ADVERTISEMENT

ಹಟ್ಟಿ: 2 ಕಂತಿನಲ್ಲಿ ವೇತನ ಪಾವತಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 19:30 IST
Last Updated 4 ಅಕ್ಟೋಬರ್ 2012, 19:30 IST

ಹಟ್ಟಿ ಚಿನ್ನದ ಗಣಿ: ಕಾರ್ಮಿಕರ ಬಾಕಿ ವೇತನವನ್ನು ಎರಡು ಕಂತುಗಳಲ್ಲಿ ವಿತರಿಸಲಾಗುವುದು ಎಂದು ಹಟ್ಟಿ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಎ.ಕೆ.ಮೊನ್ನಪ್ಪ ಇಲ್ಲಿ ತಿಳಿಸಿದರು.

ಗುರುವಾರ ತಮ್ಮ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೊದಲ ಕಂತನ್ನು ಅ. 20ರಂದು, 2ನೇ ಕಂತನ್ನು ನ. 20ರಂದು ನೀಡಲಾಗುವುದು. ಅ. 12ರಂದು ಬೋನಸ್(ಎಕ್ಸ್‌ಗ್ರೇ ಷಿಯಾ) ವಿತರಿಸಲು ಕಂಪೆನಿ ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದರು.

ಕಾರ್ಮಿಕರ-ಅಧಿಕಾರಿಗಳ ವೇತನ ಪರಿಷ್ಕರಣೆ, ಕಚ್ಚಾ ಸಾಮಗ್ರಿ ಬೆಲೆ ಏರಿಕೆಯಿಂದ ಉತ್ಪಾದನೆ ವೆಚ್ಚವೂ ಹೆಚ್ಚಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ವಾರ್ಷಿಕ 250 ಕೋಟಿ ರೂಪಾಯಿ ತೆರಿಗೆ ಪಾವತಿಸಲಾಗುತ್ತಿದೆ. ಆದುದರಿಂದ ಕಾರ್ಮಿಕರು ಮತ್ತು ಅಧಿಕಾರಿಗಳು ಶ್ರದ್ಧೆಯಿಂದ ಕಂಪೆನಿಯ ಉನ್ನತಿಗಾಗಿ ದುಡಿಯಬೇಕು ಎಂದು ಮನವಿ ಮಾಡಿದರು.

ಕಂಪೆನಿಯ ಹಂಗಾಮಿ ಕೆಲಸಗಾರರು ಭಯ ಪಡುವುದು ಬೇಡ; ಕಂಪೆನಿ ಅವರ ಹಿರಿತನವನ್ನು ಕಾಪಾಡುತ್ತದೆ. ಅವರಿಗೆ ಅನ್ಯಾಯವಾಗುವುದಿಲ್ಲ. ಕಂಪೆನಿಯ ಸ್ಥಾಯಿ ಆದೇಶದ ಪ್ರಕಾರ ಕಾಯಂಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಮತ್ತೆ ಆರಂಭ: ಚಿತ್ರದುರ್ಗದ ಇಂಗಳದಾಳ ಗಣಿಯ ಅದಿರು ಸಂಸ್ಕರಣಾ ಘಟಕ ಪುನರಾರಂಭಿಸಲಾಗಿದೆ. ಶಿವಮೊಗ್ಗ ಜಿಲ್ಲೆ ಅಜ್ಜನಹಳ್ಳಿ ಚಿನ್ನದ ಘಟಕದ 2 ಲಕ್ಷ ಟನ್ ಚಿನ್ನ ಅದಿರನ್ನು ಇಲ್ಲಿ ಸಂಸ್ಕರಿಸಲಾಗುವುದು. ನಂತರ ತಾಮ್ರದ ಅದಿರು ಸಂಸ್ಕರಣೆ  ಉದ್ದೇಶವಿದೆ. ಎಚ್‌ಜಿಎಂಎಲ್ ವಿದೇಶ್ ಕಂಪೆನಿ ಆರಂಭಕ್ಕೆ ಸರ್ಕಾರದ ಅನುಮೋದನೆಗೆ ಕಾಯುತ್ತಿದ್ದೇ ವೆ. ವಿದೇಶದಲ್ಲೂ ಗಣಿಗಾರಿಕೆ ನಡೆಸುವ ಉದ್ದೇಶವಿದೆ ಎಂದರು.

ನೇಮಕ: 150 ಜನರ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲಾಗಿದೆ. 96 ಜನ ಲಿಂಗಸಗೂರು ತಾಲ್ಲೂಕಿನವರಿದ್ದಾರೆ. ಈ ಪೈಕಿ 70 ಮಂದಿ ಹಟ್ಟಿಯವರೇ ಆಗಿದ್ದಾರೆ. 40 ಜನ ಹಾಲಿ ಮತ್ತು ಮಾಜಿ ಕಾರ್ಮಿಕರ ಮಕ್ಕಳಿದ್ದಾರೆ ಎಂದರು.

ಕಂಪೆನಿ ಪ್ರಧಾನ ವ್ಯವಸ್ಥಾಪಕ ಎ.ಆರ್.ವಾಲ್ಮೀಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.