ADVERTISEMENT

ಸ್ಥಿರ ಸರ್ಕಾರ: ಭಾರಿ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 25 ಮೇ 2014, 19:30 IST
Last Updated 25 ಮೇ 2014, 19:30 IST
ಸ್ಥಿರ ಸರ್ಕಾರ: ಭಾರಿ ನಿರೀಕ್ಷೆ
ಸ್ಥಿರ ಸರ್ಕಾರ: ಭಾರಿ ನಿರೀಕ್ಷೆ   

ನವದೆಹಲಿ (ಪಿಟಿಐ): ಕೇಂದ್ರದಲ್ಲಿ ಸ್ಥಿರ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದರಿಂದ ಷೇರುಪೇಟೆ ಸಂವೇದಿ ಸೂಚ್ಯಂಕ ಹೊಸ ದಾಖಲೆಯತ್ತ ನೆಗೆಯಲು ಸಜ್ಜಾಗಿ ನಿಂತಿದೆ. ಆದರೆ, ಗುರುವಾರ (ಮೇ 22) ವಾಯಿದಾ ವಹಿವಾಟು ಕೊನೆ­ಗೊಳ್ಳು­ವುದರಿಂದ ಪೇಟೆಯಲ್ಲಿ ಸ್ವಲ್ಪ ಮಟ್ಟಿಗಿನ ಅಸ್ಥಿರತೆ ಕಾಣಿಸಿಕೊಳ್ಳಬಹುದು ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಜೂನ್‌ನಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಪ್ರಕಟಿಸಲಿರುವ ಹಣ­ಕಾಸು ನೀತಿ ಪರಾಮರ್ಶೆ ಮತ್ತು ಜುಲೈನಲ್ಲಿ ಮಂಡನೆಯಾಗಲಿರುವ ಪೂರ್ಣ ಪ್ರಮಾಣದ ಬಜೆಟ್‌  ಮತ್ತು ಹೊಸ ಸರ್ಕಾರ ಪ್ರಕಟಿಸಲಿರುವ ಆರ್ಥಿಕ ಸುಧಾರಣಾ ಕ್ರಮಗಳು  ಷೇರು­ಪೇಟೆಗೆ ­ದೊಡ್ಡ ಮಟ್ಟದಲ್ಲಿ ಉತ್ತೇಜನ ನೀಡಲಿವೆ. ಮೋದಿ ಪ್ರಮಾಣ ವಚನ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಷೇರು­ಪೇಟೆಯಲ್ಲಿ ಅದರ ಸಕಾರಾತ್ಮಕ ಪರಿ­ಣಾ­ಮಗಳನ್ನು ನಿರೀಕ್ಷಿಸಬಹುದು ಎಂದು ‘ರೆಲಿಗೇರ್‌ ಸೆಕ್ಯುರಿಟೀಸ್‌’ನ ರಿಟೇಲ್‌ ವಿಭಾಗದ ಮುಖ್ಯಸ್ಥ ಜಯಂತ್‌ ಮಾಂಗ್ಲಿಕ್‌ ಅಭಿಪ್ರಾ­ಯಪಟ್ಟಿದ್ದಾರೆ.

ಕಳೆದ ವಾರಾಂತ್ಯದಲ್ಲಿ ಮುಂಬೈ ಷೇರು ವಿನಿಮಯ ಕೇಂದ್ರ (ಬಿಎಸ್‌ಇ) ಮತ್ತು ರಾಷ್ಟ್ರಿಯ ಷೇರು ವಿನಿಮಯ ಕೇಂದ್ರದ (ಎನ್‌ಎಸ್‌ಇ) ‘ನಿಫ್ಟಿ’ ಕ್ರಮ­ವಾಗಿ 24,693 ಮತ್ತು 7,367 ಅಂಶ­ಗಳಿಗೆ ವಹಿವಾಟು ಕೊನೆಗೊಳಿಸಿವೆ. ಈ ವಾರ ಟಾಟಾ ಮೋಟಾರ್ಸ್‌, ಸನ್‌ ಫಾರ್ಮಾ, ಕೋಲ್‌ ಇಂಡಿಯಾ ಕಂಪೆನಿ­ಗಳು 2013–14ನೇ ಸಾಲಿನ ನಾಲ್ಕ­ನೇ (ಜನವರಿ–ಮಾರ್ಚ್‌) ತ್ರೈಮಾ­ಸಿಕ ಫಲಿತಾಂಶ ಪ್ರಕಟಿಸಲಿವೆ.

ಹೀಗಾಗಿ  ಈ ಕಂಪೆನಿಗಳ ಷೇರು ಮೌಲ್ಯದಲ್ಲಿ ಏರಿಕೆ ನಿರೀಕ್ಷಿಸಬಹುದಾಗಿದೆ. ಡಾಲರ್‌ ವಿರುದ್ಧ ರೂಪಾಯಿ ವಿನಿಮಯ ಮೌಲ್ಯ ಸ್ಥಿರ­ಗೊಂ­ಡಿರುವುದರಿಂದ ವಿದೇಶಿ ಸಾಂಸ್ಥಿಕ ಹೂ­ಡಿಕೆದಾರರ ಚಟು­ವಟಿ­ಕೆಯೂ ಹೆಚ್ಚಿದೆ ಎಂದು ಅವರು ಹೇಳಿದ್ದಾರೆ.

‘ಹೊಸ ಸರ್ಕಾರದಿಂದಉದ್ಯಮಿ ಸ್ನೇಹಿ ಆರ್ಥಿಕ ನೀತಿಗಳನ್ನು ನಿರೀಕ್ಷಿಸಬಹುದು. ಇದರಿಂದ ಷೇರು­ಪೇಟೆಗೆ ವಿದೇಶಿ ಬಂಡವಾಳ ಹರಿವು ಹೆಚ್ಚ­ಲಿದೆ’ ಎಂದು ‘ವೆರಾಸಿಟಿ ಬ್ರೋಕರಿಂಗ್‌’ ಸಂಸ್ಥೆ ಮುಖ್ಯಸ್ಥ ಜಿಗ್ನೇಶ್‌ ಚೌಧರಿ ಹೇಳಿದ್ದಾರೆ.

ವಿದೇಶಿ ವಿನಿಮಯ ಭಾರಿ ಹೆಚ್ಚಳ
ಮುಂಬೈ(ಪಿಟಿಐ): 
ದೇಶದಲ್ಲಿನ ವಿದೇಶಿ ವಿನಿಮಯ ಸಂಗ್ರಹ ಪ್ರಸಕ್ತ ಹಣಕಾಸು ವರ್ಷದಲ್ಲಿ (ಏಪ್ರಿಲ್‌ ನಂತರ) ಈವರೆಗೆ 1100 ಕೋಟಿ ಡಾಲರ್‌ಗಳಷ್ಟು (ರೂ.64,460 ಕೋಟಿ) ಭಾರಿ ಹೆಚ್ಚಳ ಕಂಡಿದೆ.

‘ಭಾರತದಲ್ಲಿ ಈ ಬಾರಿ ಸ್ಥಿರ ಸರ್ಕಾರ ರಚನೆಯಾಗಲಿದೆ’ ಎಂಬ ವಿಶ್ವಾಸದೊಂದಿಗೆ ಸಾಗರೋತ್ತರ ಹೂಡಿಕೆದಾರರು ದೇಶದ ಹಣಕಾಸು ಮಾರುಕಟ್ಟೆಗೆ ಡಾಲರ್‌ಗಳ ಮೂಲಕ ಮಾಡಿರುವ ದೊಡ್ಡ ಮೊತ್ತದ ಹೂಡಿಕೆಗಳೇ ವಿದೇಶಿ ವಿನಿಮಯ ಸಂಗ್ರಹದಲ್ಲಿನ ಈ ಪ್ರಮಾಣದ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಮೇ 16ರ ವೇಳೆ ದೇಶದಲ್ಲಿನ ವಿದೇಶಿ ವಿನಿಮಯ ಸಂಗ್ರಹ 31,492 ಕೋಟಿ ಡಾಲರ್‌ಗಳ (ರೂ.18,45,431 ಕೋಟಿ) ಮಟ್ಟಕ್ಕೇರಿತ್ತು. ಇದು 2011ರ ಅಕ್ಟೋಬರ್‌ ನಂತರದಲ್ಲಿ (ಆಗ 32,039 ಕೋಟಿ ಡಾಲರ್‌ಗಳಷ್ಟಿತ್ತು) ದಾಖಲಾಗಿರುವ ದೇಶದಲ್ಲಿನ ಅತ್ಯಧಿಕ ಮಟ್ಟದ ವಿದೇಶಿ ವಿನಿಮಯ ಸಂಗ್ರಹವಾಗಿದೆ.

ಮೇ ತಿಂಗಳಲ್ಲಿ ಈವರೆಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ)  440 ಕೋಟಿ ಡಾಲರ್‌ಗಳಷ್ಟು ಹೂಡಿಕೆಯನ್ನು ಷೇರುಪೇಟೆಯಲ್ಲಿ, ಬಾಂಡ್‌ಗಳಲ್ಲಿ ತೊಡಗಿಸಿದ್ದಾರೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಅಂಕಿ ಅಂಶಗಳು ಖಚಿತಪಡಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT