ADVERTISEMENT

ಹೊಸ ಭತ್ತ ತಳಿ ಇಳುವರಿ: ಚೀನಾ ವಿಶ್ವ ದಾಖಲೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2011, 16:20 IST
Last Updated 19 ಸೆಪ್ಟೆಂಬರ್ 2011, 16:20 IST

ಬೀಜಿಂಗ್ (ಪಿಟಿಐ): ಚೀನಾದ ವಿಜ್ಞಾನಿಗಳು ಇತ್ತೀಚೆಗೆ ಅಭಿವೃದ್ಧಿ ಪಡಿಸಿರುವ ಮಿಶ್ರ ಭತ್ತ ತಳಿಯೊಂದು (ಹೈಬ್ರಿಡ್) ಇಳುವರಿಯಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದೆ.

`ಡಿಎಚ್2525~ ಹೆಸರಿನ ಈ ಮಿಶ್ರ ತಳಿ ಭತ್ತವನ್ನು  ಚೀನಾದ ಹುನಾನ್ ಪ್ರಾಂತ್ಯದ ಲಾಂಗೊಯ್ ಎಂಬಲ್ಲಿ ಪ್ರಾಯೋಗಿಕವಾಗಿ ಬಿತ್ತಲಾಗಿತ್ತು. ಇದು  ಪ್ರತಿ 0.067 ಹೆಕ್ಟರ್ ಪ್ರದೇಶಕ್ಕೆ  926.6 ಕೆ.ಜಿಯಂತೆ ಇಳುವರಿ ನೀಡಿದ್ದು, ವಿಜ್ಞಾನಿಗಳಲ್ಲಿ ಆಶ್ಚರ್ಯ ಮೂಡಿಸಿದೆ ಎಂದು ಅಲ್ಲಿನ ಕೃಷಿ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಚೀನಾದ ಕೃಷಿ ಸಚಿವಾಲಯದ ನೇತೃತ್ವದಲ್ಲಿ ತಜ್ಞರ ತಂಡವೊಂದು ಭತ್ತದ ತಳಿ ಬಿತ್ತಲಾಗಿದ್ದ ಸ್ಥಳಕ್ಕೆ ಭೇಟಿ ನೀಡಿ ಹೊಸ ದಾಖಲೆ  ದೃಢಪಡಿಸಿದೆ. ಆದರೆ, ಈ ದಾಖಲೆಯನ್ನು ಚೀನಾದ ಕೃಷಿ ಸಚಿವಾಲಯ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ.  ಹೊಸ ತಳಿಯಿಂದ ಪ್ರತಿ ಹೆಕ್ಟರ್‌ಗೆ 900 ಕೆ.ಜಿ ಇಳುವರಿ ಗುರಿ ಇಟ್ಟುಕೊಳ್ಳಲಾಗಿತ್ತು. ಈ ಗುರಿಯನ್ನು ಮೀರಿದ ಇಳುವರಿ ದಾಖಲಾಗಿದೆ. 

 ಆದರೆ, ಮುಂದಿನ ಎರಡು ಇಳುವರಿ ವರ್ಷದಲ್ಲಿ ತಲಾ 7 ಹೆಕ್ಟರ್ ಪ್ರದೇಶದಲ್ಲಿ ಹೊಸ ತಳಿಯನ್ನು ಬಿತ್ತಿ, ಇಳುವರಿ ಫಲಿತಾಂಶ ಖಾತರಿಗೊಳಿಸದ ನಂತರವೇ ಇದನ್ನು ಅಧಿಕೃತವಾಗಿ ಪ್ರಕಟಿಸಲು ಸಾಧ್ಯ ಎಂದು ವಿಜ್ಞಾನಿಯೊಬ್ಬರು ಹೇಳಿದ್ದಾರೆ. `ಡಿಎಚ್2525~ ತಳಿಯನ್ನು ಚೀನಾದ `ಹೈಬ್ರಿಡ್ ತಳಿಯ ಪಿತಾಮಹ ಯಾನ್ ಲಾಂಗ್‌ಪಿಂಗ್ ಅಭಿವೃದ್ಧಿಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.