ADVERTISEMENT

ಸಬ್ಸಿಡಿ ಪ್ರಮಾಣ ಶೇ 100ರಷ್ಟು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2011, 19:30 IST
Last Updated 4 ಮಾರ್ಚ್ 2011, 19:30 IST

ನವದೆಹಲಿ (ಪಿಟಿಐ): ಆಹಾರ ಧಾನ್ಯಗಳ ಬೆಲೆ ಮತ್ತು ಪೆಟ್ರೋಲಿಯಂ ಉತ್ಪನ್ನಗಳು ತುಟ್ಟಿಯಾಗಿರುವ ಹಿನ್ನೆಲೆಯಲ್ಲಿ, ಕಳೆದ ನಾಲ್ಕು ವರ್ಷಗಳಲ್ಲಿ  ದೇಶದ ಸಬ್ಸಿಡಿಯು ಶೇ 100ರಷ್ಟು ಹೆಚ್ಚಳಗೊಂಡಿದೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.

ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಸಲ್ಲಿಸಿದ ಪ್ರಸಕ್ತ ಸಾಲಿನ ಮುಂಗಡ ಪತ್ರದ ಅನ್ವಯ, ಮುಂದಿನ ಹಣಕಾಸು ವರ್ಷಕ್ಕೆ ಅಂದಾಜಿಸಿರುವ ಸಬ್ಸಿಡಿಗೆ ಸಂಬಂಧಿಸಿದ ಯೋಜನೇತರ ವೆಚ್ಚ ರೂ.1,43,570 ಕೋಟಿ.  ಇದು 2007-08ನೇ ಸಾಲಿನ ವಾಸ್ತವ ವೆಚ್ಚ ರೂ. 70,926 ಕೋಟಿಗೆ ಹೋಲಿಸಿದರೆ ಶೇ 102ರಷ್ಟು ಹೆಚ್ಚಿದೆ.

ಸಬ್ಸಿಡಿ ಆಧರಿಸಿದ ಯೋಜನೇತರ ವೆಚ್ಚ ನಿರಂತರವಾಗಿ ಏರುತ್ತಿದೆ. 2008-09ನೇ ಸಾಲಿನಲ್ಲಿ  ರೂ. 1,29,708 ಕೋಟಿ ಇದ್ದ ಇದು 2009-10ನೇ ಸಾಲಿನಲ್ಲಿ ರೂ.1,41,351 ಕೋಟಿಗೆ ಏರಿದೆ. ಆದರೆ, ಪ್ರಸಕ್ತ  ಹಣಕಾಸು ವರ್ಷಕ್ಕೆ ಅಂದಾಜಿಸಿರುವ ರೂ.1,64,153 ಕೋಟಿಗೆ ಹೋಲಿಸಿದರೆ ಮುಂದಿನ ವರ್ಷ ಇದು ಕಡಿಮೆ ಇರಲಿದೆ ಎಂದು ಮೂಲಗಳು ತಿಳಿಸಿವೆ. 

ಸರ್ಕಾರ ಇತ್ತೀಚೆಗೆ, ರಾಷ್ಟ್ರೀಯ ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರದ ಅಧ್ಯಕ್ಷ ನಂದನ್ ನಿಲೇಕಣಿ ಅಧ್ಯಕ್ಷತೆಯಲ್ಲಿ ಸೀಮೆಎಣ್ಣೆ, ಅಡುಗೆ ಅನಿಲ ಮತ್ತು ರಸಗೊಬ್ಬರಕ್ಕೆ ನೇರ ಸಬ್ಸಿಡಿ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಇರುವ  ನಿಯಮಾವಳಿಗಳನ್ನು ರೂಪಿಸಲು ವಿಶೇಷ ಕಾರ್ಯಪಡೆ ರಚಿಸಿತ್ತು. ಈ ಕಾರ್ಯಪಡೆ ಜೂನ್ 2011ರ ಒಳಗಾಗಿ ಮಧ್ಯಂತರ ಹಾಗೂ 2012 ಮಾರ್ಚ್ ಒಳಗೆ ಅಂತಿಮ ವರದಿ ಸಲ್ಲಿಸಲಿದೆ. ಪ್ರಮುಖ ಮೂರು ವಲಯಗಳಾದ ಆಹಾರ, ರಸಗೊಬ್ಬರ ಮತ್ತು ಪೆಟ್ರೋಲಿಯಂಗೆ ಹೆಚ್ಚಿನ ಸಬ್ಸಿಡಿ ನೀಡಲಾಗುತ್ತದೆ.

2011-12ನೇ ಸಾಲಿನಲ್ಲಿ ಆಹಾರಕ್ಕೆ ರೂ. 60,573 ಕೋಟಿ, ರಸಗೊಬ್ಬರಕ್ಕೆ ರೂ. 49,998 ಕೋಟಿ ಹಾಗೂ ಪೆಟ್ರೋಲಿಯಂಗೆ  ರೂ. 23, 640 ಕೋಟಿ ಅಂದಾಜಿಸಲಾಗಿದೆ.  ‘ಯೂರಿಯಾ’ ಒಂದನ್ನು ಹೊರತುಪಡಿಸಿ ಉಳಿದ ಎಲ್ಲ ರಸಗೊಬ್ಬರಗಳಿಗೆ ಪೋಷಕಾಂಶ ಆಧರಿಸಿದ ಸಬ್ಸಿಡಿ (ಎನ್‌ಬಿಎಸ್) ನೀತಿಯನ್ನು 2010-11ರಲ್ಲಿ  ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ.

 ಇದರಿಂದ ರಸಗೊಬ್ಬರದ ಲಭ್ಯತೆ ಪ್ರಮಾಣ ಹೆಚ್ಚಿದೆ. ‘ಯೂರಿಯಾ’ಗೂ ಈ ನಿಯಮ ವಿಸ್ತರಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ. ಆಹಾರ, ರಸಗೊಬ್ಬರ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ 2007-08ನೇ ಸಾಲಿನ ವಾಸ್ತವ ಸಬ್ಸಿಡಿ ಮೊತ್ತ ಕ್ರಮವಾಗಿ, ರೂ.  31,328, ರೂ.32,490 ಮತ್ತು ರೂ. 2,820 ಕೋಟಿಗಳಷ್ಟಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸಬ್ಸಿಡಿ ಪ್ರಮಾಣದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಆಹಾರ ಸಬ್ಸಿಡಿ ಮಸೂದೆ ಬಹುತೇಕ ದ್ವಿಗುಣಗೊಂಡಿದೆ. ಏರುತ್ತಿರುವ ಇಂಧನ ಬೇಡಿಕೆ, ಕಚ್ಚಾತೈಲದ ಬೆಲೆ ಹೆಚ್ಚಳ ಸಬ್ಸಿಡಿ ಹೆಚ್ಚಳಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಸಬ್ಸಿಡಿ ಮುಂದುವರಿಕೆ:  ಅಡುಗೆ ಅನಿಲ ಮತ್ತು ಸೀಮೆಎಣ್ಣೆಯ ಮೇಲಿನ ಸಬ್ಸಿಡಿಯನ್ನು ಮುಂದುವರೆಸುವುದಾಗಿ ಸರ್ಕಾರ ಹೇಳಿದೆ. ‘ಜನಸಾಮಾನ್ಯರ ಮೇಲೆ ಹೆಚ್ಚಿನ ಹೊರೆ ಬೀಳದ ಹಾಗೆ ನೋಡಿಕೊಳ್ಳಲು ಸರ್ಕಾರ ಬದ್ಧವಾಗಿದೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರುತ್ತಿದ್ದರೂ ಪಡಿತರ ಸೀಮೆಎಣ್ಣೆ ಮತ್ತು ಅಡುಗೆ ಅನಿಲಕ್ಕೆ ಸಬ್ಸಿಡಿ ಮುಂದುವರೆಸಲಾಗುವುದು’ ಎಂದು  ಹಣಕಾಸು ಖಾತೆಯ ರಾಜ್ಯ ಸಚಿವ ನಮೊ ನಾರಾಯಣ ಮೀನಾ ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಕಚ್ಚಾ ತೈಲದ ಬೆಲೆ ಹೆಚ್ಚಿದ ಹಿನ್ನೆಲೆಯಲ್ಲಿ, ಕಳೆದ ವರ್ಷಕ್ಕೆ ಹೋಲಿಸಿದರೆ ತೈಲಕ್ಕೆ ಸಂಬಂಧಿಸಿದ ಸಗಟು ಸೂಚ್ಯಂಕ ಆಧರಿಸಿದ ಹಣದುಬ್ಬರ ದರ  ಶೇ 7.9ರಿಂದ ಶೇ 16.7ಕ್ಕೆ ಹೆಚ್ಚಿದೆ.  ಆದಾಗ್ಯೂ, ಸರ್ಕಾರ ಇವೆರಡು ಅಗತ್ಯ ವಸ್ತುಗಳ ಮೇಲೆ ಸಬ್ಸಿಡಿ ಮುಂದುವರಸುತ್ತಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.