ADVERTISEMENT

ಸ್ನಾನಗೃಹ ಉತ್ಪನ್ನ ಮಾರುಕಟ್ಟೆ ರೊಕಾ ಕಂಪೆನಿ ಗರಿಷ್ಠ ಪಾಲು

​ಪ್ರಜಾವಾಣಿ ವಾರ್ತೆ
Published 10 ಜೂನ್ 2017, 19:30 IST
Last Updated 10 ಜೂನ್ 2017, 19:30 IST
ಸ್ನಾನಗೃಹ ಉತ್ಪನ್ನ ಮಾರುಕಟ್ಟೆ ರೊಕಾ ಕಂಪೆನಿ ಗರಿಷ್ಠ ಪಾಲು
ಸ್ನಾನಗೃಹ ಉತ್ಪನ್ನ ಮಾರುಕಟ್ಟೆ ರೊಕಾ ಕಂಪೆನಿ ಗರಿಷ್ಠ ಪಾಲು   

ಬೆಂಗಳೂರು: ದಕ್ಷಿಣ ಭಾರತದ ಮಾರುಕಟ್ಟೆ ಪ್ರವೇಶಿಸಿರುವ ರೊಕಾ ಮತ್ತು ಪ್ಯಾರಿವೇರ್‌ ಸ್ನಾನಗೃಹ ಉತ್ಪನ್ನಗಳು (ಸ್ಯಾನಿಟರಿವೇರ್‌)  ಕರ್ನಾಟಕ ಮತ್ತು ತಮಿಳುನಾಡಿನ ಸ್ಯಾನಟರಿ ಮಾರುಕಟ್ಟೆಯಲ್ಲಿ ಅರ್ಧದಷ್ಟು ಪಾಲು ಹೊಂದಿವೆ.

ಕಂಪೆನಿಯ ಸ್ನಾನಗೃಹ ಉತ್ಪನ್ನಗಳಿಗೆ ಬೆಂಗಳೂರು ಮತ್ತು ಚೆನ್ನೈನಲ್ಲಿ ಅತಿ ದೊಡ್ಡ ಮಾರುಕಟ್ಟೆಗಳಾಗಿವೆ. ಉಭಯ ರಾಜ್ಯಗಳಲ್ಲಿ ಭಾರಿ ಪ್ರಮಾಣದಲ್ಲಿ ನಡೆಯುತ್ತಿರುವ ನಿರ್ಮಾಣ ಕಾರ್ಯಗಳು ಇದಕ್ಕೆ ಕಾರಣ ಎಂದು ಕಂಪೆನಿ ಹೇಳಿದೆ.

‘ಕಂಪೆನಿಯ ಉತ್ಪನ್ನಗಳು ಕರ್ನಾಟಕದಲ್ಲಿ ಶೇ 40 ಮತ್ತು ತಮಿಳುನಾಡಿನಲ್ಲಿ ಶೇ 60 ಮಾರುಕಟ್ಟೆ ಪಾಲು ಹೊಂದಿವೆ’ ಎಂದು ರೊಕಾ ವ್ಯವಸ್ಥಾಪಕ ನಿರ್ದೇಶಕ ಕೆ.ಇ. ರಂಗನಾಥನ್‌ ಅವರು ತಿಳಿಸಿದರು.

ADVERTISEMENT

‘ಪ್ರಜಾವಾಣಿ’ಜತೆ ಮಾತನಾಡಿದ ಅವರು, ‘ಸ್ನಾನಗೃಹ ಉತ್ಪನ್ನಗಳ ತಯಾರಿಕೆಯಲ್ಲಿ ನಂ.1 ಸ್ಥಾನದಲ್ಲಿರುವ ಜಾಗತಿಕ ಕಂಪೆನಿ ರೊಕಾ, ಭಾರತದ ನಂ.1 ಪ್ಯಾರಿವೇರ್ ಕಂಪೆನಿಯನ್ನು ತೆಕ್ಕೆಗೆ ಪಡೆದ ನಂತರ ಎರಡೂ ಉತ್ತಮ ಬ್ರ್ಯಾಂಡ್‌ಗಳು ದೇಶೀಯ ಸ್ಯಾನಿಟರಿವೇರ್‌ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿವೆ’ ಎಂದರು.

‘ನಲ್ಲಿಗಳ ತಯಾರಿಕೆಯಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿರುವ ಪ್ಯಾರಿವೇರ್‌ ಈ ವಿಭಾಗದಲ್ಲಿ ಪ್ರತಿವರ್ಷ ₹200 ಕೋಟಿ ವಹಿವಾಟು ನಡೆಸುತ್ತಿದೆ.

‘ಭಾರತದ ಸ್ಯಾನಿಟರಿವೇರ್‌ ಮಾರುಕಟ್ಟೆ ₹ 3,000 ಕೋಟಿಯಷ್ಟಿದ್ದು, ಶ್ರೀಮಂತರು, ಮಧ್ಯಮ ವರ್ಗ ಮತ್ತು ಕೆಳ ಮಧ್ಯಮ ವರ್ಗದ ಗ್ರಾಹಕರ ಬೇಡಿಕೆಗೆ ತಕ್ಕಂತೆ ಸರಣಿ ಉತ್ಪನ್ನ ಹೊಂದಿದೆ’ ಎಂದರು.

ಅಮೆರಿಕ, ಮಧ್ಯ ಪ್ರಾಚ್ಯ, ಆಸ್ಟ್ರೇಲಿಯಾ, ಯುರೋಪ್‌ ಸೇರಿದಂತೆ ಅನೇಕ ರಾಷ್ಟ್ರಗಳಿಗೆ ಈ ಎರಡೂ ಉತ್ಪನ್ನಗಳನ್ನು ರಫ್ತು ಮಾಡುತ್ತಿರುವುದಾಗಿ ರಂಗನಾಥನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.