ADVERTISEMENT

ಹೊಸ ಪೆಟ್ರೋಲ್ ಬಂಕ್‌ಗೆ ನಿರ್ಬಂಧ

ಸರ್ಕಾರಿ ತೈಲ ಕಂಪೆನಿಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 22:00 IST
Last Updated 7 ಡಿಸೆಂಬರ್ 2012, 22:00 IST

ನವದೆಹಲಿ(ಪಿಟಿಐ): ಪೆಟ್ರೋಲ್ ಬಂಕ್‌ಗಳು ದೇಶದಾದ್ಯಂತ ನಾಯಿಕೊಡೆಗಳಂತೆ ಹೆಚ್ಚುತ್ತಿರುವುದರತ್ತ ವಾರೆನೋಟ ಹರಿಸಿರುವ ಕೇಂದ್ರ ಸರ್ಕಾರ, ಇದಕ್ಕೆ ಕಡಿವಾಣ ಹಾಕಲು ಮುಂದಾಗಿದೆ. ಹೊಸದಾಗಿ ಮತ್ತೆ ಪೆಟ್ರೋಲ್ ಬಂಕ್ ತೆರೆಯದಂತೆ ಸರ್ಕಾರಿ ಒಡೆತನದ ತೈಲ ಕಂಪೆನಿಗಳಿಗೆ ನಿರ್ದೇಶನ ನೀಡಿದೆ.

ಸರ್ಕಾರಿ ಒಡೆತನದ ತೈಲ ಕಂಪೆನಿಗಳು ತಮ್ಮದೇ ಬಂಡವಾಳ ಹೂಡಿ ಹೊಸ ಪೆಟ್ರೋಲ್ ಬಂಕ್‌ಗಳನ್ನು ಆರಂಭಿಸುವುದು ಸದ್ಯಕ್ಕೆ ಬೇಡ. ಒಂದೊಮ್ಮೆ ಪೆಟ್ರೋಲ್ ವಿತರಕರೇನಾದರೂ ಬಂಕ್‌ಗೆ ಅಗತ್ಯವಾದ ಬಂಡವಾಳವನ್ನು (ರೂ. 1 ಕೋಟಿಯಿಂದ ರೂ. 1.5 ಕೋಟಿ)  ಹೂಡಿಕೆ ಮಾಡಲು ಸಿದ್ಧರಿದ್ದರೆ ಮಾತ್ರ ಹೊಸ ಬಂಕ್ ಆರಂಭಕ್ಕೆ ಅವಕಾಶ ನೀಡಬಹುದು ಎಂದು ಪೆಟ್ರೋಲಿಯಂ ಸಚಿವಾಲಯ ಡಿ. 3ರಂದೇ ಸೂಚನೆ ಹೊರಡಿಸಿದೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್(ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್(ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್(ಎಚ್‌ಪಿಸಿಎಲ್) ಕೇಂದ್ರ ಸರ್ಕಾರದ ಒಡೆತನದ ಕಂಪೆನಿಗಳಾಗಿವೆ. ನಾಲ್ಕು ವರ್ಷಗಳ ಹಿಂದೆ ಈ ಸಂಸ್ಥೆಗಳಿಗೆ ಸೇರಿದ 18 ಸಾವಿರ ಪೆಟ್ರೋಲ್ ಬಂಕ್‌ಗಳಿದ್ದವು. ಈಗ ಬಂಕ್‌ಗಳ ಸಂಖ್ಯೆ 43 ಸಾವಿರಕ್ಕೂ ಅಧಿಕವಾಗಿದೆ. ಅಂದರೆ, ನಾಲ್ಕು ವರ್ಷಗಳಲ್ಲಿ 25 ಸಾವಿರ ಹೊಸ ಬಂಕ್‌ಗಳು ಆರಂಭಗೊಂಡಿವೆ. ಇದರಲ್ಲಿ ರಿಲಯನ್ಸ್  ಮತ್ತು ಎಸ್ಸಾರ್‌ನ 2500 ಪೆಟ್ರೋಲ್ ಬಂಕ್‌ಗಳು ಸೇರಿಲ್ಲ.

ಒಂದು ದೇಶ ಹೊಂದಬಹುದಾಗಿದ್ದಕ್ಕಿಂತ ಹೆಚ್ಚು ಪೆಟ್ರೋಲ್ ಬಂಕ್‌ಗಳು ಭಾರತದಲ್ಲಿವೆ. ಇದು ಇಡೀ ವಿಶ್ವದಲ್ಲಿಯೇ ಅಧಿಕ ಪ್ರಮಾಣದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.