ADVERTISEMENT

ಹಣದುಬ್ಬರ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 16:00 IST
Last Updated 24 ಫೆಬ್ರುವರಿ 2011, 16:00 IST

ನವದೆಹಲಿ (ಪಿಟಿಐ): ಫೆಬ್ರುವರಿ 12ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ  ಆಹಾರ ಹಣದುಬ್ಬರ ದರವು ಶೇ 11.49ರಷ್ಟಾಗಿದೆ.  ಹಿಂದಿನ ಎರಡು ವಾರಗಳಲ್ಲಿ  ಇಳಿಕೆಯ ಹಾದಿಯಲ್ಲಿದ್ದ ಹಣದುಬ್ಬರ ದರ ಮತ್ತೆ ಶೇ 0.44ರಷ್ಟು ಹೆಚ್ಚಿದ್ದು, ಹಾಲು, ಮೊಟ್ಟೆ, ಮೀನು, ತರಕಾರಿ ಬೆಲೆಗಳು ಶೇ 14ರಷ್ಟು ತುಟ್ಟಿಯಾಗಿವೆ.

ಆದರೂ, ಮಾರ್ಚ್ ಅಂತ್ಯದ ವೇಳೆಗೆ ಒಟ್ಟಾರೆ ಹಣದುಬ್ಬರ ದರ ಶೇ 7ರಷ್ಟು ಕುಸಿತ ಕಾಣಲಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ. ‘ದೇಶದಲ್ಲಿ ಆಹಾರ ಧಾನ್ಯಗಳ ದಾಸ್ತಾನು ಅಗತ್ಯ ಪ್ರಮಾಣದಲ್ಲಿ ಇದ್ದು, ಈ ಹಣಕಾಸು  ವರ್ಷದ ಅಂತ್ಯದ ವೇಳೆಗೆ  ಹಣದುಬ್ಬರ ದರ ಖಂಡಿತ ಒಂದಂಕಿಗೆ ಇಳಿಯಲಿದೆ’ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಹೇಳಿದ್ದಾರೆ. ಫೆಬ್ರುವರಿ ಮೊದಲ ವಾರದಲ್ಲಿ ಆಹಾರ ಹಣದುಬ್ಬರದ ದರ ಶೇ 13.07ರಿಂದ ಶೇ 11.05ಕ್ಕೆ ಕುಸಿದಿತ್ತು. ಆದರೆ, ಪ್ರಸಕ್ತ ಅವಧಿಯಲ್ಲಿ ಮತ್ತೆ ಏರಿಕೆ ದಾಖಲಿಸಿದೆ. ಮುಖ್ಯವಾಗಿ ಹಾಲಿನ ದರ ಶೇ 5ರಷ್ಟು ಹೆಚ್ಚಿದೆ.

ನೈಸರ್ಗಿಕ ವಿಕೋಪ, ಅಕಾಲಿಕ ಮಳೆ ಮತ್ತಿತರ ಕಾರಣಗಳಿಂದ ಉತ್ಪಾದನೆ ಕಡಿಮೆಯಾಗಿರುವುದೇ ಕಳೆದ 18 ತಿಂಗಳಿಂದಲೂ ಹಣದುಬ್ಬರ ದರ ಏರಿಕೆ ಹಾದಿಯಲ್ಲಿ ಮುಂದುವರೆಯಲು ಕಾರಣ ಎಂದು ಮೊಂಟೆಕ್ ಸಿಂಗ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.