ADVERTISEMENT

ಸೂಚ್ಯಂಕ: ಜೂನ್ ಹೊತ್ತಿಗೆ ಚೇತರಿಕೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2012, 19:30 IST
Last Updated 2 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ): ಮುಂಬೈ ಷೇರುಪೇಟೆ ವಹಿವಾಟಿನ ಮಾನದಂಡವಾಗಿರುವ ಸಂವೇದಿ ಸೂಚ್ಯಂಕವು, ಈ ವರ್ಷದ ಜೂನ್ ತಿಂಗಳ ಹೊತ್ತಿಗೆ 20 ಸಾವಿರ ಅಂಶಗಳಿಗೆ ಏರಿಕೆಯಾಗುವ ಸಾಧ್ಯತೆಗಳು ಇವೆ ಎಂದು ಜೆಪಿ ಮಾರ್ಗನ್ ಅಸೆಟ್ ಮ್ಯಾನೇಜ್‌ಮೆಂಟ್ ನಡೆಸಿದ ಸಮೀಕ್ಷೆ ತಿಳಿಸಿದೆ.

ಪೇಟೆಯಲ್ಲಿ ಇತ್ತೀಚೆಗೆ ಕಂಡು ಬಂದಿರುವ ಏರಿಳಿತಗಳು ಹೂಡಿಕೆದಾರರನ್ನು ಧೃತಿಗೆಡಿಸಿಲ್ಲ. ಜೂನ್ ತಿಂಗಳ ಹೊತ್ತಿಗೆ ಸೂಚ್ಯಂಕವು 17 ಸಾವಿರದಿಂದ 20 ಸಾವಿರದ ಮಧ್ಯೆ ವಹಿವಾಟು ನಡೆಸಲಿದೆ ಎಂದು ಶೇ 48ರಷ್ಟು ಸಾಮಾನ್ಯ ಹೂಡಿಕೆದಾರರು ಮತ್ತು ಶೇ 76ರಷ್ಟು ಹಣಕಾಸು ಸಲಹೆಗಾರರು ಅಂದಾಜಿಸಿದ್ದಾರೆ.

ಮ್ಯೂಚುವಲ್ ಫಂಡ್‌ಗಳಲ್ಲಿನ ಸಾಮಾನ್ಯ ಹೂಡಿಕೆದಾರರ ವಿಶ್ವಾಸವು ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಗಮನಾರ್ಹವಾಗಿ ಚೇತರಿಸಿಕೊಂಡಿದೆ. ಒಟ್ಟಾರೆ ಹೂಡಿಕೆದಾರರ ಷೇರು ಖರೀದಿ ಉತ್ಸಾಹವು ಕೆಲ ಮಟ್ಟಿಗೆ ಕಡಿಮೆಯಾಗಿದ್ದರೂ, ದೇಶಿ ಮತ್ತು ಜಾಗತಿಕ ಅರ್ಥ ವ್ಯವಸ್ಥೆಯ ಚೇತರಿಕೆಗೆ ಸಂಬಂಧಿಸಿದ ಆಶಾವಾದವು ಗಮನಾರ್ಹವಾಗಿ ಚೇತರಿಕೆ ಕಾಣುತ್ತಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ, ಉದ್ದಿಮೆ ಸಂಸ್ಥೆಗಳು, ಹಣಕಾಸು ಸಲಹೆಗಾರರು ಮತ್ತು ಶ್ರೀಮಂತರಲ್ಲಿ ಹೆಚ್ಚಿನ ಆಶಾವಾದವೂ ಕಂಡು ಬರುತ್ತಿದೆ. ಆದರೆ, ಬಹುಸಂಖ್ಯಾತ ಸಾಮಾನ್ಯ ಹೂಡಿಕೆದಾರರಲ್ಲಿ ನಿರಾಶೆ ಮನೆ ಮಾಡಿದೆ ಎಂದು ಸಮೀಕ್ಷೆ ತಿಳಿಸಿದೆ.

ದುಬಾರಿ ಬೆಲೆಯು ಚಿನ್ನದಲ್ಲಿ ಹಣ ಹೂಡಿಕೆ ಮಾಡುವ ಪ್ರವೃತ್ತಿಗೆ ಕಡಿವಾಣ ವಿಧಿಸಿದೆ. ಹೀಗಾಗಿ ಚಿನ್ನದಲ್ಲಿ ಹಣ ಹೂಡಿಕೆ ಮಾಡುವವರ ಸಂಖ್ಯೆಯು 2010ರ ಡಿಸೆಂಬರ್ ತಿಂಗಳಿನಿಂದೀಚೆಗೆ ಶೇ 19ರಷ್ಟು ಕಡಿಮೆಯಾಗಿದೆ.

ರೂಪಾಯಿ ಮೌಲ್ಯ ಕಡಿಮೆಯಾಗಿರುವುದು, ವಿತ್ತೀಯ ಕೊರತೆ ಹೆಚ್ಚಳ, ಗರಿಷ್ಠ ಹಣದುಬ್ಬರ ದರ,  ಜಾಗತಿಕ ಅನಿಶ್ಚಿತತೆ ಏರಿಕೆ, ತೀವ್ರಗೊಳ್ಳಲಿರುವ ಐರೋಪ್ಯ ಒಕ್ಕೂಟದ ಸಾಲದ ಬಿಕ್ಕಟ್ಟು ಮತ್ತು ಸೂಚ್ಯಂಕ ಇಳಿಕೆ ಮುಂತಾದವು ಬಂಡವಾಳ ಹೂಡಿಕೆ ಉತ್ಸಾಹ ಕುಗ್ಗಿಸಿವೆ ಎಂದು ಜೆಪಿ ಮಾರ್ಗನ್ ಅಸೆಟ್ ಮ್ಯಾನೇಜ್‌ಮೆಂಟ್‌ನ ವ್ಯವಸ್ಥಾಪಕ ನಿರ್ದೇಶಕ ನಂದಕುಮಾರ್ ಸೂರ್ತಿ ಹೇಳಿದ್ದಾರೆ.

ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತಾ, ಚೆನ್ನೈ, ಅಹ್ಮದಾಬಾದ್, ಪುಣೆ ಮತ್ತಿತರ ಮಹಾನಗರಗಳಲ್ಲಿ ಈ ಸಮೀಕ್ಷೆ ನಡೆಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.