ADVERTISEMENT

ಹಣಕಾಸು ಮಾಹಿತಿ ಸೋರಿಕೆ ಕಂಪೆನಿಗಳದ್ದೇ ಕೈವಾಡ: ಸೆಬಿ

‘ಸೆಬಿ’ ಅಧ್ಯಕ್ಷ ಅಜಯ್‌ ತ್ಯಾಗಿ ಸ್ಪಷ್ಟನೆ

ಪಿಟಿಐ
Published 30 ಡಿಸೆಂಬರ್ 2017, 20:01 IST
Last Updated 30 ಡಿಸೆಂಬರ್ 2017, 20:01 IST

ಮುಂಬೈ: ‘ಕಂಪೆನಿಗಳಿಂದಲೇ ವಾಟ್ಸ್‌ಆ್ಯಪ್‌ನಲ್ಲಿ ಹಣಕಾಸು ಮಾಹಿತಿ ಸೋರಿಕೆ ಆಗಿದೆ’ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಅಧ್ಯಕ್ಷ ಅಜಯ್ ತ್ಯಾಗಿ ತಿಳಿಸಿದ್ದಾರೆ.

‘ಆಡಳಿತ ಮಂಡಳಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂಪೆನಿಗಳೇ ತಮ್ಮ ಹಣಕಾಸು ಮಾಹಿತಿಗಳನ್ನು ವಾಟ್ಸ್‌ಆ್ಯಪ್‌ ಮೂಲಕ ಹರಿಬಿಟ್ಟಿವೆ. ಇದಕ್ಕೆ ಹೊಣೆಯಾಗಿರುವವರು ಕಟ್ಟುನಿಟ್ಟಿನ ಕ್ರಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಒಳ ವ್ಯಾಪಾರಕ್ಕೆ ಸಂಬಂಧಿಸಿದ ಹಲವು ವಿಷಯಗಳನ್ನು ಚರ್ಚಿಸಲು ಸಮಿತಿಯೊಂದನ್ನು ರಚನೆ ಮಾಡಲಾಗಿದೆ. ಅಗತ್ಯ ಬಿದ್ದರೆ ಒಳ ವ್ಯಾಪಾರದ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಲಾಗುವುದು’ ಎಂದೂ ಹೇಳಿದ್ದಾರೆ.

ADVERTISEMENT

ಸಮಸ್ಯೆ ಸೃಷ್ಟಿಯಾಗಿರುವ ಕಂಪೆನಿಗಳ ವಿರುದ್ಧ ಹರಿಹಾಯ್ದ ಅವರು, ‘ತಂತ್ರಜ್ಞಾನದ ಎದುರು ಏನನ್ನೂ ಮುಚ್ಚಿಡಲು ಸಾಧ್ಯವಿಲ್ಲ. ಸಾರ್ವಜನಿಕವಾಗಿ  ಬಹಿರಂಗ ಮಾಡುವುದಕ್ಕೂ ಮೊದಲು ಹಣಕಾಸಿಗೆ ಸಂಬಂಧಿಸಿದ ಮಾಹಿತಿಗಳ ಗೋಪ್ಯತೆ ಕಾಯ್ದುಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿದೆ’ ಎಂದು ಕಂಪೆನಿಗಳಿಗೆ ಕಿವಿಮಾತು ಹೇಳಿದ್ದಾರೆ.

ಮಾಹಿತಿ ಸೋರಿಕೆಯಲ್ಲಿ ಲೆಕ್ಕಪರಿಶೋಧಕರು ಭಾಗಿಯಾಗಿರುವ ಸಾಧ್ಯತೆ ಇದೆಯೇ ಎನ್ನುವ ಪ್ರಶ್ನೆಗೆ, ‘ತಪ್ಪಿತಸ್ಥರು ಎಂದು ಕಂಡುಬಂದರೆ, ಯಾರೇ ಆಗಿರಲಿ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಸ್ಪಷ್ಟಪಡಿಸಿದ್ದಾರೆ.

2017ರ ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ ಆ್ಯಕ್ಸಿಸ್‌ ಬ್ಯಾಂಕ್‌ ಪ್ರಕಟಿಸಿದ ಆರ್ಥಿಕ ಸಾಧನೆಯು ವಾಟ್ಸ್‌ಆ್ಯಪ್‌ನಲ್ಲಿ ಹರಿಬಿಟ್ಟ ಮಾಹಿತಿಗೆ ಹೋಲಿಕೆ ಆಗಿದೆ.

ಈ ಬಗ್ಗೆ ಮೂರು ತಿಂಗಳ ಒಳಗಾಗಿ ತನಿಖೆ ನಡೆಸಿ, 7 ದಿನದ ಒಳಗಾಗಿ ವರದಿ ಒಪ್ಪಿಸುವಂತೆ ನಿಯಂತ್ರಣ ಮಂಡಳಿಯು ಆ್ಯಕ್ಸಿಸ್‌ ಬ್ಯಾಂಕ್‌ಗೆ ಸೂಚನೆ ನೀಡಿದೆ.

ಆ್ಯಕ್ಸಿಸ್‌ ಬ್ಯಾಂಕ್‌ನಿಂದ ಆಂತರಿಕ ತನಿಖೆ

2017ರ ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ ಆ್ಯಕ್ಸಿಸ್‌ ಬ್ಯಾಂಕ್‌ ಪ್ರಕಟಿಸಿದ ಆರ್ಥಿಕ ಸಾಧನೆಯು ವಾಟ್ಸ್‌ಆ್ಯಪ್‌ನಲ್ಲಿ ಹರಿಬಿಟ್ಟ ಮಾಹಿತಿಗೆ ಹೋಲಿಕೆ ಆಗಿದೆ. ಜುಲೈ 25 ರಂದು ಬೆಳಗ್ಗೆ 9.12ಕ್ಕೆ ವಾಟ್ಸ್‌ಆ್ಯಪ್‌ನಲ್ಲಿ ಮಾಹಿತಿ ಸೋರಿಕೆ ಆಗಿದೆ. ಅದೇ ದಿನ 4.23ಕ್ಕೆ ಬ್ಯಾಂಕ್‌ ತನ್ನ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿತ್ತು.

ಈ ಬಗ್ಗೆ ತನಿಖೆ ನಡೆಸಿದ ಷೇರುಪೇಟೆ ಮತ್ತು ಸೆಬಿ, ಒಳ ವ್ಯಾಪಾರದಿಂದಲೇ ಈ ಕೃತ್ಯ ನಡೆದಿದೆ ಎಂದು ಸ್ಪಷ್ಟಪಡಿಸಿವೆ.

ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಬಲಪಡಿಸುವಂತೆ ಸೂಚನೆ ನೀಡಿರುವ ನಿಯಂತ್ರಣ ಮಂಡಳಿ, ಮೂರು ತಿಂಗಳ ಒಳಗಾಗಿ ತನಿಖೆ ನಡೆಸಿ, 7 ದಿನದ ಒಳಗಾಗಿ ವರದಿ ಒಪ್ಪಿಸುವಂತೆ ಬ್ಯಾಂಕ್‌ಗೆ ಸೂಚನೆ ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಬಿಗೆ ಸಹಕಾರ ನೀಡುವುದಾಗಿ ಬ್ಯಾಂಕ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.