ADVERTISEMENT

ಹೊಸ ದಾಖಲೆ ಬರೆದ ‘ಕೈಗಾ’ ಸ್ಥಾವರ

ಮೊದಲ ಘಟಕದಲ್ಲಿ 766 ದಿನಗಳಿಂದ ನಿರಂತರವಾಗಿ ವಿದ್ಯುತ್‌ ಉತ್ಪಾದನೆ

ಸದಾಶಿವ ಎಂ.ಎಸ್‌.
Published 17 ಜೂನ್ 2018, 18:47 IST
Last Updated 17 ಜೂನ್ 2018, 18:47 IST
ಕಾರವಾರ ತಾಲ್ಲೂಕಿನ ಕೈಗಾದಲ್ಲಿರುವ ಅಣು ವಿದ್ಯುತ್ ಉತ್ಪಾದನಾ ಕೇಂದ್ರ
ಕಾರವಾರ ತಾಲ್ಲೂಕಿನ ಕೈಗಾದಲ್ಲಿರುವ ಅಣು ವಿದ್ಯುತ್ ಉತ್ಪಾದನಾ ಕೇಂದ್ರ   

ಕಾರವಾರ: ತಾಲ್ಲೂಕಿನ ಕೈಗಾದಲ್ಲಿರುವ ಅಣು ವಿದ್ಯುತ್ ಉತ್ಪಾದನಾ ಸ್ಥಾವರದ ಮೊದಲ ಘಟಕವು 766 ದಿನಗಳಿಂದ ನಿರಂತರವಾಗಿ ವಿದ್ಯುತ್ ಉತ್ಪಾದನೆ ಮಾಡಿ ಹೊಸ ದಾಖಲೆ ನಿರ್ಮಿಸಿದೆ. ಈ ಸಾಧನೆ ಮಾಡಿದ ದೇಶದ ಮೊದಲ ಹಾಗೂ ಪ್ರಪಂಚದ ನಾಲ್ಕನೇ ಕೇಂದ್ರ ಇದಾಗಿದೆ.

ಈ ಘಟಕದಲ್ಲಿ 2016ರ ಮೇ 13ರಂದು ಬೆಳಿಗ್ಗೆ 9.20ಕ್ಕೆ ವಿದ್ಯುತ್ ಉತ್ಪಾದನೆ ಆರಂಭವಾಯಿತು. ಅಂದಿನಿಂದ ನಿರಂತರವಾಗಿ ಚಾಲನೆಯಲ್ಲಿದ್ದು, ರಾಜಸ್ಥಾನದ ರಾವತ್‌ ಭಾಟದಲ್ಲಿರುವ ಅಣು ವಿದ್ಯುತ್ ಕೇಂದ್ರದ ದಾಖಲೆಯನ್ನು ಹಿಂದಿಕ್ಕಿದೆ.

ಆ ಕೇಂದ್ರದ ಐದನೇ ಘಟಕವು 2012ರ ಆಗಸ್ಟ್ 2ನೇ ತಾರೀಕಿನಿಂದ 2014ರ ಸೆಪ್ಟೆಂಬರ್ 17ರವರೆಗೆ ಒಟ್ಟು 765 ದಿನ ನಿರಂತರ ಚಾಲನೆಯಲ್ಲಿತ್ತು.

ADVERTISEMENT

ಕೈಗಾದಲ್ಲಿ ತಲಾ 220 ಮೆಗಾವಾಟ್ ಸಾಮರ್ಥ್ಯದ ನಾಲ್ಕು ಘಟಕಗಳಿವೆ. ದೇಶದಲ್ಲಿ ಅಣುಶಕ್ತಿ ಆಧರಿಸಿ ಅತಿ ಹೆಚ್ಚು ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸುವ ಮೂರನೇ ದೊಡ್ಡ ಕೇಂದ್ರ ಇದಾಗಿದೆ. ಈ ಕೇಂದ್ರವನ್ನು ದಕ್ಷಿಣ ಪವರ್ ಗ್ರಿಡ್‌ಗೆ ಸಂಪರ್ಕಿಸಲಾಗಿದ್ದು, ನಮ್ಮ ರಾಜ್ಯವೂ ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು ಮತ್ತು ಪುದುಚೇರಿಗೂ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ.

ಈ ಸಾಧನೆಯ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ಕೈಗಾದ ಸ್ಥಾನಿಕ ನಿರ್ದೇಶಕ ಸಂಜಯ್ ಕುಮಾರ್, ‘ಸ್ಥಾವರದ ಮೊದಲ ಘಟಕವು ವಿಶ್ವದಲ್ಲೇ ಎರಡನೇ ಅಥವಾ ಮೂರನೇ ಸ್ಥಾನಕ್ಕೇರುವ ಸಾಧ್ಯತೆಯಿದೆ’ ಎಂದು ಅಭಿಪ್ರಾಯಪಟ್ಟರು.

‘ಭಾರತೀಯ ಪರಮಾಣು ಪ್ರಾಧಿಕಾರದ ನಿಯಮಗಳ ಪ್ರಕಾರ ಅಣು ವಿದ್ಯುತ್ ಉತ್ಪಾದನಾ ಘಟಕವು ಎರಡು ವರ್ಷಗಳವರೆಗೆ ಕಾರ್ಯ ನಿರ್ವಹಿಸಬಹುದು. ಒಂದು ವೇಳೆ ಘಟಕವು ಉತ್ತಮ ಸ್ಥಿತಿಯಲ್ಲಿದ್ದರೆ, ಅದನ್ನು ಪರಿಶೀಲಿಸಿ ಮತ್ತೆ ನಾಲ್ಕು ತಿಂಗಳು ಕಾರ್ಯನಿರ್ವಹಿಸಲು ಅನುಮತಿ ನೀಡಬಹುದು’ ಎಂದು ಹೇಳಿದರು.

‘ಘಟಕ ಸುಸ್ಥಿತಿಯಲ್ಲಿರುವ ಕಾರಣ ಹೆಚ್ಚುವರಿಯಾಗಿ ನಾಲ್ಕು ತಿಂಗಳು ಕಾರ್ಯನಿರ್ವಹಿಸಲು ಅನುಮತಿ ಸಿಗುವ ನಿರೀಕ್ಷೆಯಿದೆ. ಅನುಮತಿ ಸಿಕ್ಕಲ್ಲಿ 850 ದಿನ ಚಾಲನೆಯಲ್ಲಿಡುವ ಆಶಯದಲ್ಲಿದ್ದೇವೆ. ಹೀಗಾದರೆ ಮತ್ತೊಂದು ದಾಖಲೆಗೆ ಪಾತ್ರವಾಗಲಿದೆ’ ಎಂದು ತಿಳಿಸಿದರು.

ಮೊದಲ ಮೂರು ಸ್ಥಾವರಗಳು

ಇಂಗ್ಲೆಂಡ್‌ನ ಹೇಶಮ್ (940 ದಿನ), ಕೆನಡಾದ ಒಂಟಾರಿಯಾದಲ್ಲಿರುವ ಪಿಕರಿಂಗ್ (894 ದಿನ) ಹಾಗೂ ಸ್ಕಾಟ್ಲೆಂಡ್‌ನ ಟೋರ್ನೆಸ್ ಅಣು ವಿದ್ಯುತ್ ಘಟಕಗಳು (825 ದಿನ) ನಿರಂತರವಾಗಿ ವಿದ್ಯುತ್‌ ಉತ್ಪಾದನೆ ಮಾಡಿ ವಿಶ್ವದಲ್ಲಿ ಮೊದಲ ಮೂರು ಸ್ಥಾನದಲ್ಲಿವೆ.

ಕೈಗಾ ಸ್ಥಾವರದ ಎರಡನೇ ಘಟಕ (464 ದಿನ), ಮೂರನೇ ಘಟಕ (467 ದಿನ) ಹಾಗೂ ನಾಲ್ಕನೇ ಘಟಕ 200 ದಿನಗಳಿಂದ ನಿರಂತರವಾಗಿ ವಿದ್ಯುತ್ ಉತ್ಪಾದನೆ ಮಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.