ADVERTISEMENT

ಸೂಚ್ಯಂಕ: 305 ಅಂಶ ಕುಸಿತ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 17:10 IST
Last Updated 1 ಫೆಬ್ರುವರಿ 2011, 17:10 IST

ಮುಂಬೈ (ಪಿಟಿಐ): ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಮಂಗಳವಾರದ ವಹಿವಾಟಿನಲ್ಲಿ 305 ಅಂಶಗಳ ಕುಸಿತ ಕಾಣುವುದರೊಂದಿಗೆ ಕಳೆದ ಐದು ತಿಂಗಳಲ್ಲೇ ಕನಿಷ್ಠ ಎನ್ನಬಹುದಾದ 18,022 ಅಂಶಗಳಿಗೆ ಇಳಿದಿದೆ.

ಇತ್ತೀಚೆಗೆ ಹಲವು ಪ್ರಮುಖ ಕಂಪೆನಿಗಳು ತ್ರೈಮಾಸಿಕ ಸಾಧನೆ ಪ್ರಕಟಿಸಿದ ಹಿನ್ನೆಲೆಯಲ್ಲಿ ಪೇಟೆಯಲ್ಲಿ ಮಾರಾಟದ ಒತ್ತಡ ಹೆಚ್ಚಿತ್ತು. ಭಾರತೀಯ ರಿಸರ್ವ್  ಬ್ಯಾಂಕ್ ತ್ರೈಮಾಸಿಕ ಹಣಕಾಸು ಪರಾಮರ್ಷೆಯಲ್ಲಿ ಅಲ್ಪಾವಧಿ ಬಡ್ಡಿ ದರಗಳನ್ನು ಹೆಚ್ಚಿಸಿದ್ದು, ಷೇರು ಪೇಟೆ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎನ್ನಲಾಗಿದೆ.

ಒಟ್ಟಾರೆ  ಜನವರಿ ತಿಂಗಳು ಹೂಡಿಕೆದಾರಿಗೆ ಅತ್ಯಂತ ಕೆಟ್ಟ ಮಾಸ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ ಮತ್ತೆ ಸೂಚ್ಯಂಕ 305 ಅಂಶಗಳಷ್ಟು ಕುಸಿತ ದಾಖಲಿಸಿರುವುದು ಚಿಕ್ಕ ಹೂಡಿಕೆದಾರಲ್ಲಿ ಆತಂಕ ಮೂಡಿಸಿದೆ.

ಹಣದುಬ್ಬರ ದರ ಏರಿಕೆ ಮುಂದುವರೆದಿರುವುದು ಮತ್ತು ಬ್ಯಾಂಕುಗಳು ಬಡ್ಡಿ ದರ ಹೆಚ್ಚಿಸಿರುವುದು ಸೂಚ್ಯಂಕ ಕುಸಿಯಲು ಮುಖ್ಯ ಕಾರಣ ಎನ್ನಲಾಗಿದೆ. ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಧಾರಣೆ ನಿಧಾನವಾಗಿ ಇಳಿಯುತ್ತಿದೆ. ಇತ್ತ ಮೂರನೇ ತ್ರೈಮಾಸಿಕ ಸಾಧನೆ ಪ್ರಕಟವಾಗುತ್ತಿದ್ದಂತೆ ಒಮ್ಮಲೆ ಮಾರಾಟದ ಒತ್ತಡ ಹೆಚ್ಚಿದ್ದು, ಸೂಚ್ಯಂಕ ಕನಿಷ್ಠ ಮಟ್ಟಕ್ಕೆ ಕುಸಿಯಲು ಮುಖ್ಯ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಕಳೆದ ನಾಲ್ಕು ವಹಿವಾಟುಗಳಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಒಟ್ಟು 825 ಅಂಶಗಳಷ್ಟು ಕುಸಿತ ಕಂಡಿದೆ.  ಯಂತ್ರೋಪಕರಣ ತಯಾರಿಕೆ ಕಂಪೆನಿಗಳು, ರಿಯಲ್ ಎಸ್ಟೇಟ್, ಮತ್ತು ತೈಲ ಶುದ್ದೀಕರಣ ಕಂಪೆನಿಗಳ ಷೇರುಗಳ ಮಾರಾಟ ಈ ಅವಧಿಯಲ್ಲಿ ಹೆಚ್ಚಿದೆ.

ಕಳೆದ ದೀಪಾವಳಿ ಮುಹೂರ್ತ ವಹಿವಾಟಿನಲ್ಲಿ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿದ ಸೂಚ್ಯಂಕ ನಂತರ ಇಲ್ಲಿಯವರೆಗೆ ಶೇಕಡ 14ರಷ್ಟು ಇಳಿಕೆ ಕಂಡಿದೆ.

ನಿಫ್ಟಿ ಕುಸಿತ: ರಾಷ್ಟ್ರೀಯ ಷೇರು ಸೂಚ್ಯಂಕ ‘ನಿಫ್ಟಿ’ ಕೂಡ ದಿನದ ವಹಿವಾಟಿನಲ್ಲಿ 88 ಅಂಶಗಳ ಕುಸಿತ ಕಂಡು 5,417 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು.

ಆರ್‌ಐಎಲ್‌ಗೆ ನಷ್ಟ: ಷೇರುಪೇಟೆಯಲ್ಲಿ  ವಿಶ್ವಾಸಾರ್ಹ ಕಂಪೆನಿ ಎನ್ನುವ ಹೆಸರಿನ ರಿಯಲನ್ಸ್ ಇಂಡಸ್ಟ್ರೀಸ್ ಸತತ ಆರನೆಯ ದಿನವೂ ಕುಸಿತ ದಾಖಲಿಸಿದೆ.  ಈ ಅವಧಿಯಲ್ಲಿ ಹೂಡಿಕೆದಾರರಿಗೆ ಒಟ್ಟು 31 ಸಾವಿರ ಕೋಟಿ ಸಂಪತ್ತು ನಷ್ಟವಾಗಿದೆ.

ಮಂಗಳವಾರದ ವಹಿವಾಟಿನಲ್ಲಿ ‘ಆರ್‌ಐಎಲ್’ ಷೇರುಗಳು ಶೇ 2.57ರಷ್ಟು ಕುಸಿತ ಕಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.