ADVERTISEMENT

ಹಿಂದುಳಿದ ಜಿಲ್ಲೆಗಳಲ್ಲಿ ಉದ್ದಿಮೆಗೆ ಉತ್ತೇಜನ

​ಪ್ರಜಾವಾಣಿ ವಾರ್ತೆ
Published 23 ಜೂನ್ 2011, 19:30 IST
Last Updated 23 ಜೂನ್ 2011, 19:30 IST
ಹಿಂದುಳಿದ ಜಿಲ್ಲೆಗಳಲ್ಲಿ ಉದ್ದಿಮೆಗೆ ಉತ್ತೇಜನ
ಹಿಂದುಳಿದ ಜಿಲ್ಲೆಗಳಲ್ಲಿ ಉದ್ದಿಮೆಗೆ ಉತ್ತೇಜನ   

ಬೆಂಗಳೂರು: `ಪ್ರಾದೇಶಿಕ ಅಸಮತೋಲನ ನಿವಾರಿಸಲು ಹಿಂದುಳಿದ ಜಿಲ್ಲೆಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದೆ ಬರುವಂತಹ ಉದ್ಯಮಿಗಳಿಗೆ ಸರ್ಕಾರ ವಿಶೇಷ ಸವಲತ್ತುಗಳನ್ನು ನೀಡಲಿದೆ~ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುರುವಾರ ಇಲ್ಲಿ ಭರವಸೆ ನೀಡಿದರು.

 ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಉದ್ಯೋಗ ಭವನದಲ್ಲಿ ಸುಮಾರು 1.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ `ಕಾಸಿಯಾ ಸಭಾಂಗಣ~ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

 `2009-14ರ ಕೈಗಾರಿಕಾ ನೀತಿಯನ್ವಯ ರಾಜ್ಯದಲ್ಲಿ ಹೊಸ ಉದ್ಯಮಗಳನ್ನು ಸ್ಥಾಪಿಸಲು ಬಂಡವಾಳ ಹೂಡುವಂತಹ ಕೈಗಾರಿಕೋದ್ಯಮಿಗಳಿಗೆ ಸರ್ಕಾರ ಈಗಾಗಲೇ ಸೂಕ್ತ ರಿಯಾಯಿತಿ ಹಾಗೂ ಉತ್ತೇಜನ ನೀಡುತ್ತಿದೆ. ಇನ್ನು ಮುಂದೆ ತಾಲ್ಲೂಕು ಕೇಂದ್ರಗಳಲ್ಲಿಯೂ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಇನ್ನೂ ಹೆಚ್ಚಿನ ನೆರವು ನೀಡಬೇಕು ಎಂಬುದರ ಅರಿವು ಕೂಡ ಸರ್ಕಾರಕ್ಕಿದೆ~ ಎಂದು ಅವರು ಹೇಳಿದರು.

 `ಕೈಗಾರಿಕೆಗಳಿಗೆ ಕೃಷಿಗೆ ಅನುಪಯುಕ್ತವಾದಂತಹ ಒಣ ಭೂಮಿ ಬಳಕೆ ಮಾಡಿಕೊಳ್ಳುವುದು ತಪ್ಪಲ್ಲ. ಆದರೆ, ಕೆಲವು ಬುದ್ಧಿಜೀವಿಗಳು ಪರಿಸರ ವಾದವನ್ನೇ ಮುಂದಿಟ್ಟುಕೊಂಡು ದೊಡ್ಡ ಯೋಜನೆಗಳಿಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಇಂತಹ ಯೋಜನೆಗಳಿಂದ ಶೇ 90ರಷ್ಟು ಜನರಿಗೆ ಅನುಕೂಲವಾಗುವುದಾದಲ್ಲಿ ವಿರೋಧ ವ್ಯಕ್ತಪಡಿಸುವವರು ಕೂಡ ಧಾರಾಳತನ ಪ್ರದರ್ಶಿಸಬೇಕು~ ಎಂದು ಮನವಿ ಮಾಡಿದರು.

 ಆರ್ಥಿಕ ಸಮಸ್ಯೆ ಎದುರಿಸುತ್ತಿರುವ `ಕಾಸಿಯಾ~ಗೆ 10 ಕೋಟಿ ರೂಪಾಯಿ ನೆರವು ನೀಡುವಂತೆ ಸಂಘದ ಅಧ್ಯಕ್ಷ ಎಸ್.ಎಸ್. ಬಿರಾದರ್ ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ಅವರು, `ಯಾರು ಕೂಡ ಲಕ್ಷ ಲೆಕ್ಕದಲ್ಲಿ ನೆರವು ಕೇಳುತ್ತಿಲ್ಲ. ಎಲ್ಲರೂ ಕೋಟಿ ಕೋಟಿ ನೆರವು ಕೇಳುತ್ತಿದ್ದಾರೆ. ನನಗೆ ಕೇಂದ್ರ ಸರ್ಕಾರ ಇನ್ನೂ ನೋಟುಗಳನ್ನು ಮುದ್ರಣ ಮಾಡಲು ಅನುಮತಿ ಕೊಟ್ಟಿಲ್ಲ! ದೇವರ ದಯೆಯಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ~ ಎಂದರು.

 ಬಂಡವಾಳ ಹೂಡಿಕೆದಾರರ ಸಮಾವೇಶ: `2012ರ ಜೂನ್ 4 ಮತ್ತು 5ರಂದು ಎರಡನೇ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲು ಸರ್ಕಾರ ನಿರ್ಧರಿಸಿದ್ದು, ಅದಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

1 ಕೋಟಿ ಬಿಡುಗಡೆ: `ಕಾಸಿಯಾ~ಗೆ ಬಜೆಟ್‌ನಲ್ಲಿ ಪ್ರಕಟಿಸಿದ 2 ಕೋಟಿ ರೂಪಾಯಿ ನೆರವಿನಲ್ಲಿ ಸರ್ಕಾರ 1 ಕೋಟಿ ಬಿಡುಗಡೆ ಮಾಡಿದ್ದು, ಬಾಕಿ ಉಳಿದ ಇನ್ನೊಂದು ಕೋಟಿ ರೂಪಾಯಿಗಳನ್ನು ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದ ಅವರು, ಸಂಘದ ಸಮಸ್ಯೆಗಳನ್ನು ಬಗೆಹರಿಸಲು ದುಂಡು ಮೇಜಿನ ಸಭೆ ನಡೆಸಲು ಗಮನಹರಿಸಲಾಗುವುದು ಎಂದು ಆಶ್ವಾಸನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.