ಮುಂಬೈ(ಪಿಟಿಐ): ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ (ಬಿಎಸ್‌ಇ) ಶನಿವಾರ 90 ನಿಮಿಷಗಳ ಕಾಲ ನಡೆದ ವಿಶೇಷ ವಹಿವಾಟಿನಲ್ಲಿ ಸೂಚ್ಯಂಕ ಕೇವಲ 1.57 ಅಂಶಗಳ ಅತ್ಯಲ್ಪ ಏರಿಕೆ ಕಂಡಿತು.
ಜಾಗತಿಕ ಮಟ್ಟದ ಷೇರುಪೇಟೆಗಳಿಗೆ ರಜಾದಿನವಾಗಿದ್ದರಿಂದ ಭಾರತದ ಷೇರು ವಿನಿಮಯ ಕೇಂದ್ರಗಳ ವಹಿವಾಟಿನ ಮೇಲೆ ಬಾಹ್ಯ ಪರಿಣಾಮವೇನೂ ಇರಲಿಲ್ಲ. 30 ಪ್ರಮುಖ ಷೇರುಗಳನ್ನು ಆಧರಿಸಿದ ಸಂವೇದಿ ಸೂಚ್ಯಂಕ 21,755.32 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು.
ಇನ್ನೊಂದೆಡೆ, ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್‌ಎಸ್‌ಇ) ‘ನಿಫ್ಟಿ’ ಸಹ 1.70 ಅಂಶಗಳ ಹೆಚ್ಚಳ ತೋರಿ 6,494.90 ಅಂಶಗಳಿಗೆ ಏರಿಕೆ ಕಂಡು ವಹಿವಾಟು ಕೊನೆಗೊಳಿಸಿತು.
ಎರಡೂ ಪ್ರಮುಖ ಷೇರು ವಿನಿಮಯ ಕೇಂದ್ರಗಳಲ್ಲಿ ಮಧ್ಯಾಹ್ನ 11.15ಕ್ಕೆ ಶುರುವಾದ ವಹಿವಾಟು ಮಧ್ಯಾಹ್ನ 12.45ರವರೆಗಷ್ಟೇ ನಡೆಯಿತು.
ವಾರಾಂತ್ಯವಾಗಿದ್ದರಿಂದ ಬಹುತೇಕ ಹೂಡಿಕೆ ಮಾರ್ಗದರ್ಶನ ಸಂಸ್ಥೆಗಳು, ಷೇರು ದಲ್ಲಾಳಿಗಳು ವಹಿವಾಟಿನಿಂದ ದೂರ ಉಳಿದಿದ್ದರು. ಹೂಡಿಕೆದಾರರಿಗೆ ಸೂಕ್ತ ಸಲಹೆ, ಮಾರ್ಗದರ್ಶನ ಲಭ್ಯವಿಲ್ಲದೇ ಇದ್ದುದರಿಂದ ವಹಿವಾಟಿನ ಪ್ರಮಾಣವೂ ಬಹಳ ಕಡಿಮೆ ಇತ್ತು ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.