ADVERTISEMENT

`ಸಿಎಡಿ':ಸುಬ್ಬರಾವ್ ಕಳವಳ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 19:59 IST
Last Updated 6 ಏಪ್ರಿಲ್ 2013, 19:59 IST

ಬೆಂಗಳೂರು: ಚಾಲ್ತಿ ಖಾತೆ ಕೊರತೆಯು (ಸಿಎಡಿ) ದೇಶದ ಒಟ್ಟಾರೆ ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಶೇ5ಕ್ಕೆ ಏರಿಕೆ ಕಂಡಿರುವುದು ಕಳವಳಕಾರಿ ಸಂಗತಿ ಎಂದು ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಡಿ. ಸುಬ್ಬರಾವ್ ಹೇಳಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ)  ಶನಿವಾರ ಇಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು `ಆರ್ಥಿಕ ಸವಾಲುಗಳ' ಕುರಿತು ಮಾತನಾಡಿದರು.

`ಸುಸ್ಥಿರ ಆರ್ಥಿಕ ಪ್ರಗತಿಗೆ ಶೇ 2.5ರಷ್ಟು `ಸಿಎಡಿ' ಕಾಯ್ದುಕೊಳ್ಳುವುದು ಅಗತ್ಯ. ಆದರೆ, ತೈಲ ಮತ್ತು ಚಿನ್ನದ ಆಮದು ಹೆಚ್ಚಳದಿಂದ ವಿದೇಶಿ ವಿನಿಮಯ ತಗ್ಗಿದ್ದು `ಸಿಎಡಿ' ದಾಖಲೆ ಮಟ್ಟಕ್ಕೆ ಏರಿದೆ. ಇದು ಅಪಾಯಕಾರಿ ಬೆಳವಣಿಗೆ' ಎಂದರು.

`ಕಳೆದ ಮೂರು ತಿಂಗಳಿನಲ್ಲಿ ಚಾಲ್ತಿ ಖಾತೆ ಕೊರತೆಯು  3263 ಕೋಟಿ ಡಾಲರ್‌ಗಳಿಗೆ (ರೂ. 179465 ಕೋಟಿ) ಏರಿದೆ. ಒಟ್ಟು ಬೇಡಿಕೆಯ ಶೇ 80ರಷ್ಟು ತೈಲವನ್ನು ಭಾರತ ಆಮದು ಮಾಡಿಕೊಳ್ಳುತ್ತಿರುವುದು `ಸಿಎಡಿ' ಹೆಚ್ಚಲು ಇದೂ ಪ್ರಮುಖ ಕಾರಣ' ಎಂದು ಹೇಳಿದರು.

`ಡಾಲರ್ ಎದುರು ರೂಪಾಯಿ ವಿನಿಮಯ ಮೌಲ್ಯ ಕಳೆದ ಎರಡು ವರ್ಷಗಳಿಂದ ಕುಸಿತ ಕಾಣುತ್ತಿದೆ. ರೂಪಾಯಿ ಅಪಮೌಲ್ಯ ತಡೆಗೆ ದೂರಗಾಮಿ ಯೋಜನೆ ಹಾಕಿಕೊಳ್ಳಲಾಗಿದೆ. ಇದರ ಜತೆಗೆ `ಜಿಡಿಪಿ' ಹಿಂದಿನ ಗರಿಷ್ಠ ಮಟ್ಟದ ಪ್ರಗತಿ ಪಥವಾದ ಶೇ 9ಕ್ಕೆ ಮರಳಲು,   ಕೇಂದ್ರ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಸತತ ಪ್ರಯತ್ನ ನಡೆಸುತ್ತಿವೆ' ಎಂದರು.

`ಭಾರತದ ಆರ್ಥಿಕ ಮೂಲಾಂಶಗಳು ಸುಭದ್ರವಾಗಿದೆ. ಆದ್ದರಿಂದ ಜಾಗತಿಕ ಆರ್ಥಿಕ ಅಸ್ಥಿರತೆಯು ದೇಶದ ಮೇಲೆ  ಅಷ್ಟೊಂದು ಪರಿಣಾಮ ಬೀರಲಿಲ್ಲ. `ಆರ್‌ಬಿಐ' ಸಹ ಆರ್ಥಿಕ ವ್ಯವಸ್ಥೆಯನ್ನು ಸಮತೋಲನದಲ್ಲಿಡಲು ತ್ರೈಮಾಸಿಕ ಹಣಕಾಸು ನೀತಿಯ ಮೂಲಕ ಅಗತ್ಯ ಕ್ರಮಗಳನ್ನು ಕೈಗೊಂಡಿದೆ' ಎಂದು ಹೇಳಿದರು.

ರಿಸರ್ವ್ ಬ್ಯಾಂಕಿನ ಪ್ರಾದೇಶಿಕ ನಿರ್ದೇಶಕಿ ಉಮಾಶಂಕರ್, ಎಫ್‌ಕೆಸಿಸಿಐ ಅಧ್ಯಕ್ಷ ಶಿವಷಣ್ಮುಗಂ, ಉಪಾಧ್ಯಕ್ಷ ಎಸ್.ಸಂಪತ್‌ರಾಮನ್, ಬ್ಯಾಂಕಿಂಗ್, ಹಣಕಾಸು ಮತ್ತು ಆರ್ಥಿಕ ವ್ಯವಹಾರಗಳ ಸಮಿತಿಯ ಅಧ್ಯಕ್ಷ  ಐ.ಎಸ್.ಪ್ರಸಾದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.