ್‌ ವಿಧಿಸಲು ಸಮ್ಮತಿ ನೀಡಿದರೆ ಈ ಸಂಬಂಧ ಸರ್ಕಾರವು ಸುಗ್ರೀವಾಜ್ಞೆ ಹೊರಡಿಸಲಿದೆ’ ಎಂದು ಹಸ್ಮುಖ್‌ ಆಧಿಯಾ ಹೇಳಿದ್ದಾರೆ. ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆದ ಮಂಡಳಿಯ 27ನೇ ಸಭೆಯ ನಂತರ ಅವರು ಸುದ್ದಿಗಾರರ ಜತೆ ಮಾತನಾಡುತ್ತಿದ್ದರು.

**

ಜಿಎಸ್‌ಟಿಎನ್‌ ಸರ್ಕಾರಿ ಒಡೆತನಕ್ಕೆ

ಜಿಎಸ್‌ಟಿಯ ಬೆನ್ನೆಲುಬು ಆಗಿರುವ ಜಿಎಸ್‌ಟಿಎನ್‌ ಅನ್ನು ಸರ್ಕಾರಿ ಸಂಸ್ಥೆಯನ್ನಾಗಿ ಪರಿವರ್ತಿಸಲು ಸರಕು ಮತ್ತು ಸೇವಾ ತೆರಿಗೆ ಮಂಡಳಿಯು ಸಮ್ಮತಿ ನೀಡಿದೆ.

ಸದ್ಯಕ್ಕೆ ಐದು ಖಾಸಗಿ ಹಣಕಾಸು ಸಂಸ್ಥೆಗಳು, ಜಿಎಸ್‌ಟಿಎನ್‌ನಲ್ಲಿ ಶೇ 51ರಷ್ಟು ಪಾಲು ಬಂಡವಾಳ ಹೊಂದಿವೆ. ಉಳಿದ ಶೇ 49ರಷ್ಟು ಪಾಲು ಬಂಡವಾಳವನ್ನು  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಾನವಾಗಿ ಹಂಚಿಕೊಂಡಿವೆ.

ಈ ಪಾಲು ಬಂಡವಾಳ ಸ್ವರೂಪವನ್ನು ಸಂಪೂರ್ಣವಾಗಿ ಬದಲಿಸಲು ನಿರ್ಧರಿಸಲಾಗಿದೆ.  ಖಾಸಗಿ ಸಂಸ್ಥೆಗಳ ಪಾಲು ಬಂಡವಾಳವನ್ನು ಸರ್ಕಾರ ಪೂರ್ಣ ಪ್ರಮಾಣದಲ್ಲಿ ಖರೀದಿಸಲು ಮಂಡಳಿ ಅನುಮತಿ ನೀಡಿದೆ. ಕೇಂದ್ರ ಸರ್ಕಾರದ ಪಾಲು ಶೇ 50 ಮತ್ತು ಉಳಿದ ಶೇ 50ರಷ್ಟನ್ನು ರಾಜ್ಯಗಳು ಹಂಚಿಕೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.