ADVERTISEMENT

`ಸಿಎಡಿ' ತಗ್ಗಿಸಲು ರಫ್ತು ಹೆಚ್ಚಿಸಿ: ಮೂರ್ತಿ ಸಲಹೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2013, 19:59 IST
Last Updated 3 ಆಗಸ್ಟ್ 2013, 19:59 IST

ಬೆಂಗಳೂರು(ಪಿಟಿಐ): `ದೇಶದ ಚಾಲ್ತಿ ಖಾತೆ ಕೊರತೆ(ಸಿಎಡಿ) ತಗ್ಗಿಸುವ ನಿಟ್ಟಿನಲ್ಲಿ ರಫ್ತು ವಹಿವಾಟು ಹೆಚ್ಚಿಸುವ ಗುರುತರ ಜವಾಬ್ದಾರಿ ಮಾಹಿತಿ ತಂತ್ರಜ್ಞಾನ ಕಂಪೆನಿಗಳ ಮೇಲಿದೆ' ಎಂದು ಇನ್ಫೊಸಿಸ್ ಕಾರ್ಯನಿರ್ವಾಹಕ ಅಧ್ಯಕ್ಷ ಎನ್.ಆರ್. ನಾರಾಯಣ ಮೂರ್ತಿ ಹೇಳಿದರು. 

ಶನಿವಾರ ಇಲ್ಲಿ ನಡೆದ ವಿಶೇಷ ಮಹಾ ಸಭೆಯಲ್ಲಿ(ಇಜಿಎಂ) ಅವರು ಮಾತನಾಡಿದರು. ಸಭೆಯ ಆರಂಭದಲ್ಲಿ ಷೇರುದಾರರು ಮೂರ್ತಿ ಅವರ ಮರು ನೇಮಕವನ್ನು ಅನುಮೋದಿಸಿ, ಸ್ವಾಗತಿಸಿದರು. `ಸದ್ಯ ದೇಶದ ಆಮದು ರಫ್ತಿಗಿಂತ ಬಹಳ ಹೆಚ್ಚಾಗಿದೆ. ವಿದೇಶಿ ವಿನಿಮಯ ಒಳಹರಿವು ಹೆಚ್ಚಿಸುವ ಮೂಲಕ `ಸಿಎಡಿ' ತಗ್ಗಿಸಬಹುದು. ಎಲ್ಲ ಐ.ಟಿ ಕಂಪೆನಿಗಳು ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು' ಎಂದರು. ಎರಡನೇ ಅವಧಿಗೆ ತಮ್ಮನ್ನು ನೇಮಕ ಮಾಡಿದ ಷೇರುದಾರರಿಗೆ ಮೂರ್ತಿ ಕೃತಜ್ಞತೆ ಸಲ್ಲಿಸಿದರು. ಎಲ್ಲರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ರೂ1 ವೇತನ ಸ್ಪಷ್ಟನೆ
ಮೂರ್ತಿ ಅವರು ಸಾಂಕೇತಿಕವಾಗಿ ವಾರ್ಷಿಕರೂ1 ವೇತನ ಪಡೆಯಲಿದ್ದಾರೆ.    ಆದರೆ, ಈ ಕುರಿತು ಕಂಪೆನಿ ನೀಡಿರುವ ವಿವರಣೆ ಪತ್ರದಲ್ಲಿ ಹೆಚ್ಚಿನ ಮಾಹಿತಿ ಇಲ್ಲದ ಕಾರಣ, ಕೆಲವು ಷೇರುದಾರರು  ಸಭೆಯಲ್ಲಿ ಈ ಕುರಿತು ಸ್ಪಷ್ಟನೆ ಕೇಳಿದರು. ಅವರಿಗೆ ನೀಡಿರುವ ರಜೆ, ಗ್ರಾಚ್ಯುಟಿ ಕುರಿತು ಹೆಚ್ಚಿನ ಮಾಹಿತಿ ಬಯಸಿದರು. ಈ ಕುರಿತ ವಿವರಗಳನ್ನು ನೀಡಿದ ಕಂಪೆನಿಯ ನಿರ್ದೇಶಕ ಮಂಡಳಿ ಸದಸ್ಯ ವಿ.ಬಾಲಕೃಷ್ಣನ್, ಮುಂದಿನ ಬಾರಿ ಎಲ್ಲ ಮಾಹಿತಿಗಳನ್ನು ವಿವರಣೆ ಪತ್ರದಲ್ಲಿ ಸೇರಿಸುವುದಾಗಿ ಹೇಳಿದರು.

ದಾನಕ್ಕಾಗಿ ಷೇರು ಮಾರಿದ ರೋಹಿಣಿ ನಿಲೇಕಣಿ
ನವದೆಹಲಿ (ಪಿಟಿಐ): ಇನ್ಫೊಸಿಸ್ ಸಹ ಸ್ಥಾಪಕರಲ್ಲಿ ಒಬ್ಬರಾದ ನಂದನ್ ನಿಲೇಕಣಿ ಅವರ ಪತ್ನಿ ರೋಹಿಣಿ ನಿಲೇಕಣಿ, ಕಂಪೆನಿಯಲ್ಲಿದ್ದ ತಮ್ಮ ಪಾಲಿನ 5.77 ಲಕ್ಷ ಷೇರುಗಳನ್ನು ಇತ್ತೀಚೆಗೆ ಮಾರಾಟ ಮಾಡಿದ್ದಾರೆ.

ರೋಹಿಣಿ ನಿಲೇಕಣಿ ಕಂಪೆನಿಯ ಪ್ರವರ್ತಕರಲ್ಲಿ ಒಬ್ಬರು. ದಾನದ ಉದ್ದೇಶದಿಂದ ಅವರು ಷೇರುಗಳನ್ನು ಮಾರಾಟ ಮಾಡಿದ್ದು, ಈ ಮೂಲಕರೂ163.58 ಕೋಟಿ ಸಂಗ್ರಹವಾಗಿದೆ. ಮಾರಾಟದ ನಂತರ ಅವರ ಷೇರುಪಾಲು ಶೇ 1.31ಕ್ಕೆ (7.5 ಲಕ್ಷ ಷೇರುಗಳು) ತಗ್ಗಿದೆ  ಎಂದು ಕಂಪೆನಿ `ಮುಂಬೈ ಷೇರು ವಿನಿಮಯ ಕೇಂದ್ರ'ಕ್ಕೆ (ಬಿಎಸ್‌ಇ) ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ.

`ಹಲವು ವರ್ಷಗಳಿಂದ ಶಿಕ್ಷಣ, ಶುದ್ಧ ನೀರು ಪೂರೈಕೆ, ಪರಿಸರ ಸೇರಿದಂತೆ ಹಲವು ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದೇನೆ. ದಾನದ ಉದ್ದೇಶದಿಂದ ಷೇರು ಮಾರಾಟ ಮಾಡಿದ್ದೇನೆ' ಎಂದು ರೋಹಿಣಿ ನಿಲೇಕಣಿ ಹೇಳಿದ್ದಾರೆ.
ನಂದನ್ ನಿಲೇಕಣಿ ಸದ್ಯ ಇನ್ಫೊಸಿಸ್‌ನಲ್ಲಿ ಶೇ1.45ರಷ್ಟು ಷೇರುಪಾಲು (8.3 ಲಕ್ಷ ಷೇರುಗಳು) ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT