ADVERTISEMENT

ಸೂಚ್ಯಂಕ: 390 ಅಂಶ ಏರಿಕೆ

ಷೇರುಪೇಟೆ ಬಂಡವಾಳ ಮೌಲ್ಯರೂ 64.24 ಲಕ್ಷ ಕೋಟಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2013, 19:59 IST
Last Updated 16 ಏಪ್ರಿಲ್ 2013, 19:59 IST

ಮುಂಬೈ (ಪಿಟಿಐ): ಮುಂಬೈ ಷೇರು ಪೇಟೆ ಸಂವೇದಿ ಸೂಚ್ಯಂಕವು ಮಂಗಳವಾರದ ವಹಿವಾಟಿನಲ್ಲಿ 390 ಅಂಶಗಳಷ್ಟು ಏರಿಕೆ ಕಂಡಿದ್ದು ಕಳೆದ 7 ತಿಂಗಳಲ್ಲೇ ಗರಿಷ್ಠ ಮಟ್ಟವಾದ 18,744 ಅಂಶಗಳನ್ನು ತಲುಪಿದೆ.

ಸಗಟು ಹಣದುಬ್ಬರ ಇಳಿದಿರುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿ ದರ ಕಡಿತ ಮಾಡಬಹುದು ಎಂಬ ವಿಶ್ಲೇಷಣೆಯಿಂದ  ಷೇರುಪೇಟೆಯಲ್ಲಿ ವಹಿವಾಟು ಚುರುಕುಗೊಂಡಿದೆ. ಇದರಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರ   (ಎಫ್‌ಐಐ) ಖರೀದಿ ಭರಾಟೆ ಹೆಚ್ಚಿದೆ. ಇದರ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಮತ್ತು ಚಿನ್ನದ ಧಾರಣೆ ಇಳಿದಿರುವುದು ಸೂಚ್ಯಂಕ ಚಿಮ್ಮುವಂತೆ ಮಾಡಿದೆ. ಒಂದೇ ದಿನದಲ್ಲಿ ಹೂಡಿಕೆದಾರರ ಸಂಪತ್ತುರೂ1 ಲಕ್ಷ ಕೋಟಿಯಷ್ಟು ವೃದ್ಧಿಯಾಗಿದೆ.

2012ರ ಸೆಪ್ಟೆಂಬರ್‌ನಲ್ಲಿ ಸೂಚ್ಯಂಕ 403 ಅಂಶಗಳಷ್ಟು ಏರಿಕೆ ಕಂಡಿತ್ತು. ನಂತರ ದಾಖಲಾಗಿರುವ ಗರಿಷ್ಠ ಏರಿಕೆ ಇದಾಗಿದೆ. ರಾಷ್ಟ್ರೀಯ ಷೇರು ಸೂಚ್ಯಂಕ      `ನಿಫ್ಟಿ' ಕೂಡ ದಿನದ ವಹಿವಾಟಿನಲ್ಲಿ 120 ಅಂಶಗಳಷ್ಟು (ಶೇ2.16) ಏರಿಕೆ ಪಡೆದು 5,689 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು. ಷೇರುಪೇಟೆ ಬಂಡವಾಳ ಮೌಲ್ಯರೂ 64.24 ಲಕ್ಷ ಕೋಟಿಗೆ ಏರಿಕೆ ಕಂಡಿದೆ.

ಚಿನ್ನ ಮತ್ತು ತೈಲದ ಬೆಲೆ ಇಳಿದಿರುವುದು ಪರೋಕ್ಷವಾಗಿ ಚಾಲ್ತಿ ಖಾತೆ ಕೊರತೆ (ಸಿಎಡಿ) ತಗ್ಗಿಸುತ್ತದೆ. ಇದರ ಜತಗೆ ಸಗಟು ಬೆಲೆ ಸೂಚ್ಯಂಕ ಆಧರಿಸಿದ ಹಣದುಬ್ಬರ ದರವೂ ಗಣನೀಯವಾಗಿ ಇಳಿಕೆ ಕಂಡಿದೆ ಈ ಎಲ್ಲ ಸಂಗತಿಗಳು ಷೇರುಪೇಟೆಗೆ ಚೇತರಿಕೆ ನೀಡಿದೆ ಎಂದು ಬೊನಂಜಾ ಪೋರ್ಟ್‌ಪೊಲಿಯ ಸಂಸ್ಥೆಯ ನಿಧಿ ಸಾರಸ್ವತ್ ಅಭಿಪ್ರಾಯಪಟ್ಟಿದ್ದಾರೆ.

ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ, ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಮಹೀಂದ್ರಾ, ಹೀರೊ ಮೋಟೊಕಾರ್ಪ್, ಬಜಾಜ್ ಆಟೊ, ಒಎನ್‌ಜಿಸಿ  ಷೇರುಗಳು ಏರಿಕೆ ಪಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.