ADVERTISEMENT

`ಸೆಬಿ' ಕಾಯ್ದೆ ತಿದ್ದುಪಡಿಗೆ ಒಪ್ಪಿಗೆ

ನಿಯಂತ್ರಣ ಸಂಸ್ಥೆಗೆ ಹೆಚ್ಚಿನ ಅಧಿಕಾರ

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 19:45 IST
Last Updated 17 ಜುಲೈ 2013, 19:45 IST

ನವದೆಹಲಿ(ಪಿಟಿಐ): ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಣ ಮಂಡಳಿ (ಸೆಬಿ)ಗೆ ಹೆಚ್ಚಿನ ಅಧಿಕಾರ ನೀಡುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ, `ಸೆಬಿ ಕಾಯ್ದೆ ತಿದ್ದುಪಡಿ' ಪ್ರಸ್ತಾವನೆಗೆ ಅನುಮೋದನೆ ನೀಡಿದೆ.

ಹೆಚ್ಚಿನ ಲಾಭದ ಆಮಿಷವೊಡ್ಡಿ ಹೂಡಿಕೆದಾರರನ್ನು ವಂಚಿಸುವಂತಹ ಹಣಕಾಸು ಸಂಸ್ಥೆಗಳಿಗೆ ಮತ್ತು ಅವುಗಳ ಹೂಡಿಕೆ ಯೋಜನೆಗಳನ್ನು ನಿವಾರಿಸುವುದಕ್ಕಾಗಿ `ಸೆಬಿ'ಗೆ ಹೆಚ್ಚಿನ ಅಧಿಕಾರ ನೀಡಲೆಂದೇ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ.

ಬುಧವಾರ ಇಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ `ಸೆಬಿ ಕಾಯ್ದೆ ತಿದ್ದುಪಡಿ ಪ್ರಸ್ತಾವನೆ'ಗೆ ಒಪ್ಪಿಗೆ ನೀಡಿತು. ಅನುಮಾನಾಸ್ಪದ ರೀತಿ ಹಣಕಾಸು ಚಟುವಟಿಕೆ ನಡೆಸುವ ಸಂಸ್ಥೆಗಳಲ್ಲಿ ಶೋಧ ನಡೆಸಲು, ಅಗತ್ಯ ದಾಖಲೆ ಗಳನ್ನು ಮತ್ತು ಸಂಬಂಧಿಸಿದ ಆಸ್ತಿಯನ್ನೂ ಜಪ್ತಿ ಮಾಡಲು ಹಾಗೂ ಹಣಕಾಸು ಸಂಸ್ಥೆಯ ಆಡಳಿತಗಾರರ, ಅಧಿಕಾರಿಗಳ, ಸಿಬ್ಬಂದಿಯ ದೂರವಾಣಿ ಕರೆಗಳ ವಿವರವಾದ ದತ್ತಾಂಶ (ಡೇಟಾ) ಪಡೆದುಕೊಳ್ಳಲು ಈ ತಿದ್ದುಪಡಿ ಕಾಯ್ದೆಯು `ಸೆಬಿ' ಹೆಚ್ಚಿನ ಅಧಿಕಾರ ನೀಡಲಿದೆ.

ಬಲಿಷ್ಠ ಕಾಯ್ದೆ
ಇಂಥದೊಂದು ಬಲಿಷ್ಠ ಕಾಯ್ದೆಗಾಗಿ `ಸೆಬಿ' ದೀರ್ಘಕಾಲದಿಂದ ಕಾಯುತ್ತಿತ್ತು. ತಿದ್ದುಪಡಿ ಕಾಯ್ದೆ ಜಾರಿ ನಂತರ ಅಮಾಯಕರನ್ನು ವಂಚಿಸುವ ಹಣಕಾಸು ಯೋಜನೆಗಳು, ಹೂಡಿಕೆದಾರರನ್ನು ಮರಳು ಮಾಡುವಂತಹ ಆಮಿಷಗಳನ್ನೊಡುವ ವಂಚಕ ಸಂಸ್ಥೆಗಳ ಆಟ ಕೊನೆಗೊಳ್ಳಲಿದೆ ಎಂಬ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.