ADVERTISEMENT

ಸಿಮ್ ಮಾರಾಟಕ್ಕೆ ಮಾರ್ಗಸೂಚಿ: ಸುಪ್ರೀಂ ಸೂಚನೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2012, 19:30 IST
Last Updated 27 ಏಪ್ರಿಲ್ 2012, 19:30 IST

ನವದೆಹಲಿ(ಪಿಟಿಐ): ದೂರವಾಣಿ ಕಂಪನಿಗಳು ಗ್ರಾಹಕರಿಗೆ ಸಿಮ್ ವಿತರಿಸುವುದಕ್ಕೂ ಮುನ್ನ ಅವರ ಗುರುತು-ವಿಳಾಸ ಖಚಿತಪಡಿಸಿಕೊಳ್ಳುವ ಸಂಬಂಧ ಸೂಕ್ತ ನಿಯಮ ರೂಪಿಸಲು ತಜ್ಞರನ್ನೊಳಗೊಂಡ ಜಂಟಿ ಸಮಿತಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ಸೂಚಿಸಿದೆ.

ದೂರಸಂಪರ್ಕ ಇಲಾಖೆಯ ಕಾರ್ಯದರ್ಶಿ ನೇತೃತ್ವದಲ್ಲಿ ಐವರು ತಜ್ಞರ ಸಮಿತಿ ರಚಿಸಬೇಕು. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಮತ್ತು ದೂರಸಂಪರ್ಕ ಇಲಾಖೆಯ ತಲಾ ಇಬ್ಬರು ಅಧಿಕಾರಿಗಳನ್ನು ಸಮಿತಿಗೆ ನೇಮಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎಚ್.ಕಪಾಡಿಯ ನೇತೃತ್ವದ ನ್ಯಾಯಪೀಠ ಹೇಳಿದೆ.ಪ್ರೀಪೆಯ್ಡ ಸಿಮ್ ಮಾರಾಟ ಸಂಬಂಧ ಸೆಲ್ಯುಲರ್ ಕಂಪನಿಗಳಿಗೆ ಯಾವ ಮಾರ್ಗಸೂಚಿಗಳನ್ನು ಸೂಚಿಸಬೇಕು ಎಂಬ ಬಗ್ಗೆ ಮುಂದಿನ ಮೂರು ತಿಂಗಳೊಳಗೆ ಸಮಿತಿ ವರದಿ ಸಲ್ಲಿಸಬೇಕು ಎಂದೂ ತಿಳಿಸಿದೆ.

ಅಭಿಷೇಕ್ ಗೋಯೆಂಕ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಪೀಠ, ಸಮಿತಿ ರಚನೆಗೆ ಸೂಚಿಸಿತು.ದೂರವಾಣಿ ಸೇವಾ ಸಂಸ್ಥೆಗಳು ಗ್ರಾಹಕರ ಗುರುತು-ವಿಳಾಸದ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆಯೇ ಸಿಮ್ ಕಾರ್ಡ್ ವಿತರಿಸುತ್ತಿವೆ. ಇದು ಭಯೋತ್ಪಾದಕರೂ ನಕಲಿ ದಾಖಲೆ ಸಲ್ಲಿಸಿ ಸಿಮ್ ಖರೀದಿಸಲು  ಸಾಧ್ಯವಾಗಿಸಿದೆ. ಈ ಬಗ್ಗೆ  ಸೂಕ್ತ ನಿರ್ದೇಶನ ನೀಡಬೇಕೆಂದು ಎಂದು ಮನವಿ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.