ADVERTISEMENT

ಸೈರಸ್: ಟಾಟಾ ಉತ್ತರಾಧಿಕಾರಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2011, 19:30 IST
Last Updated 23 ನವೆಂಬರ್ 2011, 19:30 IST
ಸೈರಸ್: ಟಾಟಾ ಉತ್ತರಾಧಿಕಾರಿ
ಸೈರಸ್: ಟಾಟಾ ಉತ್ತರಾಧಿಕಾರಿ   

ನವದೆಹಲಿ (ಪಿಟಿಐ): ರತನ್ ಟಾಟಾ ಉತ್ತರಾಧಿಕಾರಿ ಯಾರು ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ದೊರಕಿದೆ. 80 ಶತಕೋಟಿ ಡಾಲರ್ ಮೌಲ್ಯದ ಟಾಟಾ ಸಮೂಹಕ್ಕೆ ನೂತನ  ಉಪಾಧ್ಯಕ್ಷರಾಗಿ 43 ವರ್ಷದ ಸೈರಸ್ ಪಿ. ಮಿಸ್ತ್ರಿ ಅವರನ್ನು ಟಾಟಾ ನಿರ್ದೇಶಕ ಮಂಡಳಿ ಸರ್ವಾನುಮತದಿಂದ ನೇಮಕ ಮಾಡಿದೆ.

ಶಪೂರ್ಜಿ ಪಲ್ಲೊಂಜಿ ಸಮೂಹದ ವ್ಯವಸ್ಥಾಪಕ ನಿರ್ದೇಶಕರಾಗಿರುವ ಸೈರಸ್ ಅವರನ್ನು ಟಾಟಾ ಸನ್ಸ್ ನಿರ್ದೇಶಕ ಮಂಡಳಿಯ ನೂತನ ಉತ್ತರಾಧಿಕಾರಿ ಎಂದು ಬುಧವಾರ ಅಧಿಕೃತವಾಗಿ ಘೋಷಿಸಿದೆ. ಶಪೂರ್ಜಿ ಪಲ್ಲೊಂಜಿ ಸಂಸ್ಥೆ ಟಾಟಾ ಸನ್ಸ್‌ನಲ್ಲಿ ಶೇ 18ರಷ್ಟು ಪಾಲು ಹೊಂದಿದೆ.

ಸೈರಸ್, ರತನ್ ಟಾಟಾ ಅವರೊಂದಿಗೆ ಮುಂದಿನ ಒಂದು ವರ್ಷಗಳ ಕಾಲ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. 2012ರ ಡಿಸೆಂಬರ್ ತಿಂಗಳಲ್ಲಿ ಟಾಟಾ ನಿವೃತ್ತರಾಗುತ್ತಿದ್ದಂತೆ, ಇವರು ಉತ್ತರಾಧಿಕಾರಿ ಹುದ್ದೆ ಅಲಂಕರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಹೊಸ ನಾಯಕ
ನವದೆಹಲಿ (ಪಿಟಿಐ): ನಲವತ್ಮೂರು ವರ್ಷದ ಸೈರಸ್ ಪಲ್ಲೊಂಜಿ ಮಿಸ್ತ್ರಿ 2012ರ ಡಿಸೆಂಬರ್‌ನಲ್ಲಿ ಟಾಟಾ ಸನ್ಸ್ ಅಧ್ಯಕ್ಷ ರತನ್ ಟಾಟಾ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
2.5 ಶತಕೋಟಿ ಡಾಲರ್‌ನ (ರೂ 12,500 ಕೋಟಿ) ನಿರ್ಮಾಣ ರಂಗದ ದೈತ್ಯ ಸಂಸ್ಥೆಯಾಗಿರುವ ಶಪೂರ್ಜಿ ಪಲ್ಲೊಂಜಿಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಸೈರಸ್ ಅವರ ಹೆಗಲಿಗೆ ಈಗ ಹೆಚ್ಚಿನ ಹೊಣೆಗಾರಿಕೆಯ ಜವಾಬ್ದಾರಿ ಬೀಳಲಿದೆ. ಉಪ್ಪಿನಿಂದ ಹಿಡಿದು ಸಾಫ್ಟ್‌ವೇರ್‌ವರೆಗೆ ವೈವಿಧ್ಯಮಯ ವಹಿವಾಟು ನಡೆಸುತ್ತಿರುವ 80 ಶತಕೋಟಿ ಡಾಲರ್‌ನ (ರೂ 4,00,000 ಕೋಟಿ) ಟಾಟಾ ಸಮೂಹ ನಿರ್ವಹಿಸುವ ಟಾಟಾ ಸನ್ಸ್‌ನ ಹೊಸ ಅಧ್ಯಕ್ಷರಾಗಲಿದ್ದಾರೆ.

ಮಿಸ್ತ್ರಿ ಅವರು ಟಾಟಾ ಸಮೂಹಕ್ಕೆ ಹೊಸಬರೇನೂ ಅಲ್ಲ. 2006ರಲ್ಲಿಯೇ ಇವರು ಟಾಟಾ ಸನ್ಸ್‌ನ ಆಡಳಿತ ಮಂಡಳಿಗೆ ನೇಮಕಗೊಂಡಿದ್ದರು. ಸದ್ಯಕ್ಕೆ ಅವರು ಟಾಟಾ ಸನ್ಸ್ ಮತ್ತು ಟಾಟಾ ಎಲ್‌ಎಕ್ಸಿ (ಭಾರತ) ನಿರ್ದೇಶಕರಾಗಿದ್ದಾರೆ. ರತನ್ ಟಾಟಾ ಅವರ ಉತ್ತರಾಧಿಕಾರಿ ಆಯ್ಕೆಗೆ ರಚಿಸಲಾಗಿದ್ದ ಐದು ಮಂದಿ ಸಮಿತಿಯ ಸದಸ್ಯರೂ ಆಗಿದ್ದರು.1968ರ ಜುಲೈ 4ರಂದು ಜನಿಸಿರುವ ಸೈರಸ್, 1991ರಲ್ಲಿ ಶಪೂರ್ಜಿ ಪಲ್ಲೊಂಜಿ ಸಂಸ್ಥೆಗೆ ನಿರ್ದೇಶಕರಾಗಿ ಸೇರಿಕೊಂಡು ಸಂಸ್ಥೆಯ ವಹಿವಾಟನ್ನು ಗಮನಾರ್ಹವಾಗಿ ವಿಸ್ತರಿಸಿದರು. ಸದ್ಯಕ್ಕೆ ಈ ಸಂಸ್ಥೆಯಲ್ಲಿ 23 ಸಾವಿರದಷ್ಟು ಸಿಬ್ಬಂದಿ ದುಡಿಯುತ್ತಿದ್ದಾರೆ. ಭಾರತ ಸೇರಿದಂತೆ ಮಧ್ಯ ಪ್ರಾಚ್ಯ ಮತ್ತು ಆಫ್ರಿಕಾದಲ್ಲಿಯೂ ವಹಿವಾಟು ನಡೆಸುತ್ತಿದೆ.



`ಸೈರಸ್ ಅವರ ನೇಮಕವು, ಉತ್ತಮ ನಿರ್ಧಾರ ಮತ್ತು ದೂರದೃಷ್ಟಿಯ ಆಯ್ಕೆಯಾಗಿದೆ.  2006ರಿಂದ ಅವರು ಸಂಸ್ಥೆಯ ನಿರ್ದೇಶಕ ಮಂಡಳಿಯಲ್ಲಿದ್ದಾರೆ. ತಮ್ಮ ದಕ್ಷ ಕಾರ್ಯವೈಖರಿ, ಸೂಕ್ಷ್ಮ ತಂತ್ರಗಾರಿಕೆ ಮತ್ತು  ಮಾನವೀಯ ಗುಣಗಳಿಂದ ಗಮನ ಸೆಳೆದಿದ್ದಾರೆ. ಮುಂದಿನ ಒಂದು ವರ್ಷಗಳ ಕಾಲ ನಾನು ಅವರೊಂದಿಗೆ ಕೆಲಸ ಮಾಡಲು ಬದ್ಧನಾಗಿದ್ದೇನೆ. ನನ್ನ ನಿವೃತ್ತಿಯ ಹೊತ್ತಿಗೆ, ಟಾಟಾ ಸಮೂಹದ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳಲು ಬೇಕಿರುವ ಅಗಾಧ ಕಾರ್ಯನಿರ್ವಹಣಾ ಅನುಭವ ಗಳಿಸಿಕೊಳ್ಳಲು ಅವರಿಗೆ ನೆರವಾಗುತ್ತೇನೆ~ ಎಂದು ರತನ್ ಟಾಟಾ ಅಭಿಪ್ರಾಯಪಟ್ಟಿದ್ದಾರೆ.

ಲಂಡನ್‌ನ ಇಂಪಿರಿಯಲ್ ಕಾಲೇಜಿನಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವ ಸೈರಸ್, ಲಂಡನ್‌ನ ಬಿಸಿನೆಸ್ ಸ್ಕೂಲ್‌ನ  ಆಡಳಿತ  ನಿರ್ವಹಣೆ  ಸ್ನಾತಕೋತ್ತರ ಪದವೀಧರರೂ ಹೌದು.

`ಉತ್ತರಾಧಿಕಾರಿಯಾಗಿ ನನ್ನನ್ನು ನೇಮಕ ಮಾಡಿರುವುದು ನನಗೆ ಲಭಿಸಿದ ಅತ್ಯಂತ ದೊಡ್ಡ ಗೌರವವಾಗಿದೆ. ಹೊಸ ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇನೆ. ಟಾಟಾ ಸಮೂಹದ ನಿರೀಕ್ಷೆ, ಮೌಲ್ಯಗಳಿಗೆ ಧಕ್ಕೆಯಾಗದ ರೀತಿಯಲ್ಲಿ, ಯಾವುದೇ ಸಂಘರ್ಷಕ್ಕೆ ಅವಕಾಶ ಕೊಡದೆ ಕಾರ್ಯನಿರ್ವಹಿಸುತ್ತೇನೆ~ ಎಂದು ಸೈರಸ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT